More

    ಕಾರವಾರ ಮತ್ತೆ ನಾಲ್ವರಿಗೆ ಕರೊನಾ

    ಕಾರವಾರ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿಯ ಅಬ್ಬರ ಮುಂದುವರಿದಿದೆ. ಹೊರರಾಜ್ಯದಿಂದ ಆಗಮಿಸಿದ ಮತ್ತೆ ನಾಲ್ವರಲ್ಲಿ ಕೋವಿಡ್-19 ಖಚಿತವಾಗಿದೆ. ಈ ಮೂಲಕ ಸೋಂಕು ಯಲ್ಲಾಪುರ, ದಾಂಡೇಲಿ ತಾಲೂಕುಗಳಿಗೂ ವಿಸ್ತರಿಸಿದೆ.

    ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, ಇದುವರೆಗೆ 12 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 43 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 38 ಜನರು ಕಾರವಾರ ಕ್ರಿಮ್ಸ್​ನ ಕರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 100 ಶಂಕಿತರನ್ನು ಪ್ರತ್ಯೇಕವಾಗಿರಿಸಿ ಗಂಟಲ ದ್ರವದ ಮಾದರಿ ಪರಿಶೀಲನೆಗೆ ಕಳಿಸಲಾಗಿದೆ. ಮಂಗಳವಾರ ರೋಗ ಖಚಿತವಾದ ನಾಲ್ವರನ್ನೂ ಬುಧವಾರ ಕಾರವಾರ ಕರೊನಾ ವಾರ್ಡ್​ಗೆ ಕರೆತರಲಾಗುತ್ತಿದೆ.

    ಊರೆಲ್ಲ ಸುತ್ತಿ ಬಂದ: ಹಳೆಯ ದಾಂಡೇಲಿ ಮೂಲದ ವ್ಯಕ್ತಿಯಲ್ಲಿ ಕರೊನಾ ಖಚಿತವಾಗಿದೆ. ಈತ ಊರೆಲ್ಲ ಓಡಾದಿದ ಸುದ್ದಿ ಇಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಹಳೆಯ ದಾಂಡೇಲಿಯ ಕೆಲ ಭಾಗಗಳನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೊಷಿಸಿ ಜನರ ಓಡಾಟ ನಿರ್ಬಂಧಿಸಲಾಗುತ್ತಿದೆ. ದಾಂಡೇಲಿ ಮೂಲದ ಲಾರಿ ಚಾಲಕ ಗುಜರಾತ್​ಗೆ ಲಾರಿಯಲ್ಲಿ ತೆರಳಿದ್ದ. ಅಲ್ಲಿಂದ ಮಣಿಪಾಲ, ಗೋವಾ ಮಾರ್ಗವಾಗಿ ಹಳಿಯಾಳಕ್ಕೆ ಬಂದಿದ್ದ. ಅಲ್ಲಿಂದ ಬೈಕ್​ನ ಮೇಲೆ ಮೇ 14ರಂದು ದಾಂಡೇಲಿ ತಲುಪಿ ತನ್ನ ಮನೆಯಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಅಕ್ಕಪಕ್ಕದವರ ಮಾಹಿತಿಯ ಮೇರೆಗೆ ಮೇ 15ರಂದು ಆರೋಗ್ಯ ಕಾರ್ಯಕರ್ತೆಯರು ಈತನ ಮನೆಗೆ ತೆರಳಿ ಕ್ವಾರಂಟೈನ್​ಗೆ ಒಳಪಡಿಸಿ, ಗಂಟಲ ದ್ರವದ ಮಾದರಿ ಪರೀಕ್ಷೆಗೆ ಕಳಿಸಿದ್ದರು. ಮಂಗಳವಾರ ಈತನಲ್ಲಿ ರೋಗ ಇರುವುದು ಖಚಿತವಾಗಿದೆ. ಈ ಹಿಂದೆಯೂ ಈತ ಹೊರಗೆ ಓಡಾಡಿ 14 ದಿನ ಕ್ವಾರಂಟೈನ್​ಗೆ ಒಳಪಟ್ಟಿದ್ದ. ಸೂಕ್ತ ಮಾಹಿತಿ ನೀಡದೇ, ಸ್ವಯಂಪ್ರೇರಿತವಾಗಿಯೂ ದಿಗ್ಬಂಧನಕ್ಕೆ ಒಳಗಾಗದ ಹಿನ್ನೆಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಿದ್ದೇವೆ ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

    ಉಪಳೇಶ್ವರದ ಯುವತಿಗೆ ಕರೊನಾ: ಮಹಾರಾಷ್ಟ್ರ ಸೊಲ್ಲಾಪುರದಿಂದ ಮೇ 14ರಂದು ಬಂದ ಉಪಳೇಶ್ವರದ ಯುವತಿಯಲ್ಲಿ (ಪಿ-1314) ಕರೊನಾ ಸೋಂಕು ಕಂಡು ಬಂದಿದೆ. ಈ ಯುವತಿಯನ್ನು ಹಾಗೂ ಈಕೆಯ ಕುಟುಂಬದವರನ್ನು ನೇರವಾಗಿ ಮುರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಿರುವುದರಿಂದ ಸೋಂಕು ಬೇರೆಡೆ ಹಬ್ಬಿಲ್ಲ. ಜನತೆ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

    ಈವರೆಗೆ ಯಲ್ಲಾಪುರ ತಾಲೂಕಿನಲ್ಲಿ 224 ಜನರ ಮಾದರಿ ಸಂಗ್ರಹಿಸಲಾಗಿದ್ದು, 165 ಜನರ ವರದಿ ನೆಗೆಟಿವ್ ಬಂದಿದೆ. ಒಂದು ಪಾಸಿಟಿವ್ ಬಂದಿದ್ದು, ಇನ್ನು 58 ಜನರ ವರದಿಗಾಗಿ ಕಾಯಲಾಗುತ್ತಿದೆ. ಶಿರಸಿ ಉಪವಿಭಾಗದಲ್ಲಿ 322 ಜನರು ಹೊರ ರಾಜ್ಯಗಳಿಂದ ಬಂದಿದ್ದು, 292 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅವರ ಕುರಿತು ಮಾಹಿತಿ ಪಡೆದು ನಿಗಾ ವಹಿಸಲಾಗಿದೆ ಎಂದರು. ಡಿವೈಎಸ್​ಪಿ ಜಿ.ಟಿ.ನಾಯ್ಕ, ತಹಸೀಲ್ದಾರ್ ಡಿ. ಜಿ. ಹೆಗಡೆ, ಸಿಪಿಐ ಸುರೇಶ ಯಳ್ಳೂರು, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ಆಡಳಿತ ವೈದ್ಯಾಧಿಕಾರಿ ಡಾ.ರಾಮಾ ಹೆಗಡೆ, ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಟಿ. ಭಟ್ಟ ಇತರರಿದ್ದರು.

    ಜೊಯಿಡಾ ಈಗ ಕಂಟೇನ್ಮೆಂಟ್ ಜೋನ್: ತಮಿಳುನಾಡಿನ ಮದುರೈನಿಂದ ಜೊಯಿಡಾಕ್ಕೆ ಮೇ 6 ರಂದು ಆಗಮಿಸಿದ ಐವರಲ್ಲಿ ಒಬ್ಬ ಮಹಿಳೆಗೆ ಕರೊನಾ ಇರುವುದು ಖಚಿತವಾಗಿದೆ. ಅವರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಆದರೆ, ಅದಕ್ಕೂ ಪೂರ್ವದಲ್ಲಿ ಒಂದೆರಡು ದಿನ ಅವರು ಹೊರಗಡೆ ಓಡಾಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜೊಯಿಡಾದ ಆಯ್ದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಹೊನ್ನಾವರದಲ್ಲಿ ಮತ್ತೊಂದು ಪ್ರಕರಣ: ಮಹಾರಾಷ್ಟ್ರದಿಂದ ಆಗಮಿಸಿದ ನಾಲ್ವರಲ್ಲಿ ಕರೊನಾ ಇರುವುದು ಸೋಮವಾರ ಖಚಿತವಾಗಿತ್ತು. ಈಗ ಇನ್ನೊಬ್ಬ ಮಹಿಳೆಗೆ ರೋಗ ಇರುವುದು ದೃಢಪಟ್ಟಿದೆ. ಕ್ವಾರಂಟೈನ್ ಸೆಂಟರ್​ನಲ್ಲಿ ಇದ್ದ 34 ವರ್ಷದ ಮಹಿಳೆ(ಪಿ.1363) ರೋಗ ಕಂಡುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts