More

    ಕರೊನಾ ನಿಯಂತ್ರಿಸಲು ವಿಫಲ

    ಬೆಳಗಾವಿ: ಕೋವಿಡ್-19 ಎರಡನೆಯ ಅಲೆಗೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವಂತಾಯಿತು. ಬಡವರು, ಕೂಲಿ ಕಾರ್ಮಿಕರು ಆದಾಯ ಇಲ್ಲದೆ ಇನ್ನೂ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ವಾಗ್ದಾಳಿ ನಡೆಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಸರಿಯಾಗಿ ಲಸಿಕೆ ವಿತರಣೆ ಆಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 40 ಲಕ್ಷ ಜನಸಂಖ್ಯೆಯ ಪೈಕಿ ಕೇವಲ 1.70 ಲಕ್ಷ ಜನರಿಗೆ ಒಂದು ಮತ್ತು ಎರಡು ಡೋಸ್ ಲಸಿಕೆ ನೀಡಲಾಗಿದೆ. ಇನ್ನುಳಿದ ಜನರಿಗೆ ಲಸಿಕೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

    ಲಾಕ್‌ಡೌನ್‌ನಿಂದ ಕರೊನಾ ಸೋಂಕು ನಿಯಂತ್ರಣ ಮಾಡಬಹುದು ಎಂಬ ಭ್ರಮೆಯಿಂದ ಸರ್ಕಾರ ಮೊದಲು ಹೊರಬಂದು ಮೊದಲು ರಾಜ್ಯದ ಎಲ್ಲ ಜನರಿಗೆ ಲಸಿಕೆ ನೀಡುವ ಕೆಲಸ ಮಾಡಬೇಕು. ಇನ್ನು, ಕೇಂದ್ರ ಸರ್ಕಾರ ದೇಶದ ಜನರಿಗೆ ಲಸಿಕೆ ನೀಡುವುದನ್ನು ಬಿಟ್ಟು 195 ದೇಶಗಳಿಗೆ ಲಸಿಕೆ ರಫ್ತು ಮಾಡುತ್ತಿದೆ. ಹೀಗಾಗಿ ಭಾರತೀಯರಿಗೆ ಲಸಿಕೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಾಕ್‌ಡೌನ್ ಸಂದರ್ಭದಲಿ ಕರೊನಾ ಸೋಂಕಿನಿಂದ ಹಳ್ಳಿಗಳಲ್ಲಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರವು ಆಸ್ಪತ್ರೆಗಳಲ್ಲಿ ಮೃತಪಟ್ಟಿರುವವರ ಮಾಹಿತಿ ಮಾತ್ರ ನೀಡುತ್ತಿದೆ. ಸರ್ಕಾರದ ಲೆಕ್ಕಕ್ಕೂ ವಾಸ್ತವಕ್ಕೂ ವ್ಯತ್ಯಾಸ ಇದೆ. ರಾಜ್ಯದಲ್ಲಿ ಸರ್ಕಾರ ನೀಡಿರುವ ಲೆಕ್ಕಕ್ಕಿಂತ ಎರಡು ಪಟ್ಟು ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಎಸ್.ಆರ್. ಪಾಟೀಲ ಆರೋಪಿಸಿದರು.

    ಲಸಿಕೆ ಪ್ರಮಾಣ ಹೆಚ್ಚಿಸಿ: ಕರೊನಾ 2ನೇ ಅಲೆಯಿಂದ ರಾಜ್ಯದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ತಜ್ಞರ ಸಮಿತಿ 3ನೇ ಅಲೆ ಬರಲಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಲಸಿಕೆ ಪ್ರಮಾಣ ಶೇ.50 ಹೆಚ್ಚಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಎಸ್.ಆರ್. ಪಾಟೀಲ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts