More

    ಕರೊನಾ ಲಸಿಕೆ ಪೂರೈಕೆಯಲ್ಲಿ ಕೊರತೆ, ನೆಲಮಂಗಲದಲ್ಲಿ ವ್ಯಾಕ್ಸಿನ್ ಪಡೆಯಲು ಸರತಿ ಸಾಲು, 70 ಸಾವಿರ ಬೇಡಿಕೆಗೆ 5 ಸಾವಿರ ಡೋಸ್ ಪೂರೈಕೆ

    ನೆಲಮಂಗಲ: ಜಿಲ್ಲೆಯಾದ್ಯಂತ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಸಮರ್ಪಕವಾಗಿ ಲಸಿಕೆ ಪೂರೈಸಲು ವಿಲವಾಗಿದೆ.

    ನಗರದ ಸಾರ್ವಜನಿಕ ಆಸ್ಪತ್ರೆ ಸೇರಿ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಆಯಾ ಭಾಗದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ಆದರೆ ಕಳೆದ ಶುಕ್ರವಾರ ಇಡೀ ತಾಲೂಕಿಗೆ ಲಸಿಕೆ ಪೂರೈಕೆಯಾಗಿಲ್ಲ. ಲಸಿಕೆ ಪಡೆಯಲು ಬಂದವರು ಹಾಗೆಯೇ ಮರಳಬೇಕಾಯಿತು. ಐದಾರು ದಿನಗಳಿಂದಲೂ ಸಮರ್ಪಕವಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    70 ಸಾವಿರ ಡೋಸ್‌ಗೆ ಬೇಡಿಕೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿದಿನ 70 ಸಾವಿರ ಡೋಸ್ ಲಸಿಕೆಗಾಗಿ ಬೇಡಿಕೆ ಇದೆ. ಆದರೆ, ಸರ್ಕಾರ ಕೇವಲ 5 ಸಾವಿರ ಡೋಸ್ ಮಾತ್ರ ನೀಡುತ್ತಿದೆ. ಇದರಿಂದಾಗಿ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೂ ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಸುತ್ತಿಲ್ಲ. ಒಂದು ದಿನ 150ರಿಂದ 250 ಡೋಸ್, ತಾಲೂಕಿನ ಪಿಎಚ್‌ಸಿಗಳಿಗೆ 100 ಡೋಸ್ ಲಸಿಕೆ ಕೊಟ್ಟರೆ, ಕೆಲವೊಮ್ಮೆ ಕೇವಲ 50 ಡೋಸ್ ಲಸಿಕೆ ಕೊಡಲಾಗುತ್ತಿದೆ. ಹಾಗಾಗಿ ಸಾಲಿನಲ್ಲಿ ನಿಲ್ಲುವ 100ಕ್ಕೂ ಹೆಚ್ಚು ಜನರು ಲಸಿಕೆ ಸಿಗದೆ ಹಿಂದಿರುಗುತ್ತಿದ್ದಾರೆ.

    ಜನರನ್ನು ಕರೆತಂದರೂ ಪ್ರಯೋಜನವಿಲ್ಲ: ಲಸಿಕಾ ಕೇಂದ್ರಗಳಿಗೆ ಜನರನ್ನು ಕರೆತರಲು ಜಿಲ್ಲಾಡಳಿತ ಬಸ್ ಸೌಲಭ್ಯವನ್ನೂ ಕಲ್ಪಿಸಿದೆ. ಆದರೆ, ನಿಗದಿತ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದ ಕಾರಣ, ಜನರನ್ನು ಲಸಿಕಾ ಕೇಂದ್ರಗಳಿಗೆ ಕರೆತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.

    ಸರ್ವರ್ ಬಿಜಿ, ಒಟಿಪಿ ಲೇಟ್: ಸಾರ್ವಜನಿಕ ಆಸ್ಪತ್ರೆಗೆ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಸದ್ಯ ನಗರದ ಸಾರ್ವಜನಿಕರ ಆಸ್ಪತ್ರೆಗೆ ಪ್ರತಿದಿನ 120ಕ್ಕೂ ಹೆಚ್ಚು ಜನರು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಪರೀಕ್ಷೆಗೂ ಮುನ್ನ ಸಾರ್ವಜನಿಕರ ವಿಳಾಸದ ಮಾಹಿತಿ ಸಂಗ್ರಹಿಸಿ ಅಪ್‌ಲೋಡ್ ಮಾಡಲಾಗುತ್ತದೆ. ಆದರೆ ಸರ್ವರ್ ಬಿಜಿ ಕಾರಣದಿಂದ ಒಟಿಪಿ ಬರುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಪರೀಕ್ಷೆಯೂ ವಿಳಂಬವಾಗುತ್ತಿದೆ ಎಂದ ಆರೋಪ ಕೇಳಿ ಬಂದಿದೆ.

    ವರದಿಯಲ್ಲಿ ವಿಳಂಬ: ಕರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗರ್ಭಿಣಿಯರು, ವಯೋವೃದ್ಧರು ಸೇರಿ ಇತರೆ ಅನಾರೋಗ್ಯಪೀಡಿತರು ಪರೀಕ್ಷೆಗೆ ಒಳಪಡುತ್ತಿದ್ದಾರೆ. ಆದರೆ ಪರೀಕ್ಷೆಯ ವರದಿ ಬರುವುದು ವಿಳಂಬವಾಗುತ್ತಿದೆ. ಇದರಿಂದ ಗರ್ಭಿಣಿಯರು ಇನ್ನಿತರ ಅನಾರೋಗ್ಯಪೀಡಿತರು ಸಮರ್ಪಕ ಚಿಕಿತ್ಸೆ ಪಡೆಯಲು ತೊಂದರೆಯುಂಟಾಗುತ್ತಿದೆ. ಇದು ಸೋಂಕು ಹರಡಲು ಕಾರಣವಾಗಿದೆ ಎನ್ನಬಹುದು.

    ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ತಾಲೂಕಿಗಳಿಗೂ ಬೇಡಿಕೆಗೆ ತಕ್ಕಷ್ಟು ಲಸಿಕೆ ಪೂರೈಸಬೇಕು. ಇದರಿಂದ ಸೋಂಕಿಗೆ ತುತ್ತಾಗುವುದು ಕಡಿಮೆಯಾಗುವುದು ಒಂದೆಡೆಯಾದರೆ ಸೋಂಕಿತರು ಸಾವಿನ ದವಡೆಯಿಂದ ಪಾರಾಗಲು ಅನುಕೂಲವಾಗುತ್ತದೆ.
    ಸಿದ್ದರಾಜು, ತಾವರೆಕೆರೆ

    ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ಹೆಚ್ಚು ಮಾಡುವ ಜತೆಗೆ ವರದಿ ತ್ವರಿತವಾಗಿ ಬರುವಂತೆ ಮಾಡಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯ.
    ಎನ್. ಗಣೇಶ್, ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts