More

    ಕರೊನಾ ತಪಾಸಣೆಗೆ ಒಳಗಾಗದಿದ್ರೆ ಜೈಲು

    ಕಲಬುರಗಿ: ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಹೋಗಿ ಬಂದವರು ಮತ್ತು ಅವರ ಸಂಪರ್ಕ ಹೊಂದಿದವರು ಕೂಡಲೇ ಸ್ವಯಂ ಪ್ರೇರಿತರಾಗಿ ಕರೊನಾ ವೈರಸ್ ಪರೀಕ್ಷೆಗೆ ಒಳಗಾಗಬೇಕು. ಮಾಹಿತಿ ನೀಡದೆ ಅಡಗಿ ಕುಳಿತರೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಖಡಕ್ ಎಚ್ಚರಿಕೆ ನೀಡಿದರು.
    ದೆಹಲಿಗೆ ಹೋದವರು ಇನ್ನೂ ಉಳಿದುಕೊಂಡಿದ್ದರೆ ಪತ್ತೆ ಮಾಡಿ ಕೇಸ್ ದಾಖಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸೂಚಿಸಿದ ಅವರು, ದೆಹಲಿಗೆ ಹೋಗಿ ಬಂದವರು ಅಕ್ಕಪಕ್ಕದಲ್ಲಿದ್ದರೂ ಮಾಹಿತಿ ನೀಡದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಿ. ವಿದೇಶಗಳಿಂದ ಬಂದವರು ಸಹ ತಪಾಸಣೆಗೆ ಒಳಗಾಗಬೇಕು ಎಂದರು.
    ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದಂತೆ, ಕರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಹಾನಗರ ಪಾಲಿಕೆ ವ್ಯಾಪ್ತಿ ಪ್ರದೇಶವನ್ನು ಸಂಪೂರ್ಣ ಸ್ಕ್ರೀನಿಂಗ್ ಮಾಡಬೇಕು ಆಯುಕ್ತರಿಗೆ ಸೂಚಿಸಿದರು. ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆಶಾ, ಪೌರಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿಗೆ ವಿಮಾ ಸೌಲಭ್ಯಕ್ಕೆ ನೋಂದಣಿ ಮಾಡಿಸಬೇಕು ಎಂದು ಡಿಎಚ್ಒಗೆ ನಿರ್ದೇಶನ ನೀಡಿದ್ದಾಗಿ ಕಾರಜೋಳ ತಿಳಿಸಿದರು.
    ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಕರೊನಾ ಸೋಂಕು ಕಂಡು ಬಂದಲ್ಲಿ ತಕ್ಷಣವೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಮ್ಸ್ಗೆ ಮಾಹಿತಿ ನೀಡಬೇಕು. ಅದನ್ನು ಮುಚ್ಚಿಟ್ಟರೆ ಅಪರಾಧವಾಗಲಿದೆ. ಅಂಥವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದರು.

    ಮಾದರಿ ಕೆಲಸ ಮಾಡುತ್ತಿರುವ ವೈದ್ಯರು
    ಕರೊನಾ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಾದರಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಮತ್ತು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
    ಕರೊನಾ ನೆಗೆಟಿವ್ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದರಿಂದ ಎಂಆರ್ಎಂಸಿ ಡೀನ್ಗೆ ನೋಟಿಸ್ ನೀಡಲಾಗಿತ್ತು, ಅದಕ್ಕೆ ಅವರು ಉತ್ತರದೊಂದಿಗೆ ಸಮಜಾಯಿಷಿ ಪತ್ರ ಸಲ್ಲಿಸಿದ್ದಾರೆ. ಕ್ಷಮಾಪಣೆ ಸಹ ಕೇಳಿ ಮುಂದಿನ ದಿನಗಳಲ್ಲಿ ಹಾಗಾಗದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ ಎಂದು ಡಿಸಿಎಂ ತಿಳಿಸಿದರು.
    ಕೂಡಲೇ ಖಾಸಗಿ ವೈದ್ಯರ ಸಭೆ ಕರೆದು ಸಹಕಾರ ಕೋರುವಂತೆ ಡಿಎಚ್ಒಗೆ ಸೂಚಿಸಿದ ಅವರು, ಕರೊನಾ ಹೊರತುಪಡಿಸಿ ಉಳಿದ ರೋಗಿಗಳಿಗೆ ತೊಂದರೆಯಾಗದಂತೆ ಖಾಸಗಿ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಲಾಗುವುದು ಎಂದರು.
    ಈಗಾಗಲೇ ಇಎಸ್ಐಸಿ ಮತ್ತು ಜಿಮ್ಸ್ಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಮಾಡಿ ಸುಮಾರು 690 ಬೆಡ್ಗಳನ್ನು ಸಿದ್ಧಪಡಿಸಲಾಗಿದೆ. ಕೆಬಿಎನ್ ಮತ್ತು ಬಸವೇಶ್ವರ ಆಸ್ಪತ್ರೆ ವೈದ್ಯರಿಗೆ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ತಿಳಿದುಕೊಳ್ಳಲು ಇಎಸ್ಐಸಿಗೆ ನಿಯೋಜಿಸಲಾಗುತ್ತಿದೆ. ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಅವರು ಸಮರ್ಥವಾಗಿ ಚಿಕಿತ್ಸೆ ನೀಡಲು ಸಜ್ಜುಗೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಡಿಸಿ ಶರತ್ ಮತ್ತು ಜಿಪಂ ಸಿಇಒ ಡಾ.ರಾಜಾ ಪಿ. ಹೇಳಿದರು.

    ಕರೊನಾ ನಿರ್ವಹಣೆ ಮತ್ತು ಉಳಿದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ಮತ್ತು ಸಮಸ್ಯೆ ಕಂಡು ಬಂದಲ್ಲಿ ಚರ್ಚೆ ನಡೆಸಿ ಪರಿಹರಿಸಲು ಡಿಎಚ್ಒ, ಖಾಸಗಿ ವೈದ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳ ಕೋ- ಆರ್ಡಿನೇಷನ್ ಸಮಿತಿ ರಚಿಸುವುದರಿಂದ ಜನರಿಗೆ ಆಗುವ ಸಮಸ್ಯೆ ಹೋಗಲಾಡಿಸಬಹುದು.
    | ಡಾ.ಉಮೇಶ ಜಾಧವ್ ಸಂಸದ

    ಐಸೋಲೇಷನ್ ವಾರ್ಡಗಳಲ್ಲಿನ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಾಗಿ 5000 ಪಿಪಿಇ ಕಿಟ್ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಇಎಸ್ಐಸಿನಲ್ಲಿ 360, ಜಿಮ್ಸ್ನಲ್ಲಿ 330 ಐಸೋಲೇಷನ್ ಬೆಡ್ ಸಜ್ಜುಗೊಳಿಸಲಾಗಿದೆ. ಕಲಬುರಗಿಯಲ್ಲಿ 4 ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ. ಖಾಸಗಿ ವೈದ್ಯರು ಮಧುಮೇಹಿಗಳು, ಕಿಡ್ನಿ, ಅಸ್ತಮಾ, ಅಪಘಾತಗೊಂಡ ಇತರ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವೃತ್ತಿ ಧರ್ಮ ಪಾಲಿಸಬೇಕು. ಇಲ್ಲದಿದ್ದರೆ ಕ್ರಮ ಅನಿವಾರ್ಯ.
    | ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts