More

    ಕಮ್ಯುನಿಸ್ಟರಿಗೆ ಸಿಗದ ಜನಮನ್ನಣೆ  -ಆನಂದರಾಜ್ ಬೇಸರ -ಸದಸ್ಯರ ಜಿಲ್ಲಾ ಅಧ್ಯಯನ ಶಿಬಿರ 

    ದಾವಣಗೆರೆ: ದಾವಣಗೆರೆಯಲ್ಲಿ ಬಹುವರ್ಷ ನಗರಸಭೆ ಆಡಳಿತ, ಮೂರು ಬಾರಿ ಶಾಸಕ ಸ್ಥಾನ ಅಲಂಕರಿಸಿದ್ದ ಪಕ್ಷ ಹಿಂದೆ ಉತ್ತುಂಗದಲ್ಲಿತ್ತು. ಕಾರಣ ಅಂದಿನ ಜನರು ಪಕ್ಷದ ತೀರ್ಮಾನಕ್ಕೆ ತಲೆಬಾಗುತ್ತಿದ್ದರು. ಇಂದು ಅಂತಹ ಪರಿಸ್ಥಿತಿ ಇಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಖಜಾಂಚಿ ಆನಂದರಾಜ್ ಬೇಸರ ವ್ಯಕ್ತಪಡಿಸಿದರು.
    ಇಲ್ಲಿನ ಶೇಖರಪ್ಪ ನಗರದ ಎಚ್. ಅಡಿವೆಪ್ಪ ಸಮುದಾಯ ಭವನದಲ್ಲಿ ಸಿಪಿಐ ಸದಸ್ಯರಿಗೆ ಹಮ್ಮಿಕೊಂಡಿರುವ ಮೂರು ದಿನಗಳ ಜಿಲ್ಲಾ ಮಟ್ಟದ ಸೈದ್ಧಾಂತಿಕ ಅಧ್ಯಯನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿ, ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಕನಿಷ್ಠ ಮತಗಳೂ ಬರುತ್ತಿಲ್ಲ. ಹೀಗಾಗಿ ಕಳೆದ ಬಾರಿ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಎಂದು ಹೇಳಿದರು.
    ನಮ್ಮ ಪಕ್ಷದ ಸಿದ್ಧಾಂತದಡಿ ಬೆಳೆದುಬಂದಿರುವ ಕಾರ್ಯಕರ್ತರು, ಮುಖಂಡರು ಅನ್ಯ ಪಕ್ಷದ ರಾಜಕಾರಣಿಗಳ ಕಾಲಿಗೆ ಬೀಳುವ ಮನಸ್ಥಿತಿ ಕೈಬಿಡಬೇಕು. ಬೆಳೆಸಿದ ಪಕ್ಷಕ್ಕೆ ಬದ್ಧರಾಗಿರಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.
    ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಪಕ್ಷ ವಿದ್ಯಾವಂತರು, ಬುದ್ಧಿವಂತರ ಬದಲಾಗಿ ನಿರಕ್ಷರಕುಕ್ಷಿಗಳನ್ನು ಬೆಳೆಸಿತು. ಸಿಪಿಐನಲ್ಲಿ ಸ್ಥಾನಮಾನಗಳು ಕೆಲಸದ ಆಧಾರಿತವಾಗಿವೆಯೇ ಹೊರತು ದೊಡ್ಡಸ್ತಿಕೆಯಿಂದಲ್ಲ. ಹಿಂದಿನ ಕೈಗಾರಿಕೆಗಳು ಈಗಿಲ್ಲ. ಆದರೆ ಪಕ್ಷವನ್ನು ಉಳಿಸಿ ಬೆಳೆಸಬೇಕಿದೆ ಎಂದರು.
    ಕಮ್ಯುನಿಸ್ಟರ ಕಾಲದಲ್ಲಿ ಕೈಗಾರಿಕೆಗಳು, ಮಿಲ್‌ಗಳು ನಡೆಯುತ್ತಿದ್ದವು. ಆಗ ಎಲ್ಲ ದುಡಿವ ವರ್ಗದವರಿಗೂ ಭಾನುವಾರಗಳಂದು ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಹೀಗಾಗಿಯೇ ಅಂದು ಪಕ್ಷ ಬಲಾಢ್ಯವಾಗಿ ಬೆಳೆಯಲು ಸಾಧ್ಯವಾಯಿತು. ಹಿಂದಿನ ತರಗತಿ ಪರಿಕಲ್ಪನೆ ಬರಬೇಕಿದೆ ಎಂದು ಆಶಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ದೇಶ ಕಟ್ಟುವಲ್ಲಿ ಮತ್ತು ನಡೆಸುವಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರ ಪಾತ್ರ ಇಂದು ಅಗತ್ಯವಿದೆ. ಹೀಗಾಗಿ ಹಿಂದಿಗಿಂತಲೂ ಇಂದು ಪಕ್ಷದ ಬಗ್ಗೆ ಸೈದ್ಧಾಂತಿಕವಾಗಿ ತಿಳಿಯಬೇಕಾದ ಅನಿವಾರ್ಯತೆ ಇದೆ ಎಂದರು.
    ದೇಶದಲ್ಲಿ ಜನಸಾಮಾನ್ಯರು ಆಳುವ ಪಕ್ಷಗಳನ್ನು ಪ್ರಶ್ನಿಸುವುದಿರಲಿ, ಪ್ರಾಮಾಣಿಕ ಪತ್ರಕರ್ತರೂ ಸರ್ಕಾರವನ್ನು ಪ್ರಶ್ನಿಸಿದರೆ ದೇಶದ್ರೋಹದಂತಹ ಕಾನೂನುಗಳನ್ನು ಎದುರಿಸುವ ಪರಿಸ್ಥಿತಿ ಇದೆ. ವಿವಿಧೆಡೆ ನಡೆಯುತ್ತಿರುವ ಕೋಮು ಗಲಭೆ ತಡೆದು ಸಮಾಜದಲ್ಲಿ ಶಾಂತಿ ಕಾಪಾಡುವುದು ಸಿಪಿಐನ ಆದ್ಯ ಕರ್ತವ್ಯವಾಗಿದೆ ಎಂದರು.
    ಮಾರ್ಕ್ಸ್‌ವಾದ ಕುರಿತು ಚಿಂತನೆ ಮಂಡಿಸಿದ ಸಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್, ಹಾಲಿನಿಂದ ತುಪ್ಪ ತೆಗೆಯಲು ಅನುಸರಿಸಬೇಕಾದ ಪ್ರಕ್ರಿಯೆಗಳಂತೆಯೇ ಕಮ್ಯುನಿಸ್ಟ್ ಪ್ರಬಲವಾಗಿ ಬೆಳೆಯಲು ಸದಸ್ಯರು ನಾಮಕೇವಾಸ್ತೆ ಆದರೆ ಸಾಲದು. ಹೋರಾಟಗಳು ಹೆಚ್ಚಬೇಕು ಎಂದು ಪ್ರತಿಪಾದಿಸಿದರು.
    ಕಾರ್ಮಿಕ ಸಂಘಟನೆ ಹಿಂದೆ ಅನೇಕರ ಬಲಿದಾನವಾಗಿದೆ. ಸುರೇಶ್, ಶೇಖರಪ್ಪನವರು ದಾವಣಗೆರೆಯಲ್ಲಿ ಕೊಲೆಯಾದರು. ಪಂಪಾಪತಿ ಅವರ ಮೇಲೂ ದಾಳಿ ನಡೆಸಲಾಯಿತು ಎಂದು ಸ್ಮರಿಸಿದ ಅವರು, ದುಡಿವ ಜನರೇ ದೇಶದ ನಿಜವಾದ ಸಂಪತ್ತು. ಅವರು ಒಂದು ದಿನ ಕೆಲಸಕ್ಕೆ ಬಾರದಿದ್ದರೆ ದೇಶದ ಆರ್ಥಿಕತೆಯೇ ಬುಡಮೇಲಾಗಲಿದೆ ಎಂದೂ ಎಚ್ಚರಿಸಿದರು.
    ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಸಿ.ಡೋಂಗ್ರೆ, ಜಿಲ್ಲಾ ಮಂಡಳಿ ಸಹಕಾರ್ಯದರ್ಶಿ ಎಚ್.ಜಿ.ಉಮೇಶ್, ಎಂ.ಬಿ. ಶಾರದಮ್ಮ, ಟಿ.ಎಸ್. ನಾಗರಾಜ್, ಆವರಗೆರೆ ವಾಸು, ಧರ್ಮರಾಜ್, ಮಹ್ಮದ್ ಬಾಷಾ ಇದ್ದರು. ಐರಣಿ ಚಂದ್ರು ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts