More

    ಕಾಡುಪ್ರಾಣಿಯಿಂದಾದ ಹಾನಿಗೆ ಪರಿಹಾರ ಹೆಚ್ಚಿಸಿ

    ವಿಜಯವಾಣಿ ಸುದ್ದಿಜಾಲ ಶಿರಸಿ: ರೈತರ ಬೆಳೆಗಳನ್ನು ಹಾನಿ ಮಾಡುತ್ತಿರುವ ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸುವ ಜತೆಗೆ ಬೆಳೆ ಹಾನಿ ಪರಿಹಾರದ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಭಾಗದ ರೈತರು ಶುಕ್ರವಾರ ಶಿರಸಿ ಡಿಎಫ್​ಒ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

    ತಾಲೂಕಿನಲ್ಲಿ ಅರಣ್ಯ ಪ್ರದೇಶದ ಮಧ್ಯೆ ರೈತರು ಜಮೀನು ಹೊಂದಿದ್ದು, ಕಾಡುಪ್ರಾಣಿಗಳಿಂದ ಪದೇ ಪದೆ ಹಾನಿಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಪರಿಹಾರ ನೀಡಲಾಗಿದೆ. ಆದರೆ, ಇಲಾಖೆ ನೀಡುತ್ತಿರುವ ಪರಿಹಾರ ಅರೆಕಾಸಿನ ಮಜ್ಜಿಗೆಯಂತಾಗಿದೆ. ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ರೈತರು ಆಗ್ರಹಿಸಿದರು.

    ಅರಣ್ಯದಲ್ಲಿ ನೆಡುತೋಪು ಮಾಡುವಾಗ ಸ್ಥಳೀಯ ಸಸಿಗಳನ್ನು ನೆಡಬೇಕು. ರೈತರ ಜಮೀನಿನ ಸುತ್ತ ತಂತಿ ಬೇಲಿ, ಅಗಳ ನಿರ್ವಿುಸಿಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಜೋಡಿಸಿ ಜಮೀನಿಗೆ ಭದ್ರತೆ ಒದಗಿಸಬೇಕು. ಹುಲಿ, ಚಿರತೆಗಳಿಂದ ಸಾಕು ಪ್ರಾಣಿಗಳು ಸಾವನ್ನಪ್ಪಿದಾಗ ಹಾಲಿ ಇರುವ ಪರಿಹಾರಕ್ಕಿಂತ ಹೆಚ್ಚಿನ ಹಣ ನೀಡಬೇಕು. ಅರಣ್ಯ ಅತಿಕ್ರಮಣ ಪ್ರಕರಣ ಶೀಘ್ರ ಇತ್ಯರ್ಥಪಡಿಸಿ ಮಂಜೂರಿ ನೀಡಬೇಕು ಎಂಬ ಬೇಡಿಕೆಯನ್ನು ಒಳಗೊಂಡ ಮನವಿಯನ್ನು ಡಿಎಫ್​ಒ ಎಸ್.ಜಿ. ಹೆಗಡೆ ಅವರಿಗೆ ನೀಡಿ ಒತ್ತಾಯಿಸಿದರು.

    ಈ ವೇಳೆ ಜಾನ್ಮನೆ ಜಿಪಂ ಸದಸ್ಯೆ ಪ್ರಭಾವತಿ ಗೌಡ, ದೇವನಳ್ಳಿ ಗ್ರಾಪಂ ಅಧ್ಯಕ್ಷೆ ಮಧುಮತಿ ನಾಯ್ಕ, ಸದಸ್ಯ ನಾರಾಯಣ ಹೆಗಡೆ, ಪ್ರಮುಖರಾದ ಆರ್.ವಿ. ಹೆಗಡೆ ಚಿಪಗಿ, ಸುನೀಲ ಭಟ್ಟ, ವಿನಯ ಹೆಗಡೆ, ಪ್ರದೀಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

    ಬೆಳೆ ಹಾನಿಯಾದ ವೇಳೆ ರೈತರು ಅರ್ಜಿ ಸಲ್ಲಿಸಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರಸಕ್ತ ವರ್ಷ 477 ಪ್ರಕರಣಕ್ಕೆ ಸಂಬಂಧಿಸಿ 24 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಪರಿಹಾರ ಮೊತ್ತ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ನೀಡಲಾಗಿದೆ. ಕಾನೂನಿನ ಇತಿಮಿತಿಯೊಳಗೆ ರೈತರಿಗೆ ಸಮಸ್ಯೆ ಆಗದ ರೀತಿ ಕ್ರಮವಹಿಸಲಾಗುವುದು. | ಎಸ್.ಜಿ. ಹೆಗಡೆ ಡಿಎಫ್​ಒ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts