More

    ಕರ್ತವ್ಯ ನಿರ್ಲಕ್ಷ್ಯ, ಒಂಬತ್ತು ಶಿಕ್ಷಕರ ಅಮಾನತು

    ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕ, ಉಪ ಮುಖ್ಯಅಧೀಕ್ಷಕ ಸೇರಿ 9 ಜನ ಶಿಕ್ಷಕರನ್ನು ಗುರುವಾರ ಅಮಾನತುಗೊಳಿಸಲಾಗಿದೆ.

    ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಕರ್ನಾಟಕ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ ಬಡಾಲ ಅಂಕಲಗಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಪಿ.ಸಿ.ಯಂಟಮಾನ ಹಾಗೂ ಉಪ ಅಧೀಕ್ಷಕ ಮುತ್ನಾಳದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಎಚ್.ಪಿ.ಅಮ್ಮಿನಬಾವಿ ಅವರನ್ನು ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಅಮಾನತುಗೊಳಿಸಿದ್ದಾರೆ. ಜತೆಗೆ ಅದೇ ಹಿರೇಬಾಗೇವಾಡಿ ಕರ್ನಾಟಕ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಸ್.ಎಸ್.ಕರವಿನಕೊಪ್ಪ, ವಿ.ಎಸ್.ಬೀಳಗಿ, ಎಲ್.ಆರ್.ಮಹಾಜನಶೆಟ್ಟಿ, ಎಂ.ಎಸ್.ಅಕ್ಕಿ, ಎ.ಎಚ್.ಪಾಟೀಲ, ಎನ್.ಎಂ.ನಂದಿಹಳ್ಳಿ ಹಾಗೂ ಎಸ್.ಸಿ.ದೂಳಪ್ಪನವರ ಅವರನ್ನು ಅಮಾನತುಗೊಳಿಸಲಾಗಿದೆ.

    ಕರ್ತವ್ಯ ನಿರ್ಲಕ್ಷೃ ಹಾಗೂ ಪರೀಕ್ಷೆಯ ಪಾವಿತ್ರೃತೆ ಮತ್ತು ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸೇವಾ ನಿಯಮಾವಳಿ (ವರ್ಗೀಕರಣ ಮತ್ತು ಅಪೀಲು) 1957 ನಿಯಮದಡಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ, ಅಮಾನತುಗೊಳಿಸಿರುವುದಾಗಿ ಆಯಕ್ತರು ತಿಳಿಸಿದ್ದಾರೆ.

    786 ಪರೀಕ್ಷಾರ್ಥಿಗಳು ಗೈರು

    ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 271 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಗಮವಾಗಿ ಜರುಗಿತು. ದ್ವಿತೀಯ ಭಾಷೆ (ಇಂಗ್ಲಿಷ್) ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 76,075 ವಿದ್ಯಾರ್ಥಿಗಳ ಪೈಕಿ ಒಟ್ಟು 786 ಪರೀಕ್ಷಾರ್ಥಿಗಳು ಗೈರಾದರು. ಚಿಕ್ಕೋಡಿ ಜಿಲ್ಲೆಯಲ್ಲಿ 43,745 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 32,330 ಪರೀಕ್ಷಾರ್ಥಿಗಳು ಹಾಜರಾಗಬೇಕಿತ್ತು. 129 ಪುನರಾವರ್ತಿತ, 579 ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟು 75,289 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇನ್ನು 40 ಪುನರಾವರ್ತಿತ, 359 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಚಿಕ್ಕೋಡಿಯ 503 ಹಾಗೂ ಬೆಳಗಾವಿಯ 283 ವಿದ್ಯಾರ್ಥಿಗಳು ಗೈರಾದರು. ಪ್ರತಿ ಕೇಂದ್ರದಲ್ಲಿ ಎರಡು ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಎಲ್ಲ ಮೂಲಸೌಲಭ್ಯಗಳೊಂದಿಗೆ ಬೆಳಗಾವಿಯಲ್ಲಿ 120 ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ 151 ಸೇರಿ ಒಟ್ಟು 271 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು. ಎರಡೂ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವ ವಿದ್ಯಾರ್ಥಿಗಳು ಡಿಬಾರ್ ಆದ ಬಗ್ಗೆ ವರದಿಯಾಗಿಲ್ಲ. ಗಣಿತ ಪರೀಕ್ಷೆಯಲ್ಲಿ ನಕಲು ನಡೆದಿರುವುದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದ ಹಿನ್ನೆಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆ ಬಿಗಿ ಪೊಲೀಸ್ ಭದ್ರತೆಯಲ್ಲಿ ದ್ವಿತೀಯ ಭಾಷೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿತು. ಏ.3ರಂದು ಶಿಕ್ಷಣ ಇಲಾಖೆಯ ಧಾರವಾಡ ವಲಯದ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಪರಿಶೀಲನೆ ನಡೆಸಿದ ವೇಳೆ ಬೆಳಗಾವಿಯ ಸರ್ದಾರ ಪ್ರೌಢ ಶಾಲೆ ಹಾಗೂ ಹಿರೇಬಾಗೇವಾಡಿಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ನಕಲು ನಡೆಯುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಗುರುವಾರ ವಿಶೇಷ ನಿಗಾ ಇರಿಸಲಾಗಿತ್ತು. ಹಿರೇಬಾಗೇವಾಡಿಯ ಪರೀಕ್ಷಾ ಕೇಂದ್ರಕ್ಕೆ ದೈಹಿಕ ಶಿಕ್ಷಣದ ಜಿಲ್ಲಾಧಿಕಾರಿ ಡಿ.ಎಸ್.ಡಿಗ್ರಜ ಅವರನ್ನು ನಿಯೋಜಿಸಲಾಗಿತ್ತು. ಅವರು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಶ್ರಮಿಸಿದರು. ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸುಗಮ ಮತ್ತು ಸುರಕ್ಷಿತ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ಧ್ವನಿವರ್ಧಕದ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ಮತ್ತು ಸೂಚನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts