More

    ಕಾರ್ಮಿಕರಲ್ಲಿ ಕರೊನಾ ಕಣ್ಣೀರು

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಕರೊನಾ ವೈರಸ್ ಕಲಬುರಗಿ ಸೇರಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಭಯ ಮತ್ತು ಲಾಕ್ಡೌನ್ನಿಂದಾಗಿ ನಿತ್ಯ ದುಡಿಯುವ ಕಾರ್ಮಿಕರ ಕೈಗೆ ಕೆಲಸ ಸಿಗದೆ ಒಂದ್ಹೊತ್ತಿನ ಊಟಕ್ಕೂ ಪರದಾಡಬೇಕಿದ್ದು, ದಿಕ್ಕುತೋಚದೆ ಬಡ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.
    ಎಲ್ಲೆಡೆ ಕೆನ್ನಾಲಿಗೆ ಚಾಚಿರುವ ಕರೊನಾದಿಂದ ಒಂದು ಸಾವು ಕಂಡಿರುವ ಕಲಬುರಗಿಯಲ್ಲಿ ಅಕ್ಷರಶಃ ಬಂದ್ ಸ್ಥಿತಿ ಇದೆ. ಮಾಲ್, ಚಿತ್ರಮಂದಿರ, ಕೈಗಾರಿಕೆ, ಸಾರಿಗೆ ವಾಹನ, ಹೋಟೆಲ್, ಕಟ್ಟಡ, ಗಾರೆ ಕೆಲಸಗಾರರು ಹೀಗೆ ಎಲ್ಲ ಹಂತದ ಕಾರ್ಖಾನೆಗಳು, ಉದ್ಯೋಗ ಖಾತ್ರಿ ಸೇರಿ ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಸಂಸ್ಥೆಗಳು ಸಂಪೂರ್ಣ ಬಂದ್ ಆಗಿದ್ದರಿಂದ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
    ಜಿಲ್ಲೆಯಂತೂ ಸುಮಾರು 15 ದಿನಗಳಿಂದ ಬಂದ್ ಇದ್ದಂತಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಗಳನ್ನು ಪಿಡಿಒಗಳು ನಿಲ್ಲಿಸಿದ್ದಾರೆ. ಇದರಿಂದಾಗಿ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲವಾಗಿದೆ. ಇತ್ತ ಕೆಲಸವೂ ಇಲ್ಲ, ಹಣವೂ ಇಲ್ಲದೆ ಉಪವಾಸವೇ ಗತಿ ಎಂದು ಕಣ್ಣೀರು ಹಾಕುತ್ತಿದ್ದಾರೆ ಶ್ರಮಿಕ ವರ್ಗ.
    ಕರೊನಾ ವಿರುದ್ಧ ಶ್ರಮಿಸುತ್ತಿರುವ ರಾಜ್ಯ ಸರ್ಕಾರ ಕಾರ್ಮಿಕ ಕುಟುಂಬಗಳತ್ತಲೂ ಗಮನಹರಿಸಬೇಕಿದೆ. ಕೆಲಸ ಮಾಡಲಿ ಬಿಡಲಿ, ನಾಲ್ಕು ಕೋಣೆಗಳಲ್ಲಿ ಕುಳಿತು ದರ್ಬಾರ್ ಮಾಡುವ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸಂಬಳಕ್ಕೇನೂ ಕೊರತೆಯಿಲ್ಲ. ಕಾರ್ಮಿಕರಿಗೆ ಮಾತ್ರ ದುಡಿದರೆ ಸಂಬಳ.
    ಲಾಕ್ಡೌನ್ಗೆ ಒಳಗಾಗಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಕಲ್ಯಾಣ ಕರ್ನಾಟಕದ ಐದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯಲು ಹೋಗಿದ್ದಾರೆ. ಸದ್ಯಕ್ಕೆ ಅಲ್ಲಿ ಅವರಿಗೆ ಉದ್ಯೋಗ ಇಲ್ಲ. ತಮ್ಮೂರಿಗೆ ಮರಳಬೇಕೆಂದರೂ ಸಾರಿಗೆ ಸೌಲಭ್ಯವೂ ಇಲ್ಲ.
    ಕರೊನಾದಿಂದ ಬಳಲುತ್ತಿರುವ ಕೇರಳದಲ್ಲಿ ಮುಖ್ಯಮಂತ್ರಿ ಕಾರ್ಮಿಕರಿಗಾಗಿಯೇ 20 ಸಾವಿರ ಕೋಟಿ ರೂ. ವಿಶೇಷ ಬಜೆಟ್ ಎಂದು ತೆಗೆದಿರಿಸಿದ್ದಾರಂತೆ. ನಮ್ಮ ಸರ್ಕಾರವೂ 30 ಸಾವಿರ ಕೋಟಿ ರೂ. ವಿಶೇಷ ಅನುದಾನ ಕಾದಿರಿಸಿ ಕಾರ್ಮಿಕರಿಗೆ ದಿನಕ್ಕಿಷ್ಟು ಗೌರವಧನ ಕೊಡುವ ಅಗತ್ಯವಿದೆ ಎನ್ನುತ್ತಾರೆ ಕಾರ್ಮಿಕ ಮುಖಂಡರು. ಸರ್ಕಾರ ಗಂಭೀರವಾಗಿ ಆಲೋಚಿಸಿ ಕರೊನಾ ಹೊಡೆದೋಡಿಸುವುದರ ಜತೆಗೆ ಕಾರ್ಮಿಕರಿಗೆ ಆತ್ಮಾಭಿಮಾನದ ಬದುಕು ಕಟ್ಟಿಕೊಡಲು ಸಹಾಯಹಸ್ತ ಚಾಚುವುದು ಇಂದಿನ ಅಗತ್ಯವಾಗಿದೆ.

    ಉತ್ತರ ಪ್ರದೇಶದಲ್ಲಿ ದಿನಕ್ಕೆ ರು. ಸಾವಿರ
    ಕೇರಳ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕೆ 20 ಸಾವಿರ ಕೋಟಿ ರೂ. ತೆಗೆದಿರಿಸಿದೆ. ಉತ್ತರ ಪ್ರದೇಶದಲ್ಲಿ 15 ಲಕ್ಷ ದಿನಗೂಲಿ ನೌಕರರು ಮತ್ತು 20 ಲಕ್ಷ ಕಟ್ಟಡ ಕಾರ್ಮಿಕರಿಗೆ ಪ್ರತಿನಿತ್ಯ 1000 ರೂ. ಮತ್ತು ಆಂಧ್ರಪ್ರದೇಶ ಸರ್ಕಾರ ಎಲ್ಲ ಕಾರ್ಮಿಕರಿಗೆ 1000 ರೂ. ಗೌರವಧನ ಮತ್ತು ನಿತ್ಯ ಅಗತ್ಯವಿರುವ ದಿನಸಿ ವಸ್ತುಗಳನ್ನು ಕೊಡುವುದಾಗಿ ಘೋಷಿಸಿವೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿ ತಂದರೆ ಒಳ್ಳೆಯದು ಎಂಬ ಒತ್ತಾಸೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts