More

    ಕರೊನಾ 3ನೇ ಅಲೆ ತಡೆಗೆ ವಾತ್ಸಲ್ಯ

    ಹಾವೇರಿ: ಸಂಭವನೀಯ ಕರೊನಾ 3ನೇ ಅಲೆಯನ್ನು ಆರಂಭದ ಹಂತದಲ್ಲಿಯೇ ನಿಯಂತ್ರಿಸಲು ಜಿಲ್ಲಾಡಳಿತ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯದ ಹಂತ ತಲುಪಿದೆ.

    3ನೇ ಅಲೆಯು ಮಕ್ಕಳಿಗೆ ಹೆಚ್ಚಾಗಿ ಬಾಧಿಸಲಿದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 3ನೇ ಅಲೆಯ ಪ್ರಭಾವ ತಗ್ಗಿಸಲು 16 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಅವರು ಜೂನ್​ನಲ್ಲಿಯೇ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಜಿಲ್ಲಾಡಳಿತ ‘ವಾತ್ಸಲ್ಯ’ ಎಂಬ ಶಿರೋನಾಮೆಯಡಿ ತಪಾಸಣೆ ನಡೆಸಿದ್ದು, ಜಿಲ್ಲೆಯಲ್ಲಿನ ಮಕ್ಕಳ ಆರೋಗ್ಯ ಸುಧಾರಣೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೆ, ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿಯೂ ಇದೇ ಮಾದರಿಯಲ್ಲಿ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

    ಜಿಲ್ಲೆಯಲ್ಲಿದ್ದಾರೆ 4.7 ಲಕ್ಷ ಮಕ್ಕಳು: ಜಿಲ್ಲೆಯಲ್ಲಿ 16 ವರ್ಷದೊಳಗಿನ ಒಟ್ಟು 4,07,370 ಮಕ್ಕಳಿದ್ದಾರೆ. ಜೂನ್ 25ರಿಂದ ಮಕ್ಕಳ ಆರೋಗ್ಯ ತಪಾಸಣೆ ಆರಂಭಿಸಲಾಗಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ದಿನಕ್ಕೆ ಸರಾಸರಿ 10 ಸಾವಿರ ಮಕ್ಕಳ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ಶಾಲೆ, ಅಂಗನವಾಡಿಗಳಿಗೆ ತೆರಳಿ ನಡೆಸುತ್ತಿದೆ. ಜುಲೈ ಅಂತ್ಯದೊಳಗೆ ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಂಡು ಎಷ್ಟು ಮಕ್ಕಳು ಯಾವ ಪ್ರಮಾಣದಲ್ಲಿ ಆರೋಗ್ಯವಂತರಿದ್ದಾರೆ. ಯಾವ ಮಕ್ಕಳಲ್ಲಿ ಯಾವ ಕೊರತೆಯಿದೆ ಎಂಬ ಸಂಪೂರ್ಣ ಮಾಹಿತಿ ಆರೋಗ್ಯ ಇಲಾಖೆಗೆ ಸಿಗಲಿದೆ. ಅಪೌಷ್ಟಿಕತೆ, ಅಂಗವಿಕಲತೆ, ಬೆಳವಣಿಗೆ ಕುಂಠಿತ, ಹೃದಯ ಸಂಬಂಧಿ ಕಾಯಿಲೆಗಳು ಸೇರಿ ಯಾವ ಮಕ್ಕಳಿಗೆ ಯಾವ ಸಮಸ್ಯೆಯಿದೆ ಎಂಬ ಮಾಹಿತಿ ಬೆರಳತುದಿಯಲ್ಲಿ ಸಿಗಲಿದೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಅದಕ್ಕೆ ತಕ್ಕ ಚಿಕಿತ್ಸೆ ನೀಡಲು ಸಾಕಷ್ಟು ಅನುಕೂಲವಾಗಲಿದೆ.

    ಸಂಭವನೀಯ ಕರೊನಾ 3ನೇ ಅಲೆ ಬರುವ ಮುನ್ನವೇ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಒಂದು ಪ್ರಕರಣ ಹೊರತುಪಡಿಸಿ ಉಳಿದೆಲ್ಲ ಮಕ್ಕಳು ಗುಣವಾಗಿದ್ದಾರೆ. ಆದರೂ 3ನೇ ಅಲೆಯ ಭಯ ಮಾತ್ರ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ. ಹೀಗಾಗಿ ಈ ವಾತ್ಸಲ್ಯ ತಪಾಸಣೆ ಶಿಬಿರ 3ನೇ ಅಲೆ ಬಂದರೂ ವೇಗವಾಗಿ ನಿಯಂತ್ರಿಸಲು ಸಾಕಷ್ಟು ಪ್ರಯೋಜನಕಾರಿಯಂತೂ ಆಗಲಿದೆ ಎಂಬ ಅಭಿಪ್ರಾಯವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

    ಆರೋಗ್ಯ ಸುಧಾರಣೆಗೆ ಪ್ರಯೋಜನಕಾರಿ: ಮಕ್ಕಳ ಆರೋಗ್ಯ ಶಿಬಿರದಲ್ಲಿ ತಪಾಸಣೆಗೆ ಒಳಗಾಗುವ ಮಕ್ಕಳಿಗೆ ವಾತ್ಸಲ್ಯ ಎಂಬ ಹೆಸರಿನ ಆರೋಗ್ಯ ತಪಾಸಣೆ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್​ನಲ್ಲಿ ಮಕ್ಕಳ ಪೂರ್ಣ ವಿವರದೊಂದಿಗೆ ಆರೋಗ್ಯದ ಮಾಹಿತಿಯೂ ದಾಖಲಾಗುತ್ತಿದೆ. ತಪಾಸಣೆ ವೇಳೆಯಲ್ಲಿ ಜನನ ನ್ಯೂನತೆಗಳು, ಪೋಷಕಾಂಶಗಳ ಕೊರತೆ, ಬೆಳವಣಿಗೆ ಕುಂಠಿತ, ವಿವಿಧ ಕಾಯಿಲೆಗಳಿರುವ ಹಾಗೂ ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗುತ್ತಿದೆ. ಇವರಿಗೆ ಅವಶ್ಯವಿರುವ ಚಿಕಿತ್ಸೆಯನ್ನು ಈಗಲೇ ಅವರಿಗೆ ಆರೋಗ್ಯ ಇಲಾಖೆಯಿಂದ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾ ಸೋಂಕಿನ ಲಕ್ಷಣಗಳಿದ್ದರೆ ಸ್ಥಳದಲ್ಲಿಯೇ ರ್ಯಾಟ್ ಟೆಸ್ಟ್ ಮಾಡಲಾಗುತ್ತಿದೆ. ಅಲ್ಲದೆ, ಕರೊನಾದಿಂದಾಗಿ ಕಾಲಕಾಲದ ಲಸಿಕೆಗಳಿಂದ ವಂಚಿತವಾದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

    16,240 ಚಿಣ್ಣರಲ್ಲಿ ನ್ಯೂನತೆ: ಜಿಲ್ಲೆಯಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ಜು. 13ರವರೆಗೆ 2,95,773 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಒಟ್ಟು 16,240 ಮಕ್ಕಳಲ್ಲಿ ವಿವಿಧ ನ್ಯೂನತೆಗಳು ಕಂಡುಬಂದಿವೆ. 1,151 ಮಕ್ಕಳಲ್ಲಿ ಜನನ ನ್ಯೂನತೆ, 3,166 ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ, 7,057 ಮಕ್ಕಳಲ್ಲಿ ವಿವಿಧ ಕಾಯಿಲೆಗಳು, 991 ಬೆಳವಣಿಗೆ ಕುಂಠಿತ, 2,391ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿದ್ದು, 1,742 ಮಕ್ಕಳ ರ್ಯಾಟ್ ಟೆಸ್ಟ್ ನಡೆಸಲಾಗಿದೆ. 2,361 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

    ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಕನಸಿನ ಕೂಸು. ಅವರ ಸಲಹೆ ಆರೋಗ್ಯ, ಶಿಕ್ಷಣ ಇಲಾಖೆಯ ಶ್ರಮದೊಂದಿಗೆ ಇದು ಸಂಪೂರ್ಣ ಯಶಸ್ವಿಯಾಗುವ ಹಂತಕ್ಕೆ ಬಂದಿದೆ. ಈ ಕಾರ್ಯಕ್ರಮದಿಂದ ಮಕ್ಕಳ ಆರೋಗ್ಯದ ಮಾಹಿತಿ ಸುಲಭವಾಗಿ ಸಿಗಲಿದೆ. ಕಾಯಿಲೆ ಬಂದ ನಂತರ ಚಿಕಿತ್ಸೆಗೆ ಅಲೆದಾಡುವ ಬದಲು ಯಾವ ಮಕ್ಕಳಲ್ಲಿ ಯಾವ ನ್ಯೂನತೆಯಿದೆ ಎಂಬುದು ಮೊದಲೇ ತಿಳಿದು, ಅದಕ್ಕೆ ತಕ್ಕ ಚಿಕಿತ್ಸೆಯನ್ನು ಈಗಲೇ ನೀಡಲಾಗುತ್ತಿದೆ. ಅಲ್ಲದೆ, ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಪೌಷ್ಟಿಕಾಂಶಗಳ ಕಿಟ್ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲ ಮಕ್ಕಳಿಗೆ ವಾತ್ಸಲ್ಯ ಆರೋಗ್ಯ ಚೀಟಿ ಸಿಗಲಿದ್ದು, ಅದು ವೈದ್ಯರಿಗೆ ಪೂರಕ ಮಾಹಿತಿ ಒದಗಿಸಲಿದೆ.
    | ಮಹ್ಮದ್ ರೋಷನ್, ಜಿಪಂ ಸಿಇಒ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts