More

    ಕವಿಗೆ ಚಿಂತನಾಶೀಲ ಮನಸ್ಸು ಮುಖ್ಯ

    ಹುಣಸೂರು: ಸಮಾಜದಲ್ಲಿನ ಅನಿಷ್ಟ ಸಂಗತಿಗಳಿಗೆ ಚಿಂತನಾಶೀಲ ಕವಿ ತನ್ನ ಕಾವ್ಯದ ಮೂಲಕ ಸಂವೇದನಾಶೀಲ ಸ್ಪಂದನೆ ನೀಡದಿದ್ದರೆ ಆತನ ಕವಿತೆ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚು ಎಂದು ಸಾಹಿತಿ ನಾ.ದಿವಾಕರ ಅಭಿಪ್ರಾಯಪಟ್ಟರು.

    ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಟ್ಯಾಲೆಂಟ್ ಎಜುಕೇಷನ್ ಟ್ರಸ್ಟ್, ಅಂಗಳ ಸಾಹಿತ್ಯ ಪ್ರಕಾಶನ ಸಹಯೋಗದಲ್ಲಿ ಕವಿ ಶ್ರಮಕುಮಾರ್ ಅವರ ‘ಒಂದು ಕೆಂಡದಂತ ಸಂಜೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಚಲನಶೀಲ ಸಮಾಜದ ಆಗುಹೋಗುಗಳನ್ನು ಅರಿತು ಸಾತ್ವಿಕ ರೀತಿಯಲ್ಲಿ ಸಾಂತ್ವನ ನೀಡುವ ಮನಸ್ಸು ಚಿಂತನಾಶೀಲ ಕವಿಗೆ ಇರಬೇಕು. ಸಮಾಜದಲ್ಲಿನ ಚಲನಶೀಲತೆ ನಮ್ಮ ಮನಸ್ಸನ್ನು ಉದ್ದೀಪನಗೊಳಿಸಿದರೆ, ಜಡತ್ವ ನಮ್ಮ ಮನಸ್ಸನ್ನು ಕೆಣಕುತ್ತದೆ. ಸಮಾಜದಲ್ಲಿನ ಅಸಮಾನತೆ, ಶ್ರೇಣಿಕೃತ ವ್ಯವಸ್ಥೆ, ದೌರ್ಜನ್ಯ ಎಲ್ಲವನ್ನು ಕವಿ ಮಂಥನದೊಂದಿಗೆ ಪರಿಹಾರ ನೀಡಬೇಕು. ಯುವ ಕವಿ ಶ್ರಮಕುಮಾರ್ ತಮ್ಮ ಕವನ ಸಂಕಲನದಲ್ಲಿ ಇಂತಹ ಹಲವು ಆಲೋಚನೆಗಳನ್ನು ನೀಡಿದ್ದಾರೆ. ಪ್ರೀತಿ, ಪ್ರೇಮ, ಬಂಡಾಯ, ಜೀವನ, ಬದುಕು ಎಲ್ಲದಕ್ಕೂ ಸಾತ್ವಿಕ ಸ್ಪಂದನೆಯೊಂದಿಗೆ ಸಮಾಜವನ್ನು ಎಚ್ಚರಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

    ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇಂತಹ ಪ್ರತಿಭೆಗಳಿದ್ದು ಅವರನ್ನು ಗುರುತಿಸಿ ವೇದಿಕೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

    ನಿರ್ದೇಶಕ ಶಶಾಂಕ್ ಸೋಗಾಲ್ ಕವನ ಸಂಕಲನ ಬಿಡುಗಡೆ ಮಾಡಿದರು. ವಿದ್ಯಾಸಂಸ್ಥೆಯ ಮುಖ್ಯಸ್ಥ ನವೀನ್ ರೈ, ಜೆ.ಮಹದೇವ್, ಪ್ರದೀಪ್ ಮುಮ್ಮುಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts