More

    ಕರೊನಾತಂಕದ ಮಧ್ಯೆ ಡೆಂಘೆ ಕಾಟ

    ಮರಿದೇವ ಹೂಗಾರ ಹುಬ್ಬಳ್ಳಿ

    ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಡೆಂಘೆ, ಮಲೇರಿಯಾ ಹಾಗೂ ಚಿಕೂನ್ ಗುನ್ಯಾದಂಥ ಸಾಂಕ್ರಾಮಿಕ ಕಾಯಿಲೆಗಳ ಕಾಟವೂ ಶುರುವಾಗಿದೆ.

    ಮಳೆಗಾಲ ಆರಂಭವಾಗಿದೆ. ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತಿದೆ. ಸೊಳ್ಳೆ ಕಡಿತದಿಂದ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಡೆಂಘೆ ಹಾಗೂ ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿವೆ. 2020ರ ಜನವರಿಯಿಂದ ಜೂ. 9ರವರೆಗೆ ಜಿಲ್ಲೆಯಲ್ಲಿ 21 ಡೆಂಘೆ, 4 ಮಲೇರಿಯಾ ಹಾಗೂ 9 ಚಿಕೂನ್​ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಹುಬ್ಬಳ್ಳಿಯಲ್ಲೇ 10 ಡೆಂಘೆ ಪ್ರಕರಣಗಳು ಕಂಡುಬಂದಿವೆ. ಕುಂದಗೋಳ 3 ಹಾಗೂ ನವಲಗುಂದ ತಾಲೂಕಿನಲ್ಲಿ 4 ಡೆಂಘೆ ಪ್ರಕರಣಗಳು ಪತ್ತೆಯಾಗಿವೆ. ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಮಳೆಗಾಲದಲ್ಲಿ ಕಾಣಲಿದೆ.

    ಮಕ್ಕಳು, ವೃದ್ಧರಿಗೆ ಆತಂಕ: ಮಕ್ಕಳು ಹಾಗೂ ವೃದ್ಧರಿಗೆ ಕರೊನಾಘಾತ ಜಾಸ್ತಿ. ಡೆಂಘೆ, ಮಲೇರಿಯಾ ಹಾಗೂ ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆ ಅವರಿಗೂ ಬಾಧಿಸಲಿದೆ. ಕರೊನಾ ಸೋಂಕು ತಾಗಿದರೆ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ.

    ಕರೊನಾ ಸೋಂಕು ಹರಡಲು ಸಲೀಸು: ಡೆಂಘೆ, ಮಲೇರಿಯಾ, ಚಿಕೂನ್​ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದಂತೆ ಕರೊನಾ ಸೋಂಕು ಹರಡಲು ಮತ್ತಷ್ಟು ಸಲೀಸಲಾಗಲಿದೆ. ಈ ಕಾಯಿಲೆ ಬಂದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕ ಬಂದರಂತೂ ಇವರಿಗೂ ಸೋಂಕು ತಗಲುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.

    ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ತಡೆಗಟ್ಟಲು ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಭಯಪಡುವ ಅಗತ್ಯವಿಲ್ಲ.

    | ಡಾ. ಯಶವಂತ ಮದೀನಕರ ಧಾರವಾಡ ಡಿಎಚ್​ಒ

    ಕರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾದ ಬಡಾವಣೆಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಈಗ ಮಳೆಗಾಲ ಶುರುವಾಗಿದೆ. ಸಾಂಕ್ರಾಮಿಕ ಕಾಯಿಲೆ ಹರಡದಂತೆ ಫಾಗಿಂಗ್, ಚರಂಡಿ ಸ್ವಚ್ಛತಾ ಕಾರ್ಯ ಮಾಡಲಾಗುವುದು.

    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts