More

    ಕಾರಜೋಳಗೆ ಕೈತಪ್ಪುತ್ತ ಪ್ರಭಾವಿ ಖಾತೆ?

    ಅಶೋಕ ಶೆಟ್ಟರ
    ಬಾಗಲಕೋಟೆ : ರಾಜ್ಯ ಸರ್ಕಾರದ ಪ್ರಭಾವಿ ಸಚಿವ, ಡಿಸಿಎಂ ಹುದ್ದೆಯಲ್ಲಿರುವ ಮುಧೋಳ ಶಾಸಕ ಗೋವಿಂದ ಕಾರಜೋಳ ಆರು ತಿಂಗಳಿಂದ ಎರಡು ಪ್ರಭಾವಿ ಖಾತೆ ನಿರ್ವಹಿಸಿಕೊಂಡು ಬಂದಿದ್ದು, ಈಗ ಬದಲಾದ ಸನ್ನಿವೇಶದಲ್ಲಿ ಅವರ ಒಂದು ಖಾತೆ ಮೇಲೆ ತೂಗುಗತ್ತಿ ನೇತಾಡತೊಡಗಿದೆ.

    ಯಡಿಯೂರಪ್ಪ ಸರ್ಕಾರದಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಿರುವ ಕಾರಜೋಳ ಅವರಿಗೆ ಅಷ್ಟೇ ತೂಕದ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣದಂತಹ ಎರಡು ಪ್ರಭಾವಿ ಖಾತೆಗಳು ಅವರ ಹೆಗಲಿಗೆ ಬಂದಿದ್ದವು.

    ಇದೀಗ ಹತ್ತು ಶಾಸಕರಿಗೆ ಸಚಿವ ಸ್ಥಾನ ನೀಡಿದ ಬಳಿಕ ನೂತನ ಸಚಿವರು ಪ್ರಭಾವಿ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಖ್ಯವಾಗಿ ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಇರುವ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಮೇಲೆ ಕಣ್ಣಿಟ್ಟಿದ್ದು, ಅವುಗಳನ್ನು ಪಡೆಯಲು ಸಾಕಷ್ಟು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

    ಆದರೆ, ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ವೈಯಕ್ತಿಕವಾಗಿ ಲೋಕೋಪಯೋಗಿ ಇಲಾಖೆ ಮೇಲೆ ಕರಳುಬಳ್ಳಿನ ಸಂಬಂಧ ಇರುವುದರಿಂದ ಶತಾಯಗತಾಯ ಆ ಖಾತೆಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಹಾಗೊಂದು ಪರಿಸ್ಥಿತಿ ಎದುರಾದಲ್ಲಿ ಸಮಾಜ ಕಲ್ಯಾಣ ಇಲಾಖೆ ಬಿಟ್ಟುಕೊಡಲು ಮಾನಸಿಕವಾಗಿ ಸಿದ್ಧರಿದ್ದಾರೆ. ಪಿಡಬ್ಲುೃಡಿ ಬಿಟ್ಟು ಕೊಡುವ ಮನಸ್ಸು ಇಲ್ಲ ಎಂದು ಕಾರಜೋಳ ಆಪ್ತರು ಹೇಳುತ್ತಾರೆ.

    ಗೋವಿಂದ ಕಾರಜೋಳ ರಾಜಕೀಯ ಪ್ರವೇಶಕ್ಕೂ ಮುನ್ನ ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿದ್ದು, ಅಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶ ಮಾಡಿದ್ದರು. ಕಾಕತಾಳೀಯ ಎನ್ನುವಂತೆ ಇಲಾಖೆಯಿಂದ ಹೊರಬಂದು ಎರಡೂವರೆ ದಶಕಗಳ ಬಳಿಕ ಅದೇ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾರೆ. ಹೀಗಾಗಿ ಆ ಖಾತೆಯನ್ನು ಉಳಿಸಿಕೊಳ್ಳಲು ಸಚಿವರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಮಾಜ ಕಲ್ಯಾಣ ಇಲಾಖೆ ಮೂಲಕ ಸಾಕಷ್ಟು ಹೆಸರು ಮಾಡಲು ಅವಕಾಶ ಇದೆ. ಆದರೆ, ಸದ್ಯ ಸದಾಶಿವ ಆಯೋಗದ ವರದಿ ಜಾರಿಗಾಗಿ ಮಾದಿಗ ಸಮುದಾಯ ನಿರಂತರ ಹೋರಾಟ ಮಾಡುತ್ತಿದೆ. ಈ ಅವಧಿಯಲ್ಲಿ ಅದಕ್ಕೆ ಸ್ಪಂದನೆ ಸಿಗದೆ ಇದ್ದಲ್ಲಿ ಅದರ ನೇರ ಹೊಣೆ ಇಲಾಖೆ ಸಚಿವರ ಮೇಲೆಯೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಒಂದು ಖಾತೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾದಲ್ಲಿ ಸಮಾಜ ಕಲ್ಯಾಣ ಬಿಟ್ಟು ಲೋಕೋಪಯೋಗಿ ಖಾತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಒಂದೇ ಸಚಿವ ಸ್ಥಾನ
    ರಾಜ್ಯ ರಾಜಕಾರಣದಲ್ಲಿ ಬಾಗಲಕೋಟೆ ಜಿಲ್ಲೆ ಪ್ರಭಾವ ಹೆಚ್ಚಿದೆ. ಯಾವುದೇ ಸರ್ಕಾರ ಇದ್ದರೂ ಇಬ್ಬರು, ಮೂವರು ಸಚಿವರು ಆಗಿರುವ ಸಂದರ್ಭಗಳು ಇವೆ. ಇತ್ತೀಚಿನ ವರ್ಷಗಳಲ್ಲಿ ಹಿಂದಿನ ಬಿಎಸ್‌ವೈ, ಸದಾನಂದಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಸರ್ಕಾರದಲ್ಲಿ ಇಬ್ಬರು ಸಚಿವರು ಇದ್ದರು. ಸಮ್ಮ್ಮಿಶ್ರ ಸರ್ಕಾರದಲ್ಲಿ ಅದು ಕೈತಪ್ಪಿತ್ತು. ಇದೀಗ ಯಡಿಯೂರಪ್ಪ ಸರ್ಕಾರದಲ್ಲಿ ಗೋವಿಂದ ಕಾರಜೋಳ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಮುರುಗೇಶ ನಿರಾಣಿ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತಾದರೂ ಅದು ಈವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಒಬ್ಬರೇ ಸಚಿವರು ಇದ್ದರೂ ಎರಡು ಪ್ರಭಾವಿ ಖಾತೆಗಳು ಜಿಲ್ಲೆಯ ಮಂತ್ರಿಗೆ ಸಿಕ್ಕಿದ್ದವು. ಇದೀಗ ಒಂದು ಖಾತೆ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.

    ಬಾಗಲಕೋಟೆ ರಾಜಕೀಯ ಶಕ್ತಿ ಕೇಂದ್ರ ಎನ್ನುವುದರಲ್ಲಿ ಅನುಮಾನ ಇಲ್ಲ. ಸದ್ಯ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಮುಧೋಳ ಶಾಸಕ ಗೋವಿಂದ ಕಾರಜೋಳ ಅವರಿಗೆ ಸಿಕ್ಕಿದೆ. ವಿಪಕ್ಷದ ಪ್ರಭಾವಿ ಸ್ಥಾನಗಳು ಜಿಲ್ಲೆಗೆ ದೊರೆತಿವೆ. ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ಜಿಲ್ಲೆಯ ಎಸ್.ಆರ್.ಪಾಟೀಲ ಹಾಗೂ ಕೆಳಮನೆ ವಿಪಕ್ಷ ನಾಯಕರಾಗಿ ಬಾದಾಮಿ ಶಾಸಕ ಸಿದ್ದರಾಮಯ್ಯ ಆಯ್ಕೆ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts