More

    ಕಾಮಗಾರಿಗಳಿಗೆ ಶೀಘ್ರವೇ ಷರತ್ತುಬದ್ಧ ಅನುಮತಿ

    ಧಾರವಾಡ: 2ನೇ ಹಂತದ ಲಾಕ್​ಡೌನ್ ಅವಧಿ ಮೇ 3ರವರೆಗೂ ವಿಸ್ತರಣೆ ಆಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಬಾರದು. ಕಾರ್ವಿುಕರಿಗೂ ಕನಿಷ್ಠ ಜೀವನ ನಿರ್ವಹಣೆ ಮಾಡಲು ಉದ್ಯೋಗ ಸಿಗಬೇಕು ಎನ್ನುವ ಆಶಯದೊಂದಿಗೆ ಕಂಟೈನ್​ವೆುಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯಲ್ಲಿ ಕಟ್ಟಡ, ರಸ್ತೆ, ಸೇತುವೆ ಮೊದಲಾದ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೋಕೋ ಪಯೋಗಿ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು, ನಿರ್ವಿುತಿ ಕೇಂದ್ರ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಿರ್ಮಾಣ ಕಾಮಗಾರಿಗಳನ್ನು ಅನುಮತಿ ಪಡೆದು ಕೈಗೊಳ್ಳಬಹುದು. ಕಾರ್ವಿುಕರಿಗೆ ಕೆಲಸದ ಸ್ಥಳದಲ್ಲೇ ಎಲ್ಲ ಸೌಕರ್ಯ ಕಲ್ಪಿಸಬೇಕು. ಸಾಮಾಜಿಕ ಅಂತರ, ಶುಚಿತ್ವ ಕಾಪಾಡಬೇಕು. ಪ್ಲಂಬರ್​ಗಳು, ಮೋಟಾರ್ ಮೆಕ್ಯಾನಿಕ್​ಗಳು ಹಾಗೂ ಪೂರಕ ಚಟುವಟಿಕೆಗಳ ಕಾರ್ವಿುಕರಿಗೂ ಈ ವಿನಾಯ್ತಿ ಅನ್ವಯಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮುಂದುವರಿಯಲಿ. ಲಾಕ್​ಡೌನ್ ನಿಯಮಗಳು ಉಲ್ಲಂಘನೆಯಾಗದಂತೆ ನರೇಗಾ ಯೋಜನೆಯಡಿ ವೈಯಕ್ತಿಕ ಚಟುವಟಿಕೆಗಳು ನಡೆಯುತ್ತಿವೆ. ಅದೇ ರೀತಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.
    ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆ ಬೆಳಗಾವಿ, ಧಾರವಾಡ, ಗದಗ ಹಾಗೂ ಭಾಗಶಃ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಇಲ್ಲಿನ ಕಾಮಗಾರಿಗಳು ನಡೆಯಬೇಕು. ಪಡೇಸೂರು, ಶಾನವಾಡ ಸೇರಿ ವಿವಿಧ

    ಗ್ರಾಮಗಳಿಗೆ ಗುಳೇ ಹೋಗಿದ್ದ ಹಲವು ಜನ ಮರಳಿದ್ದಾರೆ. ಅಂತಹ ಜನರ ಮಾಹಿತಿ ಸಂಗ್ರಹಿಸಿ ಆರೋಗ್ಯ ತಪಾಸಣೆ ಮಾಡಬೇಕು ಎಂದರು.
    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಎಸ್​ಡಿಆರ್​ಎಫ್ ನಿಧಿಯಡಿ 436 ವಲಸೆ ಕಾರ್ವಿುಕರಿಗೆ ಸರ್ಕಾರದ ಹಾಸ್ಟೇಲ್​ಗಳಲ್ಲಿ ವಸತಿ ಕಲ್ಪಿಸಿ ಊಟ, ಉಪಾಹಾರ, ಬಟ್ಟೆ ನೀಡಲಾಗಿದೆ. ಇಟ್ಟಿಗೆ ಭಟ್ಟಿ ಕಾರ್ವಿುಕರಿಗೆ ಅಂದಾಜು 3,000 ಆಹಾರ ಕಿಟ್​ಗಳನ್ನು ವಿತರಿಸಲಾಗಿದೆ ಎಂದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಕಳೆದ ಸಾಲಿನಲ್ಲಿ ಕಾಮಗಾರಿಗಳನ್ನು ಮುಂದುವರಿಸಲಾಗಿದೆ. ಲಾಕ್​ಡೌನ್ ನಿಯಮಗಳು ವ್ಯತ್ಯಯವಾಗದಂತೆ ಗ್ರಾಮೀಣ ಭಾಗದಲ್ಲಿ ನರೇಗಾ ಚಟುವಟಿಕೆಗಳು ನಡೆಯುತ್ತಿವೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಗಾಗಿ ಕಾಯುತ್ತಿದ್ದೇವೆ. ಶೀಘ್ರದಲ್ಲೇ ಈ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು. ಶಾಸಕರು, ಜಲಮಂಡಳಿ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಕ್ರಮ ಬಿಗಿಗೊಳಿಸಲು ಸೂಚನೆ
    ಧಾರವಾಡ:
    ರೈತರು, ವ್ಯಾಪಾರಸ್ಥರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಕೃಷಿ ಮಾರುಕಟ್ಟೆ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರ ಅವಕಾಶ ನೀಡಿದೆ. ಇದನ್ನು ದುರುಪಯೋಗಪಡಿಸಿಕೊಂಡರೆ ಅಂತಹ ವರ್ತಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ಲೈಸೆನ್ಸ್ ರದ್ದುಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು. ಎಪಿಎಂಸಿ ವರ್ತಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಎಪಿಎಂಸಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದಿನವಿಡೀ ವ್ಯಾಪಾರ ಚಟುವಟಿಕೆಗಳನ್ನು ನಡೆಸಬಹುದು. ನೆರೆ ರಾಜ್ಯದವರೂ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಅವಕಾಶವಿದೆ. ಮೆಣಸಿನಕಾಯಿ ಹೊರತುಪಡಿಸಿ ಎಲ್ಲ ಕೃಷಿ ಉತ್ಪನ್ನಗಳ ಆನ್​ಲೈನ್ ಟೆಂಡರ್ ಕಾರ್ಯ ನಡೆದಿದೆ. ಈ ಅವಕಾಶ ದುರುಪಯೋಗ ಮಾಡಿಕೊಂಡು ಅಶಿಸ್ತಿನಿಂದ ವರ್ತಿಸಿದರೆ ನಿರ್ದಾಕ್ಷಿಣ್ಯ ಕ್ರಮ

    ಕೈಗೊಳ್ಳಬೇಕು ಎಂದು ಸೂಚಿಸಿದರು. ಎಪಿಎಂಸಿ ವರ್ತಕರು ಮಾತನಾಡಿ, ಜಿಲ್ಲೆಯಲ್ಲಿ ಮೆಣಸಿನಕಾಯಿ ಫಸಲು ಬಂದಿದ್ದು, ರೈತರಿಗೆ ತಮ್ಮ ಉತ್ಪನ್ನ ಮಾರಾಟಕ್ಕೆ ಎರಡು ವಾರಗಳ ಕಾಲ ಅವಕಾಶ ನೀಡಿ ನಂತರ ನೆರೆ ರಾಜ್ಯಗಳ ಮೆಣಸಿನಕಾಯಿ ಉತ್ಪನ್ನ ಆಮದು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಂಪುಟ ಸಭೆಯಲ್ಲಿ ಕೈಗಾರಿಕೆಗಳ ಸಮಸ್ಯೆ ಚರ್ಚೆ
    ಧಾರವಾಡ:
    ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಆರ್ಥಿಕ ಮತ್ತು ಔದ್ಯೋಗಿಕ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಕೈಗಾರಿಕೆ ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಚಿಂತಿಸಲಾಗಿದೆ. ಏ. 20ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕೋದ್ಯಮಗಳ ಸವಾಲುಗಳ ಕುರಿತು ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಲಾಕ್​ಡೌನ್ ಪಾಲನೆ ಜತೆಗೆ ಭವಿಷ್ಯದ ಆರ್ಥಿಕ, ಉದ್ಯೋಗದ ಸವಾಲುಗಳನ್ನು ಒಟ್ಟಿಗೆ ಎದುರಿಸುವ ಇಕ್ಕಟ್ಟಿನಲ್ಲಿ ಇದ್ದೇವೆ. ಏ. 20ರ ನಂತರ ಕೆಲ ಕೈಗಾರಿಕೆಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ರಾಜ್ಯಗಳಿಂದ ಅಭಿಪ್ರಾಯ ಕೇಳಿದೆ. ಕೇಂದ್ರದೊಂದಿಗೆ ಈ ಕುರಿತು ಪತ್ರ ವ್ಯವಹಾರ ಮಾಡಲಾಗುತ್ತಿದೆ ಎಂದರು.

    ವಿದ್ಯುತ್, ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳ ಶುಲ್ಕ ಪಾವತಿ, ಸಾಲದ ಮೇಲಿನ ಬಡ್ಡಿ ವಿನಾಯಿತಿ ಸೇರಿ ಹಲವು ವಿಚಾರಗಳ ಕುರಿತು ಸಂಪುಟ ಸಭೆಯಲ್ಲಿ ರ್ಚಚಿಸಲಾಗುವುದು ಎಂದರು.

    ಬೇಲೂರು ಕೈಗಾರಿಕೆ ಅಭಿವೃದ್ಧಿ ಪ್ರದೇಶದ ರಾಜು ಪಾಟೀಲ ಮಾತನಾಡಿ, ಕೈಗಾರಿಕೋದ್ಯಮಿಗಳ ಸಂಘದಿಂದ ಕಾರ್ವಿುಕರಿಗೆ ಸಹಾಯ ಮಾಡುತ್ತಿದ್ದೇವೆ. ಎಲ್ಲ ಕಾರ್ವಿುಕರಿಗೂ ಮಾರ್ಚ್ ತಿಂಗಳ ವೇತನ ನೀಡಿದ್ದೇವೆ. ಮುಂದೆ ವೇತನ ನೀಡುವ ನಿರ್ಧಾರವನ್ನು ಕೈಗಾರಿಕೆಗಳಿಗೆ ಬಿಡಬೇಕು. ಆರ್ಥಿಕ ಸಂಕಷ್ಟ, ಉದ್ಯೋಗಿಗಳು ಮತ್ತು ಉದ್ಯೋಗದಾತರ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.

    ಲಕ್ಕಮನಹಳ್ಳಿ ಕೈಗಾರಿಕೆ ಪ್ರದೇಶದ ನಾಗರಾಜ ಯಲಿಗಾರ ಮಾತನಾಡಿ, ಕೃಷಿಕರಿಗೆ ನೀಡಿರುವ ವಿನಾಯಿತಿ ಮಾದರಿಯಲ್ಲೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

    ರಮೇಶ ಪಾಟೀಲ, ಟೈವಾಕ್ ಸಂಸ್ಥೆಯ ಸುರೇಶ್, ಶ್ರೀಕಾಂತ ತಿಟೆ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಶಂಕರ

    ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts