More

    ಕಲ್ಲು ಕ್ವಾರಿಯಲ್ಲಿ ಕಸ ವಿಲೇವಾರಿ: ಹೈಕೋರ್ಟ್ ಆದೇಶ ಉಲ್ಲಂಘನೆ, ನಗರಸಭೆ ವಾಹನ ತಡೆದು ಪೊಲೀಸರಿಗೆ ಒಪ್ಪಿಸಿದ ರೈತ ಸಂಘ

    ಕೋಲಾರ : ತಾಲೂಕಿನ ಲಕ್ಷ್ಮೀಸಾಗರದ ಕೆಸಿ ವ್ಯಾಲಿ ಉಗಮ ಸ್ಥಾನದ ಸಮೀಪದ ಅಕ್ರಮ ಕಲ್ಲು ಕ್ವಾರೆಯಲ್ಲಿ ಕಸ ಸುರಿಯುತ್ತಿದ್ದ ನಗರಸಭೆಯ ಮೂರು ವಾಹನ ಹಾಗೂ ಬೆಳ್ಳೂರು ಗ್ರಾಪಂನ ಒಂದು ವಾಹನವನ್ನು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮೂರು ವರ್ಷಗಳಿಂದ ಕೋಲಾರ ಹಾಗೂ ಹೊಸಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾದ ಘನತ್ಯಾಜ್ಯವನ್ನು ಲಕ್ಷ್ಮೀಸಾಗರದ ಕೆಸಿ ವ್ಯಾಲಿ ಉಗಮ ಸ್ಥಾನದಿಂದ ಸುಮಾರು 200 ಮೀಟರ್ ಅಂತರದಲ್ಲಿರುವ ಅಕ್ರಮ ಕಲ್ಲು ಕ್ವಾರೆಯಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು.

    ಇದನ್ನು ಪ್ರಶ್ನಿಸಿ ರೈತ ಸಂಘ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತಾದರೂ ಕಸ ವಿಲೇವಾರಿ ಮುಂದುವರಿದಿದ್ದರಿಂದ ರೈತ ಸಂಘ ಪ್ರತಿಭಟನೆ ನಡೆಸಿತ್ತು. ತಹಸೀಲ್ದಾರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಸ ಹಾಕದಂತೆ ನಗರಸಭೆಗೆ ತಿಳಿಸುವುದಾಗಿ ಭರವಸೆ ನೀಡಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರಸಭೆಗೆ ಸ್ಪಷ್ಟ ನಿರ್ದೇಶನವೂ ಹೋಗಿತ್ತು.

    ಇದರ ನಡುವೆಯೂ ಕಳೆದ ಶುಕ್ರವಾರ ಕೋಲಾರ ನಗರಸಭೆಯ ಕಸದ ವಾಹನಗಳು ಇದೇ ಸ್ಥಳದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದುದನ್ನು ರೈತ ಸಂಘದ ಮುಖಂಡರು ಪತ್ತೆಹಚ್ಚಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದ ಪರಿಸರ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ಕಸ ವಿಲೇವಾರಿ ಮಾಡಿ ಪರಿಸರಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವೇಮಗಲ್ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ಸೆ.15ರಂದು ಪತ್ರ ಬರೆದಿದ್ದರು.

    ಇದರ ನಡುವೆಯೂ ನಗರಸಭೆಯಿಂದ ಕಸ ವಿಲೇವಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಕಾದು ಕುಳಿತ ರೈತ ಸಂಘದ ಅಧ್ಯಕ್ಷ ರಾಮುಶಿವಣ್ಣ, ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ ಇತರರು ಬೆಳಗ್ಗೆ 8.20ರ ವೇಳೆಗೆ ಕೋಲಾರದಿಂದ ಕಸ ಹೇರಿಕೊಂಡು ಬಂದ ನಗರಸಭೆಯ ಮೂರು ವಾಹನ ಹಾಗೂ ಇದೇ ಸಮಯದಲ್ಲಿ ಪಕ್ಕದ ಬೆಳ್ಳೂರು ಗ್ರಾಪಂನಿಂದ ಕಸ ಹೇರಿಕೊಂಡು ಬಂದ ಸ್ವಚ್ಛ ವಾಹಿನಿ ಆಟೋ ಟಿಪ್ಪರ್ ತಡೆದು ಎಎಸ್‌ಐ ವೆಂಕಟರಾಂ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ವಾಹನ ವಶಕ್ಕೆ ಪಡೆದು ಕೈಗಾರಿಕಾ ಪ್ರದೇಶದಲ್ಲಿರುವ ಹೊರಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

     

    ಹೈಕೋರ್ಟ್ ಆದೇಶ ಉಲ್ಲಂಘಿಸಿ ಲಕ್ಷ್ಮೀಸಾಗರದಲ್ಲಿನ ಅಕ್ರಮ ಕಲ್ಲು ಕ್ವಾರೆಯಲ್ಲಿ ಕಸ ವಿಲೇವಾರಿ ನಡೆಸುತ್ತಿರುವ ನಗರಸಭೆ ಪೌರಾಯುಕ್ತರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಜತೆಗೆ ಬೆಳ್ಳೂರು ಗ್ರಾಪಂ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೇಮಗಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ರಾಮುಶಿವಣ್ಣ, ಅಧ್ಯಕ್ಷರ, ರೈತ ಸಂಘ ಹಾಗೂ ಹಸಿರು ಸೇನೆ, ಕೋಲಾರ

    ಕೆಸಿ ವ್ಯಾಲಿ ಉಗಮ ಸ್ಥಳದ ಸಮೀಪದ ಕಲ್ಲು ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಮಾಡದಂತೆ ನಗರಸಭೆಗೆ ಹಿಂದೆಯೂ ಸೂಚಿಸಲಾಗಿತ್ತು. ಇದರ ನಡುವೆಯೂ ಕಸ ವಿಲೇವಾರಿ ಮಾಡಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ವಾಹನ ಜಪ್ತಿ ಮಾಡಿದ್ದಾರೆ. ಕಸ ವಿಲೇವಾರಿಗೆ ಪರ‌್ಯಾಯ ವ್ಯವಸ್ಥೆ ಮಾಡಿಕೊಂಡು ಕೋರ್ಟ್ ಆದೇಶ ಪಾಲಿಸುವಂತೆ ನಗರಸಭೆಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
    ರಾಜಶೇಖರ್, ಜಿಲ್ಲಾ ಪರಿಸರ ಅಧಿಕಾರಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts