More

    ಕರೊನಾ ನಡುವೆಯೂ ಅಭಿವೃದ್ಧಿ ಪರ್ವ

    ಶಿವಮೊಗ್ಗ: ಕರೊನಾ ನಡುವೆಯೂ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಶಿವಮೊಗ್ಗ-ತುಮಕೂರು ಚತುಷ್ಪಥ ರಸ್ತೆ, ಶಿವಮೊಗ್ಗ ಹೊರ ವರ್ತಲ ರಸ್ತೆ, ಏತ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ದೊರೆತಿದ್ದು, ಎರಡ್ಮೂರು ವರ್ಷದಲ್ಲೇ ಜಿಲ್ಲೆಯ ಚಿತ್ರಣ ಬದಲಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ನಗರದ ಹೊರವಲಯದ ಹರಕೆರೆ ಬಳಿ ತುಂಗಾನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಹೊಸಳ್ಳಿ ಏತ ನೀರಾವರಿ ಹಾಗೂ ಹೊರ ವರ್ತಲ ರಸ್ತೆ, ಸೇತುವೆ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ರಸ್ತೆ, ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿ, ನೀರಾವರಿ, ಕೈಗಾರಿಕೆಗಳಿಗೆ ಅವಕಾಶ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸೇರಿ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾಗಿರುವ ಎಲ್ಲ ರೀತಿಯ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಈ ಮೂಲಕ ಬಹುದಿನದ ಕನಸು ನನಸಾಗುವ ಹಂತದಲ್ಲಿದೆ ಎಂದರು.

    ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ವಹಿಸುತ್ತಿರುವ ತುಮಕೂರು-ಶಿವಮೊಗ್ಗ ರಸ್ತೆ ನಿರ್ವಣದ ಭಾಗವಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಸ್ತುತ ಎಂಆರ್​ಎಸ್ ಸರ್ಕಲ್​ನಿಂದ ಶ್ರೀರಾಂಪುರದವರೆಗಿನ 15 ಕಿಮೀ ವರ್ತಲ ರಸ್ತೆಗೆ ಅನುಮೋದನೆ ಸಿಕ್ಕಿದ್ದು ಹೊಳೆಹೊನ್ನೂರು ರಸ್ತೆ (ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಹಿಂಭಾಗ)ಯಿಂದ ಎಂಆರ್​ಎಸ್​ವರೆಗಿನ 4 ಕಿಮೀ ಹಾಗೂ ಶ್ರೀರಾಮಪುರದಿಂದ ಹೊಳೆಹೊನ್ನೂರು ರಸ್ತೆವರೆಗಿನ 15 ಕಿಮೀ ವರ್ತಲ ರಸ್ತೆಯ ಕಾಮಗಾರಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದರು.

    ಚತುಷ್ಪಥ ರಸ್ತೆಗೆ 4,425 ಕೋಟಿ ರೂ. ವೆಚ್ಚ: ರಾಜಧಾನಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ತುಮಕೂರು 216 ಕಿಮೀ ಚತುಷ್ಪಥ ರಸ್ತೆ ಕಾಮಗಾರಿಯು 4,425 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಭದ್ರಾವತಿ-ಶಿವಮೊಗ್ಗ ನಡುವಿನ ನಾಲ್ಕನೇ ಹಂತದ ಕಾಮಗಾರಿಯು ಆರಂಭಗೊಳಿಸುವಲ್ಲಿ ಇರಬಹುದಾದ ತಾಂತ್ರಿಕ ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆ, ರಸ್ತೆ ಬದಿಯ ಗಿಡ ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ದೊರೆತಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದ ಅವರು, ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಶ್ರಮ ಮಹತ್ವದ್ದಾಗಿದೆ ಎಂದರು.

    ಶಿವಮೊಗ್ಗ-ಚಿತ್ರದುರ್ಗದ ಬಾಕಿ ರಸ್ತೆ ಕಾಮಗಾರಿಗೆ 528 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗ ವಿದ್ಯಾನಗರದ ಬಳಿ ಎನ್​ಎಚ್ 13ರಲ್ಲಿ ಬರುವ ಎಲ್.ಸಿ.46ಕ್ಕೆ ಮೇಲ್ಸೇತುವೆ ನಿರ್ವಣಕ್ಕೆ 42 ಕೋಟಿ ರೂ. ಬಿಡುಗಡೆ ಮಾಡುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಏತ ನೀರಾವರಿಗೆ 1,550 ಕೋಟಿ ರೂ.: 1,550 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಆಯನೂರು, ಸಿರಿಗೆರೆ, ತಮ್ಮಡಿಹಳ್ಳಿ, ಕುಂಸಿ ಸೇರಿ 75 ಕೆರೆಗಳಿಗೆ ನೀರು ಒದಗಿಸುವ ಹೊಸಳ್ಳಿ ಏತ ನೀರಾವರಿ, 225 ಕೆರೆಗಳಿಗೆ ನೀರು ಒದಗಿಸುವ ಶಿಕಾರಿಪುರದ ಪುರದಕೆರೆ ಏತ ನೀರಾವರಿ, ಸೊರಬದ ಮೂಗೂರು-ಮೂಡಿ ಏತ ನೀರಾವರಿ ಹಾಗೂ ಬೈಂದೂರಿನ ಸೌಕೂರು-ಸಿದ್ದಾಪೂರ ಏತ ನೀರಾವರಿ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿಗಳ ಜತೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ನಡೆದಿದೆ. ಮುಂದಿನ ಬೇಸಿಗೆಯೊಳಗೆ ಕೆರೆಗಳಿಗೆ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಏರ್​ಪೋರ್ಟ್ ಕಾಮಗಾರಿಗೆ ಮರು ಟೆಂಡರ್: ಕರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದ್ದು ಮೇ 13 ಕೊನೇ ದಿನ. ಏರ್​ಪೋರ್ಟ್ ಕಾಮಗಾರಿ ಇಷ್ಟರಲ್ಲೇ ಫೈನಲ್ ಆಗಬೇಕಿತ್ತು. ಆದರೆ ಕರೊನಾದಿಂದ ವಿಳಂಬವಾಗುತ್ತಿದೆ ಎಂದ ಬಿ.ವೈ.ರಾಘವೇಂದ್ರ, ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ 423 ಕೋಟಿ ರೂ. ವೆಚ್ಚದ ಸಿಗಂದೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದು ದೇಶದ ಕೆಲವೇ ಮಾದರಿ ಸೇತುವೆಗಳಲ್ಲೊಂದಾಗಲಿದೆ ಎಂದರು.

    ಸ್ಮಾರ್ಟ್​ಸಿಟಿ ರಾಜ್ಯದಲ್ಲಿ 3ನೇ ಸ್ಥಾನ: ಶಿವಮೊಗ್ಗದ ಮಹಾನಗರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್​ಸಿಟಿ ಕಾಮಗಾರಿಯು ದೇಶದಲ್ಲಿ 27ನೇ ಹಾಗೂ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಲಾಗುತ್ತಿದೆ. ಈ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳು ಸೀಮಿತ ಅವಧಿಯೊಳಗೆ ಪೂರ್ಣಗೊಳ್ಳಲಿವೆ. ಈ ಹಿಂದೆ ದೇಶದಲ್ಲಿ 37 ಹಾಗೂ ರಾಜ್ಯದಲ್ಲಿ 7ನೇ ಸ್ಥಾನದಲ್ಲಿತ್ತು ಎಂದು ಹೇಳಿದರು.

    62 ಮೊಬೈಲ್ ಟವರ್ ಅಳವಡಿಕೆ: ಬೆಂಗಳೂರು ಸೇರಿ ವಿವಿಧೆಡೆಯಿಂದ ವರ್ಕ್ ಫ್ರಂ ಹೋಮ್ ಕೆಲಸದ ನಿಮಿತ್ತ ಬಂದಿರುವ ನೌಕರರಿಗೆ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಆಗುತ್ತಿತ್ತು. ನೆಟ್​ವರ್ಕ್ ಸಮಸ್ಯೆಯಿಂದ ಕೆಲವರು ರಸ್ತೆ ಬದಿ ಕುಳಿತು ಕೆಲಸ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಪಂಗಳಲ್ಲಿರುವ ಉಚಿತ ವೈ-ಫೈ ಬಳಸಿಕೊಂಡು ಕೆಲಸ ಮಾಡುವಂತೆ ಸೂಚಿಸಲಾಗಿತ್ತು ಎಂದ ಅವರು, ಜಿಯೋ, ಏರ್​ಟೆಲ್ ಹಾಗೂ ಬಿಎಸ್​ಎನ್​ಎಲ್ ಜತೆಗೂಡಿ ಮಾತುಕತೆ ನಡೆಸಿದ್ದು, ಜಿಯೋದಿಂದ 63ರ ಪೈಕಿ 37 ಹಾಗೂ ಏರ್​ಟೆಲ್ 61ರ ಪೈಕಿ 25 ಟವರ್ ನಿರ್ವಿುಸಲಾಗಿದೆ. ಉಳಿದವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.

    ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ಹಾಗೂ ಜೋಗ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡಿದ್ದು, ಜೋಗಫಾಲ್ಸ್​ನಲ್ಲಿ ಜಿಪ್​ಲೈನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

    ಡಿಸಿ ಕೆ.ಬಿ.ಶಿವಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎಇಇ ಪೀರ್​ಪಾಷಾ, ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಬಳ್ಳೆಕೆರೆ ಸಂತೋಷ್, ದಿವಾಕರಶೆಟ್ಟಿ, ಮಾಲತೇಶ್, ಕಾಮತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts