More

    ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ

    ಮೂಡಿಗೆರೆ: ಕಾಡಾನೆ ಹಾವಳಿ ತಡೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆ ಮತ್ತು ಜಮೀನಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್​ನಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಕಾಫಿ ಮಂಡಳಿ ಕಚೇರಿಗೆ ಬೀಗ ಜಡಿದು ಸಿಬ್ಬಂದಿಯನ್ನು ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಬೆಳಗ್ಗೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ತಹಸೀಲ್ದಾರ್ ನಾಗರಾಜ ಅವರಿಗೆ ಮನವಿ ಸಲ್ಲಿಸಿದರು. ಸರ್ಫೆಸಿ ಕಾಯ್ದೆಯಿಂದ ರೈತರನ್ನು ಹೊರಗಿಟ್ಟು ಸಂಪೂರ್ಣ ಸಾಲ ಮನ್ನಾ ಮಾಡಬೇಕು. 4 ಚಕ್ರದ ವಾಹನ ಹೊಂದಿರುವ ಬಡವರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ರದ್ದು ಪಡಿಸಬಾರದು ಎಂದು ಒತ್ತಾಯಿಸಿದರು.

    ನಂತರ ಕಾಫಿ ಮಂಡಳಿ ಕಚೇರಿಗೆ ಬೀಗ ಜಡಿದು ಸಿಬ್ಬಂದಿಯನ್ನು ಹೊರ ಹಾಕಿದರು. ಅತಿವೃಷ್ಟಿಯಿಂದ ಜಮೀನು, ಬೆಳೆ ಹಾನಿ ಸಮೀಕ್ಷೆಯಲ್ಲಿ ಹಾಸನ ಜಿಲ್ಲೆಯಲ್ಲಿ ಎಲ್ಲ ರೈತರಿಗೂ ಪರಿಹಾರ ವಿತರಿಸಲಾಗಿದೆ. ಮೂಡಿಗೆರೆಯಲ್ಲಿ ಸಮೀಕ್ಷೆ ನಡೆಸಿದ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದರಿಂದ ಪರಿಹಾರ ವಿತರಿಸಿಲ್ಲ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಅಧಿಕಾರಿ ಶಿವರಾಮ್ ಅವರನ್ನು ಅಮಾನತುಪಡಿಸುವಂತೆ ಪಟ್ಟು ಹಿಡಿದರು. ಕಾಫಿ ಮಂಡಳಿಗೆ ಕಚೇರಿಗೆ ಪ್ರತಿಭಟನಾಕಾರರು ತೆರಳಿದಾಗ ಅಧಿಕಾರಿ ಕಚೇರಿಯಲ್ಲಿರಲಿಲ್ಲ. ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅಧಿಕಾರಿ ಶಿವರಾಮ್ ಅವರಿಗೆ ಕರೆ ಮಾಡಿ ಬೆಳೆ ಸಮೀಕ್ಷೆ ನಡೆಸಿದ ವರದಿಯ ಪ್ರತಿ ನೀಡುವಂತೆ ಕೇಳಿದಾಗ, ನಾನು ಯಾರಿಗೂ ವರದಿ ಕೊಡುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ. ನಾನು ಹಾಗೆಯೇ ಸಮೀಕ್ಷೆ ನಡೆಸಿ ವರದಿ ಕೊಡುವುದು. ನಾನು ಹೇಗೆ ಕೊಟ್ಟರೂ ನಿಮಗೇನು ಎಂದು ಉಡಾಫೆಯಾಗಿ ಮಾತನಾಡಿದರು. ಇದರಿಂದ ಕೋಪಗೊಂಡ ಬಿ.ಬಿ.ನಿಂಗಯ್ಯ ತಕ್ಷಣ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದರು.

    ಜಿಲ್ಲಾಧಿಕಾರಿ ಸೂಚನೆಯಂತೆ ತಹಸೀಲ್ದಾರ್ ನಾಗರಾಜು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು ಪ್ರತಿಭಟನೆ ಸ್ಥಗಿತಗೊಳಿಸಲಿಲ್ಲ. ಬಳಿಕ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಬಿ.ಬಿ.ನಿಂಗಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಕಾಫಿ ಮಂಡಳಿ ಅಧಿಕಾರಿ ಶಿವರಾಮ್ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ, ಕಾಫಿ ಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮರ್ಪಕವಾಗಿ ಬೆಳೆ ಸಮೀಕ್ಷೆ ನಡೆಸುವಂತೆ ಸೂಚಿಸುವುದಾಗಿಯೂ ಭರವಸೆ ನೀಡಿದ ನಂತರ ಬೀಗ ತೆಗೆದು ಸಿಬ್ಬಂದಿ ಕೆಲಸ ಮಾಡಲು ಅವಕಾಶ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts