More

    ಕಾನೂನು ಮುಂದೆ ಎಲ್ಲರೂ ಸಮಾನರು

    ಮೂಡಲಗಿ, ಬೆಳಗಾವಿ: ಸಂವಿಧಾನವು ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಹಾಗೂ ಕಾನೂನು ಮುಂದೆ ಎಲ್ಲ ಭಾರತೀಯರನ್ನು ಸಮಾನರನ್ನಾಗಿ ಮಾಡಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ದೀಪಕ ಹವಳೆ ಅಭಿಪ್ರಾಯಪಟ್ಟರು.

    ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂವಿಧಾನ ರಚನೆಯ ನಂತರ ಭಾರತವು ಸಮಾಜವಾದಿ, ಜಾತ್ಯತೀತ ರಾಷ್ಟ್ರವೂ ಕೂಡ ಆಗಿದೆ. ಸಂವಿಧಾನ ರಚನೆಗೆ ಎರಡು ವರ್ಷ 16 ದಿನ ಸಮಯ ಹಾಗೂ 6.40 ಕೋಟಿ ರೂ. ಖರ್ಚಾಗಿದ್ದು, ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಇದೂ ಒಂದು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಅವರು ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಸ್ವಾತಂತ್ರ್ಯ ನಂತರ ದೇಶಕ್ಕೆ ಒಂದು ಕಾನೂನು ಚೌಕಟ್ಟಿನ ಅವಶ್ಯಕತೆ ಇತ್ತು. ಅದನ್ನು ಪೂರೈಸಲು ಸಂವಿಧಾನ ರೂಪಗೊಂಡಿದೆ. ದೇಶವಾಸಿಗಳು ಸಂವಿಧಾನದ ಕನಿಷ್ಠ ಅರಿವು ಪಡೆದುಕೊಳ್ಳಬೇಕೆಂದರು. ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು. ಎನ್.ಎಸ್.ಎಸ್.ಘಟಕಾಧಿಕಾರಿ ಡಾ.ಎಸ್.ಎಲ್.ಚಿತ್ರಗಾರ, ಡಾ.ಬಿ.ಸಿ.ಪಾಟೀಲ, ಗ್ರಂಥಪಾಲಕ ಬಸವಂತ ಬರಗಾಲಿ, ಪ್ರೊ ಎಸ್.ಸಿ.ಮಂಟೂರ, ವೆಂಕಟೇಶ ಪಾಟೀಲ, ರಮೇಶ ಖಾನಪ್ಪಗೋಳ ಇತರರಿದ್ದರು.

    ಉಜ್ವಲ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಿ: ಇಟಗಿ: ಸಂವಿಧಾನದ ಮೌಲ್ಯ ಸಿದ್ಧಾಂತ ಗೌರವಿಸುವ ಮೂಲಕ ದೇಶದ ಘನತೆ ಹೆಚ್ಚಿಸಬೇಕು ಎಂದು ಪ್ರಾಚಾರ್ಯ ಶ್ರೀಧರ ಶಾಸ್ತ್ರಿ ಹೇಳಿದರು.
    ಇಲ್ಲಿನ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಹಾಗೂ ಬಿ.ಎಂ.ಸಾಣಿಕೊಪ್ಪ ಪದವಿ ಮಹಾವಿದ್ಯಾಲಯದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಮತದಾರರ ಜಾಗೃತಿ ವೇದಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳಿಗೆ ಬದ್ಧರಾಗುವ ಮೂಲಕ ಉಜ್ವಲ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕು ಎಂದರು.
    ಶಿಕ್ಷಕರಾದ ಎಸ್.ಸಿ.ಹಿರೇಮಠ, ಬಿ.ಕೆ.ನಾವಲಗಟ್ಟಿ ಮಾತನಾಡಿದರು. ಇಎಲ್‌ಸಿ/ವಿಎಎಫ್ ಕ್ಲಬ್ ಸಂಚಾಲಕ ಎಸ್.ಕೆ. ಕುರಗುಂದ ಸಂವಿಧಾನದ ಪೂರ್ವ ಪೀಠಿಕೆ ಬೋಧಿಸಿದರು. ಪದವಿ ಕಾಲೇಜು ಪ್ರಾಚಾರ್ಯ ಆರ್.ಬಿ.ಹುಣಶೀಕಟ್ಟಿ, ಎಸ್.ಬಿ. ಮಠದ, ಕೆ.ಟಿ. ತಳವಾರ, ವಿ.ಎಲ್. ನಾಯ್ಕ, ಎ.ಎಲ್. ಸುಣಗಾರ, ಬಿ.ಆರ್. ಗೌರಕ್ಕನವರ, ವಿದ್ಯಾರ್ಥಿ ದೀಪಾ ಹೊಂಗಲ, ಕುಮಾರ ಆನಂದ ಪುಂಡಿ, ಕುಮಾರಿ ಈರಮ್ಮ ಹೊಂಗಲ ಇತರರು ಇದ್ದರು.

    ಡಾ.ಅಂಬೇಡ್ಕರ್ ಸಮಾನತೆಯ ಹರಿಕಾರ: ಚನ್ನಮ್ಮ ಕಿತ್ತೂರು: ನಮ್ಮ ಸಂವಿಧಾನವು ಜಗತ್ತಿನಲ್ಲೇ ಅತಿದೊಡ್ಡ ಸಂವಿಧಾನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಸಮಾಜದಲ್ಲಿ ಸಮಾನತೆಯ ಹರಿಕಾರ ಎಂದು ಎನಿಸಿಕೊಂಡಿದ್ದಾರೆ ಎಂದು ಪ್ರಾಚಾರ್ಯ ಡಾ. ಜಿ.ಕೆ. ಭೂಮನಗೌಡರ ಹೇಳಿದರು. ಪಟ್ಟಣದ ಕಿ.ನಾ.ವಿ.ವ. ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸಂವಿಧಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ಸಮಾಜದ ರಕ್ಷಣೆಯನ್ನು ಎಲ್ಲ ಜನರಿಗೂ ನೀಡುವ ಕಾರ್ಯವನ್ನು ನಮ್ಮ ಸಂವಿಧಾನವು ಮಾಡುತ್ತಿದೆ. ಅಂತಹ ಮಹಾನ್ ಕಾರ್ಯವು ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ. ಬಾಬುರಾಜೇಂದ್ರ ಪ್ರಸಾದ್, ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್.ಅಂಬೇಡ್ಕರ್ ಮಾಡಿದ್ದಾರೆ. ಸಂವಿಧಾನವನ್ನು ಕೇವಲ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳಲ್ಲಿ ರಚಿಸಿದ್ದು, ಒಂದು ಅಚ್ಚರಿಯೇ ಸರಿ ಎಂದರು. ಡಾ. ಕೆ.ಆರ್. ಮೆಳವಂಕಿ ಹಾಗೂ ಪ್ರೊ. ಸಿ.ಎಂ.ದಡ್ಡೀಕರ ಪ್ರಾಸ್ತಾವಿಕ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನವು ಜಗತ್ತಿಗೆ ಮಾದರಿಯಾಗಿದೆ ಎಂದರು. ಎಂ.ಜಿ. ಹಿರೇಮಠ, ಪ್ರೊ. ಎಚ್.ಕೆ. ನಾಗರಾಜ,ಪ್ರೊ. ಸಿ.ಎಂ.ಗರಗದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts