More

    ಕರೊನಾ ಸಮಯದ ಮುಕ್ತಿದಾತರು

    ಸುಭಾಸ ಧೂಪದಹೊಂಡ ಕಾರವಾರ

    ಅದು ಕಾರವಾರ ಕ್ರಿಮ್ಸ್​ನಲ್ಲಿ ಕೋವಿಡ್ ನಿಂದ ಮೊದಲ ಸಾವು ಸಂಭವಿಸಿದ ದಿನ. ಮನೆಯವರು ತಮಗೆ ಮೃತ ದೇಹ ಬೇಡ ಎಂದು ಬರೆದುಕೊಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಊರವರು ಸ್ಮಶಾನದ ಎದುರು ಪ್ರತಿಭಟನೆ ನಡೆಸಿದ್ದರು. ಪಿಪಿಇ ಕಿಟ್ ಹಾಕಿ ಕುಳಿತಿದ್ದ ಒಂದಿಬ್ಬರು ಪೌರ ಕಾರ್ವಿುಕರು ಭಯದಿಂದ ಬಿಟ್ಟು ಹೋಗಿದ್ದರು. ಸಾವು ಸಂಭವಿಸಿ ಆಗಲೇ ನಾಲ್ಕೈದು ತಾಸು ಕಳೆದಿತ್ತು. ಶವವನ್ನು ಆಂಬುಲೆನ್ಸ್​ನಲ್ಲಿ ಇಟ್ಟುಕೊಂಡು ಊರೆಲ್ಲ ಸುತ್ತುವ ಪರಿಸ್ಥಿತಿ.

    ‘ಯಾರೂ ಇಲ್ಲದಿದ್ದರೆ ಅಂಥ ಶವಕ್ಕೆ ನಾವೇ ತಾನೆ ದಿಕ್ಕು ಸರ್. ನಾವೂ ಮಾಡದಿದ್ದರೆ ಆ ಕೆಲಸ ಇನ್ಯಾರು ಮಾಡುತ್ತಾರೆ’ ಹೀಗೆ ನಿರ್ಲಿಪ್ತತೆಯಿಂದ ಹೇಳಿ. ಆ ಕಾರ್ಯ ಮಾಡಿದವರು ಕಾರವಾರ ನಗರಸಭೆ ಪೌರ ಕಾರ್ವಿುಕ ಶ್ರೀನಿವಾಸ ಹರಿಜನ ಹಾಗೂ ಸಹವರ್ತಿಗಳು.

    ಕರೊನಾಕ್ಕೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಭಯ, ತಪ್ಪು ಕಲ್ಪನೆಗಳ ಕಾರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಯಾರೂ ಮುಂದೆ ಬರುತ್ತಿಲ್ಲ. ಆದರೆ, ಪೌರ ಕಾರ್ವಿುಕರು ಧೈರ್ಯದಿಂದ ಹೆಗಲು ಕೊಟ್ಟು ಆ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ.

    ಕಾರವಾರದಲ್ಲಿ ಇದುವರೆಗೆ ಮೃತಪಟ್ಟ ನಾಲ್ವರು ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮೊದಲ ಎರಡು ಸಂದರ್ಭಗಳಲ್ಲಿ ಶ್ರೀನಿವಾಸ ಹರಿಜನ, ಪ್ರಕಾಶ, ಮೌನೇಶ, ವಿಜಯ ಹರಿಜನ, ಪೆದ್ದಣ್ಣ ಹರಿಜನ ನಡೆಸಿದ್ದರು.

    ಮೂರನೇ ಶವವನ್ನು ಕೆ.ಪ್ರಸಾದ, ಯರ್ರಿಸ್ವಾಮಿ, ಎಸ್.ವೆಂಕಟೇಶ, ಸಂತೋಷ ಮಂಜ ನಡೆಸಿದ್ದಾರೆ. ನಾಲ್ಕನೇ ಶವಕ್ಕೆ ನಾಗೇಶ ಹರಿಜನ, ನಾಗರಾಜ ರವಿ, ವೀರೇಂದ್ರ ಶಿರಾಲಿಕರ್ ಮಾಡಿದ್ದಾರೆ. ಮುಕ್ತಿ ವಾಹನದ ಚಾಲಕರಾದ ಬಾಲಚಂದ್ರ, ರಾಜು ಭಂಡಾಡಿ, ಸಹಾಯಕರಾದ ರಾಜು ಮುರ್ಡೆಶ್ವರ ಎಲ್ಲ ಸಂದರ್ಭಗಳಲ್ಲೂ ತೆರಳಿ ಸಹಕರಿಸಿದ್ದಾರೆ.

    ಒಂದು ಶವ ಕೊಂಡೊಯ್ದು ಕಟ್ಟಿಗೆ ಹಾಕಿ ಅಂತ್ಯಸಂಸ್ಕಾರ ಮಾಡಿದ ನಂತರ ಅದು ಪೂರ್ತಿ ಸುಡುವವರೆಗೂ ಅಲ್ಲಿರಬೇಕು. ನಂತರ ಅದರ ಬೂದಿ ಸಂಗ್ರಹಿಸಿ ಆ ಸ್ಥಳ ತೊಳೆದು ಸ್ಯಾನಿಟೈಸ್ ಮಾಡಬೇಕು. ಎಲ್ಲ ನಡೆಯುವಾಗ ಕನಿಷ್ಠ ಮೂರು ತಾಸು ಬೇಕಾಗುತ್ತದೆ. ಅದೆಲ್ಲವನ್ನೂ ಪೌರ ಕಾರ್ವಿುಕರ ಈ ತಂಡ ನಿಂತು ಜವಾಬ್ದಾರಿಯಿಂದ ಮಾಡುತ್ತಿದೆ.

    ಬದಲಾದ ಪರಿಸ್ಥಿತಿ: ಈಗ ನಿಧಾನವಾಗಿ ಪರಿಸ್ಥಿತಿ ಬದಲಾಗುತ್ತಿದೆ. ಕಳೆದ ವಾರ ಕರೊನಾದಿಂದ ಮೃತಪಟ್ಟ ಶಿರಸಿಯ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಆತನ ಊರಿನಲ್ಲೇ ಅವರ ಸಂಬಂಧಿಕರೇ ನಡೆಸಿದ್ದಾರೆ. ಎರಡು ದಿನದ ಹಿಂದೆ ಮೃತಪಟ್ಟ ಕಾರವಾರ ಕೆಎಚ್​ಬಿಯ ವೃದ್ಧೆಯ ಅಂತ್ಯಸಂಸ್ಕಾರವನ್ನೂ ಆಕೆಯ ಮಕ್ಕಳೇ ಪಿಪಿಇ ಕಿಟ್ ತೊಟ್ಟು ನಡೆಸಿದ್ದಾರೆ.

    ಪಿಪಿಇ ಕಿಟ್ ಹಾಕಿದ ಅಧಿಕಾರಿಗಳು: ಶವ ಸಂಸ್ಕಾರ ನಡೆಸುವ ಕಾರ್ಯದಲ್ಲಿ ತಡ ರಾತ್ರಿಯಾದರೂ ಸ್ಥಳದಲ್ಲೇ ನಿಂತು ಎಸಿ ಪ್ರಿಯಾಂಗಾ ಎಂ., ತಹಸೀಲ್ದಾರ್ ಆರ್.ವಿ.ಕಟ್ಟಿ, ಡಿವೈಎಸ್​ಪಿ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್​ಐ ಸಂತೋಷಕುಮಾರ್ ಸೇರಿ ಹಲವರು ಶ್ರಮಿಸುತ್ತಿದ್ದಾರೆ.

    ‘ಮೊದಲ ದಿನ ಕೆಲ ಪೌರ ಕಾರ್ವಿುಕರು ಆತಂಕ ವ್ಯಕ್ತಪಡಿಸಿ ಈ ಕಾರ್ಯಕ್ಕೆ ಹಿಂದೆ ಸರಿದಿದ್ದರಿಂದ ನಾವೂ ಪಿಪಿಇ ಕಿಟ್ ಹಾಕಬೇಕಾಯಿತು. ನಂತರ ಅವರಲ್ಲೂ ಧೈರ್ಯ ಬಂತು. ಪಾಳಿ ಮಾಡಿದ್ದೇವೆ. ಅಂತ್ಯ ಸಂಸ್ಕಾರ ನೆರವೇರಿಸಿದ ನಂತರ ಎರಡು ದಿನ ಅವರಿಗೆ ರಜೆ ನೀಡುತ್ತೇವೆ. ಅವರಿಗೆ ನಗರಸಭೆಯಲ್ಲೇ ಒಂದು ಕೊಠಡಿ ನೀಡಿದ್ದೇವೆ. ಸ್ನಾನ, ತಿಂಡಿ, ಊಟ ಎಲ್ಲ ಅಲ್ಲೇ ಒದಗಿಸಲಾಗುತ್ತದೆ’ ಎನ್ನುತ್ತಾರೆ ನಗರಸಭೆ ಎಇಇ ಆರ್.ಪಿ.ನಾಯ್ಕ.

    ವ್ಯಕ್ತಿ ಮೃತಪಟ್ಟ ನಂತರ ವೈರಸ್ ಕೂಡ ಸತ್ತು ಹೋಗುತ್ತದೆ. ಮತ್ತು ಎಲ್ಲ ಸುರಕ್ಷತೆ ವಹಿಸಿಯೇ ನಾವು ಅಂತ್ಯಸಂಸ್ಕಾರ ನಡೆಸುತ್ತೇವೆ. ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. | ರಾಮಚಂದ್ರ ಕಟ್ಟಿ ತಹಸೀಲ್ದಾರ್ ಕಾರವಾರ

    ಪೌರ ಕಾರ್ವಿುಕರು ಎಂದರೆ ಸೈನಿಕರಿದ್ದಂತೆ. ಸರ್ಕಾರ ಈ ಜವಾಬ್ದಾರಿ ವಹಿಸಿದೆ ಎಂದರೆ ಹಿಂದೆ ಸರಿಯುವುದು ತರವಲ್ಲ. ಇದು ನಮ್ಮ ಜವಾಬ್ದಾರಿ ಎಂದು ಕೆಲಸ ಮಾಡಿದ್ದೇವೆ. ಜನರೂ ಅನವಶ್ಯಕ ಭಯ ಬಿಟ್ಟು, ಇಂಥ ಕಾರ್ಯಕ್ಕೆ ಸಹಕಾರ ನೀಡಿದರೆ ನಮಗೂ ಸ್ಪೂರ್ತಿ ಬರುತ್ತದೆ. | ಶ್ರೀನಿವಾಸ ಹರಿಜನ

    ಇದುವರೆಗೆ ಸುಮಾರು 50 ಅನಾಥ ಶವಗಳನ್ನು ದಫನ್ ಮಾಡಿದ್ದೇನೆ. ಆದರೂ ಕರೊನಾ ಮೊದಲ ಶವದ ಅಂತ್ಯಸಂಸ್ಕಾರದಲ್ಲಿ ಸ್ವಲ್ಪ ಭಯ ಉಂಟಾಯಿತು. ಈಗ ಆತಂಕವೆಲ್ಲ ದೂರವಾಗಿದೆ. ಅಂತ್ಯಸಂಸ್ಕಾರ ಮಾಡಿ ಬಂದ ನಂತರ ಸ್ನಾನ ಮಾಡಿ. ಎಲ್ಲ ಮುನ್ನೆಚ್ಚರಿಕೆ ವಹಿಸುತ್ತೇವೆ. ಪ್ರಕಾಶ ನಗರಸಭೆ ಮೇಲ್ವಿಚಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts