More

    ಕಲಬುರಗಿ ಜಿಲ್ಲೆಯಲ್ಲಿ 5.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

    ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದಾಗಿ ನಿರಂತರ ಮಳೆಯಾಗುತ್ತಿದ್ದರಿಂದ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಜೀವ ಕಳೆ ಬಂದಿದೆ. ಕುಂಠಿತಗೊAಡಿದ್ದ ಬಿತ್ತನೆ ಕಾರ್ಯ ಜೋರಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ 5.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.

    ವರುಣನ ಕೃಪೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆವರಿಸಿದ್ದ ಬರದ ಕಾರ್ಮೋಡ ಸಂಪೂರ್ಣ ಕರಗಿ ಹೋಗಿದೆ. ರೈತರ ಬೇಡಿಕೆಯಷ್ಟು ಮಳೆಯಾಗಿದೆ. ಒಂದು ವಾರ ಮಳೆರಾಯ ಬಿಡುವು ನೀಡಿದರೆ ಬಾಕಿ ಉಳಿದ ಬಿತ್ತನೆ ಕೆಲಸ ಪೂರ್ಣಗೊಳಿಸಲು ಅನುವು ಆಗಲಿದೆ.
    ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 7.86ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಈಗ ಶೇ.57 ಪೂರ್ಣಗೊಂಡಿದೆ. ಆರಂಭದಲ್ಲಿ ಮಳೆಯಾಗದೆ ಇರುವುದರಿಂದ ಇನ್ನೂ ಶೇ.43 ಬಿತ್ತನೆ ಬಾಕಿ ಉಳಿದುಕೊಂಡಿದೆ. ಚಿಂಚೋಳಿ, ಸೇಡಂ, ಚಿತ್ತಾಪುರ, ಕಾಳಗಿ, ಕಮಲಾಪುರ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಅಫಜಲಪುರ, ಜೇವರ್ಗಿ, ಆಳಂದ, ಯಡ್ರಾಮಿ ತಾಲೂಕುಗಳಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

    ಜಿಲ್ಲೆಯಲ್ಲಿ ಸೇಡಂ, ಚಿಂಚೋಳಿ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ಮೊದಲೇ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಅದರಲ್ಲಿಯೇ ಹೆಸರು, ಉದ್ದು, ಸಜ್ಜೆ ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಇದೀಗ ಮಳೆ ಬೀಳುತ್ತಿರುವುದರಿಂದ ಬೆಳೆಗಳಿಗೆ ತುಂಬಾ ಅನುವು ಆಗಿದೆ ಎನ್ನುವುದು ರೈತರ ಅಭಿಪ್ರಾಯ.

    26ರಿಂದ 28ವರೆಗೆ ಹೆಚ್ಚಿನ ಮಳೆ: ನೈಋತ್ಯ ಮುಂಗಾರು ರಾಜ್ಯದೆಲ್ಲಡೆ ಚುರುಕುಗೊಂಡಿದೆ. ಇನ್ನೂ ಬಂಗಾಳ ಕೊಲ್ಲಿಯ ಮಾರುತುಗಳು ಇನ್ನಷ್ಟು ತೀವ್ರಗೊಳ್ಳುವುದರಿಂದ ಜು.26ರಿಂದ 28ವರೆಗೆ ಕಲಬುರಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಹೀಗಾಗಿ ಎಲ್ಲ ಜಲಾಶಯಗಳಿಗೆ ಹೆಚ್ಚಿನ ಹರಿವು ಬರಲಿದೆ. ಕೆಲವು ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾದರೂ ಆಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಅದಕ್ಕೆ ಪೂರಕವಾಗಿರುವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೂ ಸಲಹೆ ನೀಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ.

    ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬೆಳೆಗಳಿಗೆ ಅನುವು ಆಗಿದೆ. ಈಗ ಹೆಚ್ಚಿನ ರೈತರು ತೊಗರಿ, ಹತ್ತಿ, ಸೋಯಾ ಬಿತ್ತನೆ ಮಾಡಲು ಒಲವು ತೋರುತ್ತಿದ್ದಾರೆ. ಬೇಡಿಕೆಯಂತೆ ಎಲ್ಲ ಬೀಜ-ಗೊಬ್ಬರ ದಾಸ್ತಾನು ಇದೆ.
    | ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts