More

    ಕಾಣದ ಸಾಮಾಜಿಕ ಅಂತರ, ನಿಲ್ಲದ ಓಡಾಟ

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಜಿಲ್ಲೆಯಲ್ಲಿ ಅಟ್ಟಹಾಸ ಮುಂದುವರಿಸಿದ ಕರೊನಾ ಮಕ್ಕಳಿಗೂ ಅಂಟಿ ಭಯ ಸೃಷ್ಟಿಸಿದೆ. ಎರಡು ಮಕ್ಕಳೂ ಸೇರಿ ಸೋಂಕಿತರ ಸಂಖ್ಯೆ 16 ಆಗಿದೆ. ಕರೊನಾದಿಂದ ರಕ್ಷಿಸಿಕೊಳ್ಳಲು ಯಾರೂ ಮನೆಯಿಂದ ಹೊರಬರಬೇಡಿ ಎಂಬ ಜಿಲ್ಲಾಡಳಿತದ ಮನವಿಗೆ ಕಲಬುರಗಿ ಜನ ಕ್ಯಾರೆ ಎನ್ನುತ್ತಿಲ್ಲ.
    ಜಿಲ್ಲೆಯಲ್ಲಿ ಸೋಂಕಿಗೆ ಮಾ.10ಕ್ಕೆ ಸಂಭವಿಸಿದ ಮೊದಲ ಸಾವು ಹೊರತುಪಡಿಸಿದರೆ, ಮೃತಪಟ್ಟ ಇನ್ನಿಬ್ಬರು ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದವರ ಜತೆ ನೇರ ಸಂಪರ್ಕ ಹೊಂದಿದ್ದರು.
    ಜಿಲ್ಲಾಡಳಿತಕ್ಕೆ ಲಭ್ಯ ಮಾಹಿತಿ ಪ್ರಕಾರ, ಈ ಸಭೆಗೆ ಹೋಗಿ ಬಂದವರು 26. ಈ ಸಂಖ್ಯೆ ಹೆಚ್ಚೂ ಇರಬಹುದು. ಯಾರು ದೆಹಲಿಗೆ ಹೋಗಿ ಬಂದಿದ್ದೀರೋ ಖುದ್ದು ತಪಾಸಣೆಗೆ ಒಗಾಗುವಂತೆ ಸೂಚಿಸಲಾಗಿದೆ. ಈಗಾಗಲೇ ಪರೀಕ್ಷೆಗೆ ಒಳಗಾದ 26 ಜನರ ವರದಿ ನೆಗೆಟಿವ್ ಬಂದಿದ್ದರೂ ಇವರ ಜತೆ ಸಂಪರ್ಕ ಹೊಂದಿರುವವರಿಗೆ ಕರೊನಾ ಪಾಸಿಟಿವ್ ಬರುತ್ತಿರುವುದು ತಲೆನೋವು ತಂದಿಟ್ಟಿದೆ. ಸಂಪರ್ಕ ಇರುವವರಿಗೆ ಹೇಗೆ ಸೋಂಕು ಬಂದಿದೆ ಎನ್ನುವುದರ ಪತ್ತೆ ಆಗಬೇಕಿದೆ. ಅಲ್ಲದೆ ಈ 26 ಜನರನ್ನು ಮರು ಪರೀಕ್ಷೆಗೆ ಒಳಪಡಿಸುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
    ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದರೂ ಜನರ ಓಡಾಟ ಮಾತ್ರ ಮುಂದುವರಿದಿದೆ. ಇವರನ್ನು ನಿಯಂತ್ರಿಸಲು ಮುಂದಾಗಬೇಕಿರುವ ಪೊಲೀಸರೂ ಮೊದಲಿನಷ್ಟು ಆಸಕ್ತಿ ವಹಿಸುತ್ತಿಲ್ಲ. ಕಾಟಾಚಾರಕ್ಕೆ ಒಂದೆರಡು ಕಡೆ ನಿಂತು ಕೆಲ ವಾಹನ ತಪಾಸಿಸಿ ಹೋಗಿ ಬಿಡುತ್ತಾರೆ. ಇನ್ನು ಪ್ರಮುಖ ವೃತ್ತಗಳಲ್ಲಿ ಕೆಎಸ್ಆರ್ಪಿ ತುಕಡಿ ಹಾಕಿದ್ದು, ತಮಗೆ ಸೂಚಿಸಿದ ಕೆಲಸ ಮಾತ್ರ ಮಾಡುತ್ತಾರೆ.
    ಕರೊನಾ ನಿಯಂತ್ರಣಕ್ಕೆ ಮನೆಯಲ್ಲಿರುವುದೇ ದಿವ್ಯೌಷಧ. ಆದರೂ ಸುಶಿಕ್ಷಿತರು ಮತ್ತು ಯುವಕರು ಅರ್ಥ ಮಾಡಿಕೊಳ್ಳದೆ ಓಡಾಡುತ್ತಿದ್ದಾರೆ. ನಿಷೇಧಾಜ್ಞೆ ಇದೆ ಎನ್ನುವುದೂ ಇವರ ಅರಿವಿಗೆ ಬರುತ್ತಿಲ್ಲ. ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ನಿರ್ಭಿಡೆಯಿಂದ ಓಡಾಡುತ್ತಿವೆ. ಜನರನ್ನು ಮನಬಂದಂತೆ ತುಂಬಿಕೊಂಡು ಹೋಗುವ ಆಟೋಗಳೂ ಈಗ ಕಣ್ಣಿಗೆ ಬೀಳುತ್ತಿವೆ. ಕಿರಾಣಿ ಅಂಗಡಿ, ತರಕಾರಿ ಮಾರಾಟ ಸ್ಥಳ, ಹಣ್ಣಿನ ಅಂಗಡಿಗಳ ಮುಂದೆ ಜನತೆ ಗುಂಪು-ಗುಂಪಾಗಿ ನಿಲ್ಲುತ್ತಿದ್ದು, ಸಾಮಾಜಿಕ ಅಂತರ ಕಾಣದಾಗಿದೆ.
    ಕರೊನಾ ನಿಯಂತ್ರಣ ಕೇವಲ ಸರ್ಕಾರದ ಕರ್ತವ್ಯ ಅಲ್ಲ. ನಮ್ಮ ಕರ್ತವ್ಯವೂ ಹೌದು ಎಂಬುದನ್ನು ಜನ ಅರಿತುಕೊಳ್ಳಬೇಕು. ಜ್ವರ, ನೆಗಡಿ, ಕೆಮ್ಮು, ಕಫ, ಶೀತ ಇರುವಂಥವರು ತಕ್ಷಣವೇ ತೆರಳಿ ಚಿಕಿತ್ಸೆ ಪಡೆಯಬೇಕು. ದ್ವಿಚಕ್ರ ವಾಹನಗಳಲ್ಲಿ ಇಬ್ಬರಲ್ಲ ಮೂವರು ಕುಳಿತು, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ ಮಜಾ ಮಾಡುತ್ತ ಓಡಾಡುತ್ತಿರುವವರೂ ಕಾಣುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ ಪೊಲೀಸರು ತಡೆಯುತ್ತಿಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ಬಂದಿದ್ದರಿಂದ ಎಲ್ಲರೂ ಎಚ್ಚರದಿಂದ ಇರುವ ಅಗತ್ಯವಿದೆ. ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದ್ದು, ಜನ ತಮ್ಮಷ್ಟಕ್ಕೆ ತಾವು ಕಟ್ಟುನಿಟ್ಟಿನ ನಿಯಮ ಹಾಕಿಕೊಳ್ಳುವುದು ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts