More

    ಕಲ್ಲೋಳ ಬ್ಯಾರೇಜ್‌ಗೆ ಮಂಜೂರಾತಿ ನೀಡಿ – ಡಿಸಿಎಂ ಗೋವಿಂದ ಕಾರಜೋಳ

    ಬೆಳಗಾವಿ: ನಲವತ್ತು ವರ್ಷಗಳಷ್ಟು ಹಳೆಯದಾದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಹೊಸದಾಗಿ ನಿರ್ಮಿಸುವ 35 ಕೋಟಿ ರೂ. ವೆಚ್ಚದ ಪ್ರಸ್ತಾವಕ್ಕೆ ಮಂಜೂರಾತಿ ನೀಡಿ ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರು, ಕರೊನಾ ನಿಯಂತ್ರಣ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಅನುಮತಿ ಬಾಕಿ: ನೀರಾವರಿ ಇಲಾಖೆ ಇಂಜಿನಿಯರ್ ಸಿ.ಡಿ. ಪಾಟೀಲ ಮಾತನಾಡಿ, 1980ರಲ್ಲಿ ನಿರ್ಮಿಸಲಾಗಿರುವ 0.60 ಟಿಎಂಸಿ ಸಾಮರ್ಥ್ಯದ ಕಲ್ಲೋಳ ಬ್ಯಾರೇಜ್‌ನಲ್ಲಿ ಮೊದಲಿನಂತೆ ನೀರು ಸಂಗ್ರಹ ಆಗುತ್ತಿಲ್ಲ. ಹೀಗಾಗಿ 35 ಕೋಟಿ ರೂ. ವೆಚ್ಚದಲ್ಲಿ ಹೊಸ ಬ್ಯಾರೇಜ್ ನಿರ್ಮಿಸುವ ಅವಶ್ಯಕತೆಯಿದೆ. ಯೋಜನೆಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಗೆ ಸಮ್ಮತಿ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿ, ಸಚಿವರ ಗಮನ ಸೆಳೆದರು.

    ಸಚಿವ ಕಾರಜೋಳ ತಕ್ಷಣವೇ ನೀರಾವರಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜತೆ ಮೊಬೈಲ್‌ನಲ್ಲಿ ಮಾತನಾಡಿ, ಕೂಡಲೇ ಕಲ್ಲೋಳ ಬ್ಯಾರೇಜ್ ನಿರ್ಮಾಣ ಪ್ರಸ್ತಾವಕ್ಕೆ ಮಂಜೂರಾತಿ ನೀಡುವಂತೆ ಸೂಚಿಸಿದರು.

    ಅಕ್ಟೋಬರ್‌ನಲ್ಲೇ ಆರಂಭಿಸಿ: ಜಲಜೀವನ್ ಮಿಷನ್ ಮೂಲಕ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 8.52 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಒದಗಿಸಲು ಕೇಂದ್ರ ಸರ್ಕಾರ 2,100 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. 918 ಜನವಸತಿಗಳಿಗೆ ನೂರಕ್ಕೆ ನೂರರಷ್ಟು ನೀರು ಪೂರೈಸಲು ಡಿಪಿಆರ್ ಆಗಿದೆ. ಎಲ್ಲ ಸಿದ್ಧತೆಗಳೊಂದಿಗೆ ಅಕ್ಟೋಬರ್ ತಿಂಗಳಲ್ಲೇ ಕಾಮಗಾರಿ ಆರಂಭಿಸಬೇಕು. ಹೊಸ ಕೊಳವೆಬಾವಿ ಕೊರೆಯುವ ಬದಲು ಇರುವ ಕೊಳವೆಬಾವಿಗಳ ದುರಸ್ತಿ
    ಮಾಡಲು, ಮರುಪೂರಣಕ್ಕೆ ಒತ್ತು ನೀಡಬೇಕು. ನದಿಗಳ ಮೇಲ್ಮಟ್ಟದ ನೀರು ಬಳಕೆ ಮಾಡಿಕೊಂಡು ಜಲಜೀವನ ಮಿಷನ್ ಯೋಜನೆ ಮೂಲಕ ಎಲ್ಲ ಗ್ರಾಮಗಳ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

    ವಿಳಂಬಕ್ಕೆ ಅಸಮಾಧಾನ: ಮುರಗೋಡ ನೀರು ಸರಬರಾಜು ಯೋಜನೆಗೆ ಎಕ್ಸ್‌ಪ್ರೆಸ್ ಫೀಡರ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಕಾರಣವಾದ ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಕ್ಷಣ ಸಂಪರ್ಕ ಕಲ್ಪಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಬಿತ್ತನೆ ಉತ್ತಮವಾಗಿದೆ.

    ರೈತರಿಗೆ ಸಕಾಲಕ್ಕೆ ಬೀಜ-ಗೊಬ್ಬರ ಸಿಗುವಂತೆ ಕ್ರಮ ವಹಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ.ಮುನ್ಯಾಳ ಮಾತನಾಡಿ, ಆಕ್ಸಿಜನ್ ಉತ್ಪಾದನಾ ಘಟಕ ಇನ್ನೂ ಕೆಲ ತಾಲೂಕುಗಳಲ್ಲಿ ಆರಂಭಿಸುವ ಅಗತ್ಯವಿದೆ. ಚಿಕ್ಕೋಡಿಯಲ್ಲಿ ಕೋವಿಡ್ ತಪಾಸಣಾ ಪ್ರಯೋಗಾಲಯ ಸದ್ಯದಲ್ಲೇ ಕಾರ್ಯಾರಂಭಿಸಲಿದೆ. ಅಗತ್ಯ ತಜ್ಞ ಸಿಬ್ಬಂದಿಯನ್ನು ರಾಜ್ಯಮಟ್ಟದಿಂದ ಒದಗಿಸಲಾಗುವುದು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಲಸಿಕಾ ಅಧಿಕಾರಿ ಡಾ. ಐ.ಪಿ. ಗಡಾದ ಮಾತನಾಡಿ ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಸೇರಿ ಒಟ್ಟಾರೆ 14.74 ಲಕ್ಷ ಜನರಿಗೆ ಲಸಿಕೆ ವಿತರಿಸಲಾಗಿದೆ ಎಂದು ತಿಳಿಸಿದರು. ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಜಿಪಂ ಸಿಇಒ ದರ್ಶನ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಎಸ್ಪಿ ಅಮರನಾಥ ರೆಡ್ಡಿ ಇತರರು ಪಾಲ್ಗೊಂಡಿದ್ದರು.

    ಹಲಗಲಿ ಯಶೋಗಾಥೆಯಿಂದ ಜಲಜೀವನ್ ಮಿಷನ್: ದೇಶಾದ್ಯಂತ ಜಲಜೀವನ್ ಮಿಷನ್ ಅನುಷ್ಠಾನಗೊಳಿಸಲು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಯಶೋಗಾಥೆಯೇ ಕಾರಣ ಎಂದು ಡಿಸಿಎಂ ಗೋವಿಂದ ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದರು. ಆರು ವರ್ಷದ ಹಿಂದೆ ಹಲಗಲಿ ಗ್ರಾಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಮೂಲಕ ಮನೆ ಮನೆಗೆ ನೀರು ಪೂರೈಕೆ ಆರಂಭಿಸಲಾಯಿತು.

    ಇದರಿಂದ ನೀರು ಪೋಲು ತಡೆಗಟ್ಟುವುದು ಮಾತ್ರವಲ್ಲದೆ, ಮೀಟರ್ ಅಳವಡಿಸುವ ಮೂಲಕ ಬಿಲ್ ಸಂಗ್ರಹ ಸಾಧ್ಯವಾಯಿತು. ಹಲಗಲಿ ಯಶೋಗಾಥೆ ತಿಳಿದು ಕೇಂದ್ರ ಸರ್ಕಾರ ವಿಶೇಷ ತಂಡ ಆಗಮಿಸಿ ಅಧ್ಯಯನ ನಡೆಸಿತ್ತು. ಇದರ ಮಹತ್ವ ಅರಿತು ಜಲಜೀವನ ಮಿಷನ್ ಮೂಲಕ ಇಡೀ ದೇಶದ ಎಲ್ಲ ಗ್ರಾಮಗಳಿಗೆ ನೀರು ಪೂರೈಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಭೆಯಲ್ಲಿ ವಿವರಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts