More

    ಕರೊನಾ ಹೆಬ್ಬಾಗಿಲಾಗುತ್ತಿದೆಯೇ ಭಟ್ಕಳ?

    ಕಾರವಾರ/ಭಟ್ಕಳ: ಜಿಲ್ಲೆಯಲ್ಲಿ ಕರೊನಾ ಹರಡುವ ಹೆಬ್ಬಾಗಿಲು ಭಟ್ಕಳವಾಯಿತೇ ಎಂಬ ಆತಂಕ ಜನರಲ್ಲಿ ಉಂಟಾಗುತ್ತಿದೆ. ಮಾ. 21 ರಂದು ದುಬೈನಿಂದ ಆಗಮಿಸಿದ ಭಟ್ಕಳ ಮೂಲದ ವ್ಯಕ್ತಿಯಲ್ಲಿ ರೋಗ ಇರುವುದು ಪತ್ತೆಯಾಗಿತ್ತು. ಮಂಗಳವಾರ ಮತ್ತೆರಡು ಪ್ರಕರಣಗಳು ಪತ್ತೆಯಾಗಿವೆ. ಇನ್ನಿಬ್ಬರ ಗಂಟಲು ದ್ರವದ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ. ಇದು ಭಟ್ಕಳಿಗರ ಎದೆಬಡಿತ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

    ಏಕೆ ಹೀಗಾಯ್ತು..?: ಇಡೀ ಉತ್ತರ ಕನ್ನಡದಲ್ಲಿ ವಿದೇಶದಿಂದ ವಾಪಸಾದವರಲ್ಲಿ ಶೇ. 40 ರಷ್ಟು ಜನರು ಭಟ್ಕಳದಲ್ಲೇ ಇದ್ದಾರೆ. ಅಂದರೆ ಸುಮಾರು 400 ರಷ್ಟು ಜನರು ಭಟ್ಕಳಕ್ಕೆ ಕಳೆದ ಎರಡು ವಾರಗಳಲ್ಲಿ ವಿದೇಶದಿಂದ ಆಗಮಿಸಿದ್ದಾರೆ ಎಂದು ಜಿಲ್ಲಾಡಳಿತದ ಮಾಹಿತಿ ಹೇಳುತ್ತದೆ.

    ಎಲ್ಲರನ್ನೂ ಪರಿಶೀಲಿಸಿ, ಆರೋಗ್ಯ ಸಿಬ್ಬಂದಿ ಅವರನ್ನು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ವಿದೇಶದಿಂದ ಆಗಮಿಸಿದ ಹಲವರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ, ಸರ್ಕಾರ ವಿಧಿಸಿರುವ ಹೋಂ ಕ್ವಾರೆಂಟೈನ್ ನಿಯಮಾವಳಿಗಳನ್ನು ಅನುಸರಿಸದೇ ಎಲ್ಲೆಡೆ ಓಡಾಡಿಕೊಂಡಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

    ಹುಡುಕುವುದೇ ಕಷ್ಟ: ಸದ್ಯ ಕರೊನಾ ಖಚಿತವಾದ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಗುರುತಿಸುವ ಅವರನ್ನು ಗೃಹ ಬಂಧನದಲ್ಲಿಡುವ ಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ. ಆದರೆ, ಅವರು ಯಾರ್ಯಾರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಹುಡುಕುವುದೇ ದೊಡ್ಡ ಸವಾಲಾಗಿದೆ. ಜಿಪಂ ಸಿಇಒ ಎಂ.ರೋಶನ್, ಡಿಎಚ್​ಒ ಡಾ.ಜಿ.ಎನ್.ಅಶೋಕ ಕುಮಾರ್ ನೇತೃತ್ವದ ತಂಡ ಭಟ್ಕಳದಲ್ಲಿ ಆ ಕಾರ್ಯ ನಡೆಸುತ್ತಿದೆ.

    ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಬೆಳಲಖಂಡದಲ್ಲಿ ಪರಿಶೀಲನೆಗೆ ತೆರಳಿದ ಆರೋಗ್ಯ ಕಾರ್ಯಕರ್ತೆಯರನ್ನು ವಾಪಸ್ ಕಳಿಸಿದ ಘಟನೆ ನಡೆದಿದೆ.

    ಪಟ್ಟಣದ 2 ಕಡೆ ರೆಡ್ ಅಲರ್ಟ್
    ಪಟ್ಟಣದ ಸಿದ್ದಖೀ ಸ್ಟ್ರೀಟ್ ಮತ್ತು ಅಜಾದ್ ನಗರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಆಪ್ರದೇಶದಲ್ಲಿ ಯಾರು ಸುತ್ತಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಆ ಎರಡು ಪ್ರದೇಶದ 3 ಕಿ.ಮೀ. ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತೆಯರಿಂದ ಮನೆಮನೆಗೆ ತೆರಳಿ ತಪಾಸಣೆ ನಡೆಸಲಾಗುತ್ತಿದೆ. ಮನೆಯಲ್ಲಿ ಬಂದ ಆರೋಗ್ಯ ಕಾರ್ಯಕರ್ತೆಯರಿಗೆ ಸಹಕಾರ ನೀಡುವಂತೆ ಇದೆ ಮೊದಲ ಬಾರಿಗೆ ಮಸೀದಿಯಲ್ಲಿ ಘೊಷಣೆ ಕೂಗಲಾಗಿದೆ. ಸದ್ಯ ಭಟ್ಕಳ ಸ್ತಬ್ದವಾಗಿದ್ದು ಬೆಳಗ್ಗಿನ ಸಮಯ ದಿನಸಿ ಅಂಗಡಿ ಹಾಲು ಹಣ್ಣಿನ ಅಂಗಡಿಗಳು ತೆರೆದಿದ್ದು ಬಿಟ್ಟರೆ ಭಟ್ಕಳದಲ್ಲಿ ಕರ್ಫ್ಯೂವಿನ ವಾತಾವರಣ ಕಂಡುಬಂದಿದೆ.

    ಕರೊನಾ ಆಸ್ಪತ್ರೆ
    ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲೆಯ ಮೊದಲ ಕರೊನಾ ಆಸ್ಪತ್ರೆ ಎಂದು ಪರಿಗಣಿಸಲಾಗಿದೆ. ಈಗಾಗಲೆ ಅಲ್ಲಿರುವ ಎಲ್ಲಾ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಶಿರಾಲಿ ಮತ್ತು ಬೆಳಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೆಟ್ರಿಕ್ ನಂತರದ ಬಾಲಕಿಯರ ವಸತಿಗೃಹಕ್ಕೆ ಸರ್ಕಾರಿ ಆಸ್ಪತ್ರೆಯನ್ನು ಸ್ಥಳಾಂತರ ಮಾಡಲಾಗಿದೆ. ಭಟ್ಕಳದ ಸರ್ಕಾರಿ ಆಸ್ಪತ್ರೆಯನ್ನು ಕೇವಲ ಕರೊನಾ ಶಂಕಿತರಿಗಾಗಿಯೇ ಇಡಲಾಗಿದೆ.

    ಜನರ ದೈನಂದಿನ ಮೂಲ ಸೌಕ ರ್ಯಗಳಿಗೆ ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿದೆ. ಜನ ಆತಂಕಪಡುವ ಅಗತ್ಯವಿಲ್ಲ. ಜಿಲ್ಲಾಡಳಿತದೊಟ್ಟಿಗೆ ಸಹಕಾರ ನೀಡಬೇಕು.
    | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

    ತಪ್ಪಿದ್ದೆಲ್ಲಿ..?:
    ವಿದೇಶದಿಂದ ಬಂದ ಬಹುತೇಕ ವ್ಯಕ್ತಿಗಳನ್ನು ಆರೋಗ್ಯಇಲಾಖೆ ಗುರುತಿಸಿ ತಪಾಸಣೆಗೆ ಒಳಪಡಿಸಿದೆ. ಮನೆಯಲ್ಲೇ ಇರಿ ಹೊರಗೆ ತಿರುಗಬೇಡಿ ಎಂಬ ಸೂಚನೆಯನ್ನೂ ನೀಡಿದೆ. ನಮ್ಮ ಸೂಚನೆಯನ್ನು ಅವರು ಪಾಲಿಸುತ್ತಾರೆ ಎಂಬ ನಂಬಿಕೆಯಲ್ಲಿ ಆಡಳಿತವಿತ್ತು. ಆದರೆ, ಅದಕ್ಕೆ ವಿದೇಶಿಗರು ಸೊಪ್ಪು ಹಾಕಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ವಲ್ಪ ಲಕ್ಷಣವಿದ್ದರೂ ಎಲ್ಲರನ್ನೂ ಆಸ್ಪತ್ರೆಯಲ್ಲೋ ಅಥವಾ, ಬೇರೆಡೆ ನಿಗಾದಲ್ಲಿ ಇರಿಸಬೇಕಿತ್ತು ಎಂಬ ಒತ್ತಾಯ ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts