More

    ಕಲಾ ತಂಡಗಳ ಆಕರ್ಷಕ ಪ್ರದರ್ಶನ

    ಶಿರಸಿ: ಪಂಪನ ನೆಲ ಬನವಾಸಿಯಲ್ಲಿ ಆಯೋಜಿಸಿರುವ ಕದಂಬೋತ್ಸವ ಅಂಗವಾಗಿ ಜನಪದ ಕಲೆಗಳ ಮೇಳೈಸುವಿಕೆ ಕನ್ನಡದ ಸಿರಿಯನ್ನು ಉದ್ದೀಪಿಸುವಲ್ಲಿ ಯಶಸ್ವಿಯಾಯಿತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಹಾಗೂ ವಾದ್ಯಗಳ ಇಂಪು ಉತ್ಸವದ ಸಂಭ್ರಮವನ್ನು ಇಮ್ಮಡಿಸಿತು.

    ಅಂಕೋಲಾ ತಾಲೂಕಿನ ಸುಗ್ಗಿ ಕುಣಿತ, ಆನಂದ ಜೋಗಿ ಅವರ ಕೀಲುಕುದುರೆ, ದಾನಯ್ಯ ಮಠಪತಿ ಅವರ ಕರಡಿ ಮೇಳ, ಬಿಇಒ ಕಚೇರಿಯ ರೂಪಕ, ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲನಿಯ ಸಿಂಹ ನೃತ್ಯ, ಕಾನಗೋಡಿನ ಮಲ್ಲಿಕಾರ್ಜುನ ಯುವಕ ರೈತ ಸಂಘದ ಸದಸ್ಯರಿಂದ ಡೊಳ್ಳು ಕುಣಿತ, ಹೊನ್ನಾವರ ತಾಲೂಕಿನ ಹಗಣ ನೃತ್ಯ, ಗದಗ ಶ್ರೀ ವೀರಭದ್ರೇಶ್ವರ ಜಾನಪದ ಕಲಾಮೇಳದ ಪುರವಂತಿಕೆ, ಮಾರುತಿ ಭಜಂತ್ರಿ ತಂಡದಿಂದ ವಾದ್ಯ, ಕುಮಟಾ ತಾಲೂಕಿನ ಕಲಾವಿದರಿಂದ ಗುಮಟೆಪಾಂಗ್, ಜೊಯಿಡಾ ತಾಲೂಕಿನ ಡಮಾಮಿ ನೃತ್ಯ, ಹಳಿಯಾಳ ತಾಲೂಕಿನ ಸಿದ್ದಿ ಕುಣಿತ, ಯಲ್ಲಾಪುರ ತಾಲೂಕಿನ ಗೌಳಿಗಳ ನೃತ್ಯ, ಜಾನಪದ ಕಲೆ ಶಿರಸಿಯ ಬೇಡರ ವೇಷ, ಸಿದ್ದಾಪುರ ಕಲಾವಿದರ ವೀರಗಾಸೆ, ದಾಂಡೇಲಿಯ ಲಮಾಣಿ ನೃತ್ಯ, ಭಟ್ಕಳದ ಗೊಂಡರ ನೃತ್ಯ, ಕಾರವಾರದ ಬ್ರಹ್ಮದೇವ ಕಲಾತಂಡದ ಗುಮಟೆ ವಾದ್ಯ ರಸ್ತೆ ಬದಿಯಲ್ಲಿ ಕಿಕ್ಕಿರಿದು ಸೇರಿದ್ದ ಜನರ ಮನ ತಣಿಸಿದವು.

    ಬನವಾಸಿಯ ಜಯಂತಿ ಪ್ರೌಢಶಾಲೆ ವಿದ್ಯಾರ್ಥಿಗಳ ಪೂರ್ಣಕುಂಭ ಸ್ವಾಗತ ತಂಡ, ಶಿರಸಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾದ್ಯತಂಡ, ಬನವಾಸಿಯ ನಾಗಶ್ರೀ ಪ್ರೌಢಶಾಲೆ ಮಕ್ಕಳ ಕದಂಬ ಲಾಂಛನ ಸ್ತಬ್ಧಚಿತ್ರ, ಜಯಂತಿ ಪ್ರೌಢಶಾಲೆಯ ಪ್ಲಾಗ್ ತಂಡ, ಆವೇಮರಿಯ ಹಿರಿಯ ಪ್ರಾಥಮಿಕ ಶಾಲೆ ವಾದ್ಯ ತಂಡ ಸೇರಿ ವಿವಿಧ ಶಾಲೆಗಳ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರ ತೊಟ್ಟು ಮೆರವಣಿಗೆಯುದ್ದಕ್ಕೂ ಶಿಸ್ತಿನ ಹೆಜ್ಜೆ ಹಾಕಿದರು.

    ಕದಂಬೋತ್ಸವದ ಅಂಗವಾಗಿ ಶನಿವಾರ ಬನವಾಸಿ ಮಧುಕೇಶ್ವರ ದೇವಾಲಯದ ಎದುರು ಕಲಾ ಮೆರವಣಿಗೆಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು. ದೇವಾಲಯದಿಂದ ಹೊರಟ ಮೆರವಣಿಗೆ ಬನವಾಸಿ ಬೀದಿಗಳಲ್ಲಿ ಸಾಗಿ ಪಂಪ ವೃತ್ತದ ಮೂಲಕ ಕದಂಬೋತ್ಸವ ಮೈದಾನಕ್ಕೆ ತಲುಪಿ ಸಮಾಪ್ತಿಗೊಂಡಿತು. ಮನೆಯ ಮಹಡಿ, ಅಂಗಡಿ ಕಟ್ಟೆ, ದೊಡ್ಡ ಇಮಾರತಿನ ಮೇಲೆ ನಿಂತು ಜನರು ಮೆರವಣಿಗೆ ವೀಕ್ಷಿಸಿದರು.

    ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಪಂ ಸದಸ್ಯೆ ರೂಪಾ ನಾಯ್ಕ, ಬಸವರಾಜ ದೊಡ್ಮನಿ, ಬನವಾಸಿ ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಜಿಲ್ಲಾಧಿಕಾರಿ ಕೆ. ಹರೀಶಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts