More

    ಕಾನೂನು ವಿವಿ ವ್ಯಾಪ್ತಿಯ ವಾಲಿಬಾಲ್ ಟೂರ್ನಿ- ಬೆಂಗಳೂರಿನ ಅಲ್ ಅಮೀನ್ ಕಾಲೇಜಿಗೆ ಪ್ರಶಸ್ತಿ

    ದಾವಣಗೆರೆ: ಬೆಂಗಳೂರಿನ ಅಲ್ ಅಮೀನ್ ಕಾನೂನು ಕಾಲೇಜು, ಮಂಗಳವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ರಾಜ್ಯ ಕಾನೂನು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರಕಾಲೇಜು ವಾಲಿಬಾಲ್ ಟೂರ್ನಿಯ ಪ್ರಶಸ್ತಿ ಪಡೆದುಕೊಂಡಿದೆ.
    ರಾಜನಹಳ್ಳಿ ಲಕ್ಷ್ಮಣಪ್ಪ ಕಾನೂನು ಕಾಲೇಜು ಟೂರ್ನಿಯ ಆತಿಥ್ಯ ವಹಿಸಿತ್ತು. ಅಲ್ ಅಮೀನ್ ಕಾಲೇಜು ಹಾಗೂ ಕೋಲಾರದ ಬಸವಶ್ರೀ ಕಾನೂನು ಕಾಲೇಜು ನಡುವಿನ ಅಂತಿಮ ಹಣಾಹಣಿ ಕುತೂಹಲ ಮೂಡಿಸಿತ್ತು. (25-24, 25-23) ನೇರ ಸೆಟ್‌ಗಳಿಂದ ಅಲ್ ಅಮೀನ್ ಕಾಲೇಜು ಎರಡನೇ ಬಾರಿಗೆ ಪ್ರಶಸ್ತಿಗೆ ಭಾಜನವಾಯಿತು. ಬಸವಶ್ರೀ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು.
    ಮೈಸೂರಿನ ವಿದ್ಯಾವಿಕಾಸ್ ಕಾನೂನು ಕಾಲೇಜು ಹಾಗೂ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಕ್ರಮವಾಗಿ ತೃತೀಯ ಹಾಗೂ ನಾಲ್ಕನೇ ಬಹುಮಾನ ಪಡೆದವು. ಎರಡು ದಿನಗಳ ಕಾಲ ನಡೆದ ಟೂರ್ನಿಯಲ್ಲಿ 36 ಕಾಲೇಜುಗಳ 356 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆದವು.
    ಬಸವಶ್ರೀ ಕಾನೂನು ಕಾಲೇಜಿನ ಕೆ.ಎ.ಹರೀಶ ಬೆಸ್ಟ್ ಆಲ್‌ರೌಂಡರ್ ಹಾಗೂ ಅಲ್ ಅಮೀನ್ ಕಾನೂನು ಕಾಲೇಜಿನ ಪಿ. ಸೈಯದ್ ಪಾಷಾ ಅತ್ಯುತ್ತಮ ದಾಳಿಕಾರ ಪ್ರಶಸ್ತಿ ಪಡೆದರು. ಸಂಜೆ ಹಮ್ಮಿಕೊಂಡಿದ್ದ ಸಮಾರೋಪದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಬಹುಮಾನ ವಿತರಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಜಿ.ಈಶ್ವರಪ್ಪ, ಆಟದ ಮೈದಾನಗಳು ಎಂದರೆ ತರಗತಿ ಕೊಠಡಿಗಳಿದ್ದ ಹಾಗೇನೆ. ವಿದ್ಯಾರ್ಥಿಗಳು ಶೈಕ್ಷಣಿಕ ದೃಢತೆ ಜತೆಗೆ ದೈಹಿಕ ದೃಢತೆಯನ್ನೂ ಸಾಧಿಸಬೇಕು. ನೀವು ಉತ್ತಮ ನ್ಯಾಯವಾದಿ, ನ್ಯಾಯಮೂರ್ತಿ ಆಗಲು ಇವೆರಡೂ ಅಂಶಗಳತ್ತ ಕೇಂದ್ರೀಕರಿಸುವುದು ಅತ್ಯಗತ್ಯ ಎಂದರು.
    ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ ಮಾತನಾಡಿ ವಿದೇಶಗಳಲ್ಲಿ ಐದು- ಆರನೇ ತರಗತಿಯಲ್ಲಿ ಇದ್ದಾಗಲೇ ಮಕ್ಕಳನ್ನು ಕೆಲವರು ದತ್ತು ಪಡೆದು ಕ್ರೀಡೆಗಳಿಗೆ ಒತ್ತು ನೀಡುತ್ತಾರೆ. ನಮ್ಮ ದೇಶದಲ್ಲೂ ಈ ವ್ಯವಸ್ಥೆ ಬಂದರೆ ಬಡ ಪ್ರತಿಭಾವಂತರಿಗೆ ಅನುಕೂಲವಾಗಲಿದೆ ಎಂದು ಆಶಿಸಿದರು.
    ಸಿದ್ದರಾಮಯ್ಯ, ಜಗದೀಶ ಶೆೆಟ್ಟರ್ ಉತ್ತಮ ನ್ಯಾಯವಾದಿಗಳಾಗಿ ರಾಜಕಾರಣಿಗಳಾಗಿದ್ದಾರೆ. ವಕೀಲರು ಉತ್ತಮ ಕ್ರೀಡಾ ಸ್ಪೂರ್ತಿ ಹೊಂದಿದಲ್ಲಿ ರಾಜಕಾರಣ ಸೇರಿ ಉನ್ನತ ಹುದ್ದೆಗೆ ಏರಲು ಸಾಧ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸ್ಪರ್ಧೆ, ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯುವ ಅಗತ್ಯವಿದೆ ಎಂದರು.
    ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ ಡಾ.ಎಂ. ಸೋಮಶೇಖರಪ್ಪ ಮಾತನಾಡಿ ಟೂರ್ನಿ ಆಯೋಜನೆಯಾದ ವಾರದಲ್ಲೇ ಕಾಲೇಜಿನ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದರು.
    ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಾಲಿದ್ ಖಾನ್ ಮಾತನಾಡಿದರು. ಪ್ರಾಧ್ಯಾಪಕ ಡಾ.ಜಿ.ಎಸ್. ಯತೀಶ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪವನ್ ಇದ್ದರು. ಅಲ್ ಅಮೀನ್ ಕಾಲೇಜಿನ ಮನು, ಬಸವಶ್ರೀ ಕಾಲೇಜಿನ ಕಿಶೋರ್ ಅನಿಸಿಕೆ ಹಂಚಿಕೊಂಡರು. ಟೂರ್ನಿಯಲ್ಲಿ ತೀರ್ಪುಗಾರರಾಗಿ ಶಿವಶಂಕರ್, ಚೇತನ್, ಖಲೀಲ್ ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts