More

    ಕರೊನಾ ನಿರ್ವಹಣೆ ಕಿಟ್ ಖರೀದಿಯಲ್ಲಿ ಅವ್ಯವಹಾರ?

    ಶಿವಮೊಗ್ಗ: ಕರೊನಾ ನಿರ್ವಹಣೆಗೆ ಕಿಟ್ ಖರೀದಿ ವೇಳೆ ನಿಯಮ ಉಲ್ಲಂಘಿಸಿ ದುಬಾರಿ ಬೆಲೆ ತೆತ್ತು ಖರೀದಿ ಪ್ರಕ್ರಿಯೆ ನಡೆದಿದೆಯೇ? ಕಡಿಮೆ ಹಣಕ್ಕೆ ಮಾಸ್ಕ್ ಪೂರೈಕೆ ಮಾಡಿದ್ದನ್ನು ಹಿಂದಿರುಗಿಸಿ ಹೆಚ್ಚಿನ ಹಣಕ್ಕೆ ಮಾಸ್ಕ್ ಖರೀದಿಸಲಾಗಿದೆಯೇ? ಹೀಗೆಂದು ಪಾಲಿಕೆ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿವೆ.

    ಶುಕ್ರವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್, ಮಾಸ್ಕ್, ಸ್ಯಾನಿಟೈಸರ್, ರಾಸಾಯನಿಕ, ಪಿಪಿಇ ಕಿಟ್ ಎಲ್ಲದರ ಖರೀದಿ ಬೆಲೆ ನಿಗದಿಪಡಿಸಿ ರಾಜ್ಯ ಸರ್ಕಾರವೇ ಸುತ್ತೋಲೆ ಹೊರಡಿಸಿದೆ. ಅದನ್ನು ಮೀರಿ ಹೆಚ್ಚಿನ ಬೆಲೆಗೆ ಪಾಲಿಕೆಯಿಂದ ಖರೀದಿಸಲಾಗಿದೆ ಎಂದು ದೂರಿದರು.

    ದಿನಸಿ ಕಿಟ್ ಖರೀದಿಗೆ ಸ್ಥಾಯಿ ಸಮಿತಿ ಸಭೆಯಲ್ಲಿ ದರ ನಿಗದಿಪಡಿಸಲಾಗಿತ್ತು. ಅದನ್ನು ಮೀರಿ ಹೆಚ್ಚು ಹಣ ತೆತ್ತು ದಿನಸಿ ಕಿಟ್ ಖರೀದಿಸಲಾಗಿದೆ. ಸರ್ಕಾರ ಎನ್-95 ಮಾಸ್ಕ್ ಒಂದಕ್ಕೆ ಖರೀದಿ ದರ 240 ರೂ. ನಿಗದಿಪಡಿಸಿದೆ. ಆದರೆ 340 ರೂ. ನೀಡಿ ಮಾಸ್ಕ್ ಖರೀದಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಆಯುಕ್ತರ ಸ್ಪಷ್ಟನೆ: ಕರೊನಾ ನಿರ್ವಹಣೆ ಕಿಟ್ ಅವ್ಯವಹಾರ ಆರೋಪಕ್ಕೆ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಲಾಕ್​ಡೌನ್ ಸಂದರ್ಭದಲ್ಲಿ ಹಲವು ಬಾರಿ ಕರೊನಾ ನಿರ್ವಹಣೆ ಕಿಟ್​ಗಳು, ದಿನಸಿ ಪದಾರ್ಥಗಳ ಬೆಲೆಯಲ್ಲಿ ಏರಿಳಿತವಾಗಿದೆ. ರಾಸಾಯನಿಕ ಮೈಸೂರಿನಿಂದ ಸರಬರಾಜಾಗಬೇಕಿತ್ತು. ಆದರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಅವರು ಪೂರೈಸಲಿಲ್ಲ. ಹೀಗಾಗಿ ಬೇರೆ ಕಡೆ ಖರೀದಿಸಲಾಯಿತು ಎಂದರು.

    240 ರೂ.ಗೆ ಖರೀದಿಸಿದ ಎನ್-95 ಮಾಸ್ಕ್​ಗಳ ಗುಣಮಟ್ಟ ಸರಿಯಿಲ್ಲ ಎಂದು ಡಿಎಚ್​ಒ ತಿಳಿಸಿದ ಮೇಲೆ ಹೆಚ್ಚು ಹಣ ನೀಡಿ ಗುಣಮಟ್ಟದ ಮಾಸ್ಕ್ ಖರೀದಿಸಲಾಯಿತು. ತರ್ತ ಸಂದರ್ಭದಲ್ಲಿ ಖರೀದಿಗೆ ಕೆಲ ವಿನಾಯಿತಿ ಇದೆ. ಆದರೆ ನಾವು ಎಲ್ಲವನ್ನೂ ಪಾರದರ್ಶಕವಾಗಿ ನಡೆಸಿದ್ದೇವೆ ಎಂದರು. ಮೇಯರ್ ಸುವರ್ಣಾ ಶಂಕರ್ ಕೂಡ ಆಯುಕ್ತರ ಮಾತುಗಳನ್ನು ಬೆಂಬಲಿಸಿದರು. ಉಪಮೇಯರ್ ಸುರೇಖಾ ಮುರಳೀಧರ್ ಸಭೆಯಲ್ಲಿದ್ದರು.

    ಯಾವುದೇ ಪ್ರದೇಶ 14 ದಿನ ಸೀಲ್​ಡೌನ್: ಕರೊನಾ ಪಾಸಿಟಿವ್ ಇರುವ ಬಗ್ಗೆ ನಮಗೆ ಸಂಜೆ ಬಳಿಕ ಮಾಹಿತಿ ದೊರೆಯುತ್ತಿದೆ. ಹೀಗಾಗಿ ಆ ಭಾಗವನ್ನು ಸೀಲ್​ಡೌನ್ ಮಾಡುವುದು ವಿಳಂಬವಾಗುತ್ತಿದೆ. ಯಾವುದೇ ಪ್ರದೇಶವನ್ನು 14 ದಿನ ಸೀಲ್​ಡೌನ್ ಮಾಡಬೇಕು. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಗಡಿ ಗುರುತಿಸಿ ಬಫರ್ ಜೋನ್ ನಿರ್ಧರಿಸುತ್ತೇವೆ. ಆ ಭಾಗದಲ್ಲಿ ಪ್ರತಿದಿನ ತರಕಾರಿ, ಹಣ್ಣು ದೊರೆಯುವಂತೆ ನೋಡಿಕೊಳ್ಳುತ್ತೇವೆ. ಒಂದು ವೇಳೆ 14ನೇ ದಿನ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾದರೆ ಸೀಲ್​ಡೌನ್ ಮುಂದುವರಿಯುತ್ತದೆ ಎಂದು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸಭೆಗೆ ಮಾಹಿತಿ ನೀಡಿದರು.

    ಪಾಲಿಕೆಯಲ್ಲಿ ಕರೊನಾ ನಿರ್ವಹಣೆ ಕುರಿತು ಕೇಳಿಬಂದ ಮಾತುಗಳು

    * ಸಂಜೆ 6ರ ಲಾಕ್​ಡೌನ್ ಪ್ರಯೋಜನವಿಲ್ಲ. 8ರವರೆಗೆ ಅನೇಕ ಕಡೆ ಬಾಗಿಲು ತೆರೆದಿರುತ್ತವೆ

    * ಗಾಜನೂರು ಕರೊನಾ ಸೆಂಟರ್ ನಿರ್ವಹಣೆ ಸ್ಥಳೀಯ ಆಡಳಿತಕ್ಕೆ ನೀಡಿ. ಪಾಲಿಕೆ ಸಿಬ್ಬಂದಿಗೆ ಬೇಡ

    * ಸೀಲ್​ಡೌನ್ ಆದ ಏರಿಯಾಗಳ ಬಗ್ಗೆ, ಕರೊನಾ ಪಾಸಿಟಿವ್ ಬಗ್ಗೆ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಿ

    * ಕಂಟೇನ್ಮೆಂಟ್ ವಲಯದ ಇನ್ಸಿಡೆಂಟ್ ಆಫೀಸರ್ ಯಾರು ಎಂಬ ಮಾಹಿತಿ ಸದಸ್ಯರಿಗೆ ನೀಡಬೇಕು

    * ಈ ಸಂದರ್ಭದಲ್ಲಿ ಅಧಿಕಾರಿಗಳ ಆತ್ಮಸ್ಥೈರ್ಯ ಹೆಚ್ಚಿಸಬೇಕು. ಅವ್ಯವಹಾರ ಆರೋಪ ಸರಿಯಲ್ಲ

    * ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಪ್ರತ್ಯೇಕ ಸ್ಥಳ ಗುರುತಿಸಬೇಕು

    * ಪಾಲಿಕೆ ವ್ಯಾಪ್ತಿಯಲ್ಲಿ 4 ವಿಭಾಗಗಳಾಗಿ ಪ್ರತ್ಯೇಕಿಸಿ ಕರೊನಾ ನಿರ್ವಹಣೆ ಮಾಡಬೇಕು

    * ಪಾಲಿಕೆ ಸ್ಥಳೀಯ ಸದಸ್ಯರನ್ನೊಳಗೊಂಡ ವಾರ್ಡ್ ಸಮಿತಿ ರಚಿಸಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts