More

    ಕರೊನಾ ವಿಷಯದಲ್ಲಿ ರಾಜಕಾರಣ ಸಲ್ಲದು

    ಚಿಕ್ಕೋಡಿ: ಕೋವಿಡ್ -19 ಎರಡನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ, ಪ್ರತಿಪಕ್ಷಗಳು ಕರೊನಾ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 7 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಆವರಣದಲ್ಲಿ ಸೇವಾ ಹಿ ಸಂಘಟನೆ, ಪುರಸಭೆ ಸಹಯೋಗದಲ್ಲಿ ಭಾನುವಾರ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್, ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

    ಕರೊನಾದಿಂದ ಉಂಟಾಗಿರುವ ನಾನಾ ರೀತಿಯ ಸಮಸ್ಯೆಗಳಿಂದಾಗಿ ಜನರಲ್ಲಿ ಸಾಕಷ್ಟು ತಿಳಿವಳಿಕೆ ಬಂದಿದೆ. ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಒಂದೇ ಎಲ್ಲ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲ. ಸಂಘ-ಸಂಸ್ಥೆಗಳು, ದಾನಿಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಲಸಿಕೆ ಕುರಿತು ಆರಂಭದಲ್ಲಿ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈಗ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದರು.

    ಚಿಕ್ಕೋಡಿ ಜನತೆ ಆರೋಗ್ಯದ ಹಿತದೃಷ್ಟಿಯಿಂದ ಪುರಸಭೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್‌ನಲ್ಲಿನ ಜನರು, ಸದಸ್ಯರು ಹಾಗೂ ಆರೋಗ್ಯ ಮತ್ತು ಪುರಸಭೆ ಇಲಾಖೆ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

    ಆರ್‌ಎಸ್‌ಎಸ್ ಕಾರ್ಯಕರ್ತ ಅಮೃತ ಕುಲಕರ್ಣಿ ಮಾತನಾಡಿ, ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ. ಕಳೆದ 70 ವರ್ಷಗಳಿಂದ ವಿರೋಧ ಪಕ್ಷಗಳು ಆರ್‌ಎಸ್‌ಎಸ್ ವಿರುದ್ಧ ಅಪಪ್ರಚಾರ ಮಾಡಿಕೊಂಡು ಬರುತ್ತಿವೆ. ಆದರೆ, ಸಂಘ ಮಾತ್ರ ತನ್ನ ಸಾಮಾಜಿಕ ಚಟುವಟಿಕೆಗಳಿಂದ ಹಿಂದೆ ಸರಿದಿಲ್ಲ ಎಂದು ತಿಳಿಸಿದರು.

    ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಮಂಡಲ ಅಧ್ಯಕ್ಷ ಸಂಜಯ ಪಾಟೀಲ, ಸತೀಶ ಅಪ್ಪಾಜಿಗೋಳ, ಶಾಂಭವಿ ಅಶ್ವತ್ಥಪುರ, ವಿಶ್ವನಾಥ ಕಾಮಗೌಡ, ಸಂತೋಷ ಜೂಗುಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts