More

    ಕಳೆದುಕೊಂಡ ವಸ್ತುಗಳು ಸಿಕ್ಕವು…

    ಗದಗ: ಪತ್ತೆಯಾದ ವಸ್ತುಗಳ ಹಿಂದಿರುಗಿಸುವಿಕೆ ಹಾಗೂ ಪ್ರದರ್ಶನ (ಪ್ರಾಪರ್ಟಿ ರಿಟರ್ನ್ ಪರೇಡ್)ವನ್ನು ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿ, ವಸ್ತುಗಳನ್ನು ಕಳೆದುಕೊಂಡಿದ್ದ ಮಾಲೀಕರಿಗೆ ತಲುಪಿಸುವ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಕ್ಷಮತೆ ಮೆರೆದಿದೆ. 2019ರ ನ. 1ರಿಂದ 2020ರ ನ. 20ವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳನ್ನು ಭೇದಿಸಿ 39,24,379 ರೂ. ಮೌಲ್ಯದ 656.5 ಗ್ರಾಂ ಚಿನ್ನಾಭರಣ, 2.265 ಕೆಜಿ ಬೆಳ್ಳಿ, 23 ಬೈಕ್​ಗಳು, 4 ನಾಲ್ಕು ಚಕ್ರದ ವಾಹನಗಳನ್ನು ವಶಕ್ಕೆ ಪಡೆದು, ಮೂಲ ಮಾಲೀಕರಿಗೆ ಒಪ್ಪಿಸಲಾಗಿದೆ.

    ಕಳೆದುಕೊಂಡಿದ್ದ ವಸ್ತು ಪುನಃ ಕೈ ಸೇರಿದ್ದರಿಂದ ದೂರುದಾರರು ಹರ್ಷ ವ್ಯಕ್ತಪಡಿಸಿದರು. ಚಿನ್ನಾಭರಣ ಹಿಡಿದುಕೊಂಡು ನಿಟ್ಟುಸಿರು ಬಿಟ್ಟರು. ಜತೆಗೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಮಾತನಾಡಿ, ಜಿಲ್ಲೆಯ ಒಟ್ಟು 50 ಕೇಸ್​ಗಳ ಪೈಕಿ 39,24,379 ರೂ. ಮೌಲ್ಯದ 656.5 ಗ್ರಾಂ ಚಿನ್ನಾಭರಣಗಳು ಹಾಗೂ 23 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಮೂಲ ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

    ಮುಂಡರಗಿ ತಾಲೂಕಿನ ಹೆಸರೂರ ಗ್ರಾಮದ ಆದಿಶಕ್ತಿ ದೇವಸ್ಥಾನದಲ್ಲಿ ಮೂರ್ತಿಗೆ ಹಾಕಿದ್ದ ಚಿನ್ನಾಭರಣಗಳು ಎರಡು ತಿಂಗಳ ಹಿಂದೆ ಕಳವಾಗಿದ್ದವು. ಕೇಸ್ ದಾಖಲಾಗಿ ಕೇವಲ 15 ದಿನಗಳಲ್ಲಿಯೇ ಆರೋಪಿಗಳನ್ನು ಬಂಧಿಸಲಾಯಿತು. ಮೊಬೈಲ್​ಫೋನ್ ಟವರ್ ಬ್ಯಾಟರಿ ಕಳ್ಳತನ ಜಿಲ್ಲೆಯಲ್ಲಿ ಮಿತಿಮೀರಿತ್ತು. ಈ ಕುರಿತು ಶಿರಹಟ್ಟಿ, ಲಕ್ಷೆ್ಮೕಶ್ವರ ಮತ್ತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗ್ರಾಮವೊಂದರ ಜನರು ಗ್ಯಾಂಗ್ ಕಟ್ಟಿಕೊಂಡು ಬ್ಯಾಟರಿ ಕಳವು ಮಾಡುತ್ತಿದ್ದರು. ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ನರಗುಂದ ತಾಲೂಕಿನ ಕಲ್ಲಾಪೂರ ಮನೆ ಕಳ್ಳತನ, ಗದಗ ಶಹರದ ಒಂಟಿ ಮಹಿಳೆ ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

    ಹೋದ ಜೀವ ಬಂದ್ಹಂಗಾತು..!
    ಖರೇ ಹೇಳಬೇಕಂದ್ರ ಹೋದ ಜೀವ ವಾಪಸ್ ಬಂದಷ್ಟು ಖುಷಿಯಾಗಿದೆ. 80 ಗ್ರಾಂ ಚಿನ್ನದ ಸರ ಕಳವಾಗಿತ್ತು. ಈ ಕುರಿತು ಶಹರ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಪೊಲೀಸರು ಕಳ್ಳರನ್ನು ಪತ್ತೆ ಮಾಡಿ ಸರ ಮರಳಿಸಿದ್ದಾರೆ. ಪೊಲೀಸ್ ಇಲಾಖೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಗದಗ ಕಳಸಾಪುರ ರಸ್ತೆ ನಿವಾಸಿ ಲಾಲಪ್ಪ ನಾಯಕ ಹೇಳಿದರು. ‘ಪತಿಯೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಮತ್ತೊಂದು ಬೈಕ್​ನಲ್ಲಿ ಬಂದ ಖದೀಮರು ನನ್ನ ಕುತ್ತಿಗೆಯಲ್ಲಿದ್ದ 3.5 ತೊಲೆಯ ತಾಳಿ ಸರ ಹರಿದುಕೊಂಡು ಹೋಗಿದ್ದರು. ಪೊಲೀಸರು ನಡೆಸಿದ ತನಿಖೆಯಿಂದಾಗಿ ನನ್ನ ತಾಳಿ ಸಿಕ್ಕಿದೆ. ಸಮಾಜಕ್ಕಾಗಿ ದುಡಿಯುವ ಪೊಲೀಸರಿಗೆ ಒಳ್ಳೆಯದಾಗಲಿ’ ಎಂದು ಗದಗ ರಾಧಾಕೃಷ್ಣ ನಗರದ ನಿವಾಸಿಯೊಬ್ಬರು ಹರಸಿದರು.

    ಸಮಾಜದಲ್ಲಿ ಪೊಲೀಸರೆಂದರೆ ನೆಗೆಟಿವ್ ಥಿಂಕಿಂಗ್ ಜಾಸ್ತಿ. ಹೀಗಾಗಿ, ಜನರಿಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ, ವಿಶ್ವಾಸ ಬರಲಿ ಎಂಬ ಕಾರಣಕ್ಕೆ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿದೆ. ಪೊಲೀಸರ ಕೆಲಸವನ್ನೂ ಸಮಾಜ ಗುರುತಿಸಬೇಕು. ಇಲಾಖೆಗೆ ಸವಾಲು ಆಗುವಂತಹ ಅನೇಕ ಪ್ರಕರಣಗಳನ್ನು ನಮ್ಮ ಅಧಿಕಾರಿ, ಸಿಬ್ಬಂದಿ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಚಿನ್ನಾಭರಣಗಳು, ದ್ವಿಚಕ್ರ ವಾಹನಗಳನ್ನು ಕಳೆದುಕೊಂಡವರಿಗೆ ಅವರ ವಸ್ತುಗಳನ್ನು ಮರಳಿಸಲಾಗಿದೆ. ಇನ್ನೂ ಅನೇಕ ಪ್ರಕರಣಗಳ ತನಿಖೆ ಮುಂದುವರಿದಿದೆ.
    | ಯತೀಶ .ಎನ್., ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts