More

    ಕಮರುತ್ತಿದೆ ರಂಗಭೂಮಿ ಕಲಾವಿದರ ಬದುಕು



    ಹುಬ್ಬಳ್ಳಿ: ನಶಿಸುತ್ತಿರುವ ಕಲೆಯಲ್ಲಿ ರಂಗಭೂಮಿಯೂ ಒಂದು. ಈಗ ಈ ಕಲೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಕರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್​ಡೌನ್ ವಿಧಿಸಲಾಗಿದ್ದು, ಕಲಾವಿದರ ಕುಟುಂಬಗಳು ಪ್ರಾಯಶಃ ಬೀದಿಗೆ ಬಿದ್ದಿವೆ.

    ಉತ್ತರ ಕರ್ನಾಟಕದಲ್ಲಿ 6ಕ್ಕೂ ಹೆಚ್ಚು ನಾಟಕ ಕಂಪನಿಗಳಿವೆ. 35ಕ್ಕೂ ಹೆಚ್ಚು ಕುಟುಂಬಗಳು ಇದೇ ತಮ್ಮ ಬದುಕೆಂದು ಭಾವಿಸಿವೆ. ಬೆಳಗ್ಗೆ ತರಬೇತಿ, ರಾತ್ರಿ ನಾಟಕ ಪ್ರದರ್ಶನಕ್ಕೆ ಸೀಮಿತವಾಗಿದ್ದ ಕುಟುಂಬಗಳೀಗ ಜೀವನ ನಿರ್ವಹಣೆಯ ಸಂಕಷ್ಟ ಎದುರಿಸುತ್ತಿವೆ.

    ಉತ್ತರ ಕರ್ನಾಟಕದ ಭಾಗದಲ್ಲಿ ಬನಶಂಕರಿ, ಶಿರಸಿ, ಗದಗಿನ ತೋಂಟದಾರ್ಯಮಠ ಸೇರಿ ಇತರೆಡೆ ಬೇಸಿಗೆ ವೇಳೆ ಬಹುದೊಡ್ಡ ಜಾತ್ರೆಗಳು ನಡೆಯುತ್ತವೆ. ಆಗ ಕುಟುಂಬ ಸಮೇತ ನಾಟಕ ಪ್ರದರ್ಶನಕ್ಕೆ ಕಲಾವಿದರು ಬಂದು ತಂಗುತ್ತಾರೆ. ಆಗ ಹಗಲು ನಾಟಕದ ತರಬೇತಿ ಮಾಡುವ ಕುಟುಂಬಗಳು, ರಾತ್ರಿ ವೇಳೆ ಪ್ರದರ್ಶನಕ್ಕೆ ಅಣಿಗೊಳ್ಳುತ್ತವೆ. ಮಳೆ ಮತ್ತು ಚಳಿಗಾಲದಲ್ಲಿ ಮನೆಯಲ್ಲಿಯೇ ಉಳಿಯುವ ಇಲ್ಲವೇ ಅಲ್ಪಸ್ವಲ್ಪ ಪ್ರದರ್ಶನ ನೀಡುವ ಈ ಕುಟುಂಬಗಳು, ನಂತರ ಬೇಸಿಗೆ ವೇಳೆ ಅಂದರೆ ನಾಲ್ಕು ತಿಂಗಳು ತಮ್ಮ ಊರು ಬಿಟ್ಟು ಬೇರೆ ಊರಿಗೆ ನಾಟಕ ಪ್ರದರ್ಶನಕ್ಕೆ ತಿರುಗಾಡುತ್ತಿರುತ್ತವೆ.

    ಈಗ ಕರೊನಾ ಮಹಾಮಾರಿ ಎಲ್ಲೆಡೆ ಹಬ್ಬುತ್ತಿರುವುದರಿಂದ ಲಾಕ್​ಡೌನ್ ವಿಧಿಸಲಾಗಿದೆ. ಜನರು ಗುಂಪು ಗೂಡುವಂತಿಲ್ಲ ಎಂದು ಈಗಾಗಲೇ ಆಯಾ ಜಿಲ್ಲಾಡಳಿತಗಳು ಕಟ್ಟಪ್ಪಣೆ ವಿಧಿಸಿವೆ. ‘ಪರಸ್ಪರ ಅಂತರ’ಕ್ಕೆ ಆದ್ಯತೆ ನೀಡಲಾಗಿದೆ. ಹಾಗಾಗಿ ನಾಟಕ ಪ್ರದರ್ಶನವೂ ರದ್ದುಗೊಂಡಿದೆ. ಕಲಾವಿದರ ಕುಟುಂಬಗಳಿಗೆ ಬದುಕಿನ ಬಂಡಿ ಸಾಗಿಸುವುದು ಕಷ್ಟವಾಗಿದೆ.

    ಕಲಾವಿದರಿಗಿಲ್ಲ ಮಾಸಾಶನ

    ಮೂರು ತಿಂಗಳಿಂದ ರಾಜ್ಯ ಸರ್ಕಾರ ಮಾಸಾಶನ ನೀಡಿಲ್ಲ. ಇತ್ತ ಲಾಕ್​ಡೌನ್ ಹಿನ್ನೆಲೆಯಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿಲ್ಲ. ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಸರ್ಕಾರದಿಂದ ಪರಿಹಾರ ಕೇಳಲೂ ಬರುವುದಿಲ್ಲ. ಇತ್ತ ದಾನಿಗಳನ್ನು ಕೈಚಾಚುವುದೂ ಆಗುವುದಿಲ್ಲ. ಸಾಲ-ಸೋಲ ಮಾಡಿ ನಾಟಕ ಪ್ರದರ್ಶನ ಮಾಡಿ ಬಂದ ಹಣದಲ್ಲಿ ಅಲ್ಪ ಭಾಗವನ್ನು ಸಾಲಗಾರರಿಗೆ ಹಿಂತಿರುಗಿಸುತ್ತಿದ್ದರು. ಟೆಂಟ್ ಹಾಕಲು ಕಾರ್ವಿುಕರನ್ನು ನೇಮಕ ಮಾಡಿಕೊಂಡಿದ್ದು, ಅವರಿಗೂ ಸಂಬಳ ಕೊಡಲಾಗುತ್ತಿಲ್ಲ ಎಂದು ನಾಟಕ ಕಂಪನಿ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

    ರಾಜ್ಯ ಸರ್ಕಾರದ ಗಮನ ಸೆಳೆಯಲು ನಿರ್ಧಾರ

    ಕಲಾವಿದರೆಂದರೆ ನಾಟಕ, ಚಲನಚಿತ್ರವಷ್ಟೇ ಅಲ್ಲ, ಎಲ್ಲ ಬಗೆಯ ಕಲಾವಿದರೂ ಇದ್ದಾರೆ. ಡೊಳ್ಳು ಬಾರಿಸುವುದರಿಂದ ಹಿಡಿದು ಚಲನಚಿತ್ರದಲ್ಲಿ ನಟನೆ ಮಾಡುವವರೆಗೆ ಎಲ್ಲರೂ ಕಲಾವಿದರೆ. ಈ ಕುರಿತು ಜಿಲ್ಲಾದ್ಯಂತ ಪಟ್ಟಿ ತಯಾರಿಸಲು ನಿರ್ಧರಿಸಲಾಗಿದೆ. ಈ ಪಟ್ಟಿ ರಾಜ್ಯ ಸರ್ಕಾರದ ಮುಂದಿಟ್ಟು ಗಮನ ಸೆಳೆಯಲು ಕಲಾವಿದರು ನಿರ್ಧರಿಸಿದ್ದಾರೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ರಂಗಭೂಮಿ ಕಲಾವಿದರು ಬಹಳ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ನೆರವು ಕೇಳಲೂ ಆಗುವುದಿಲ್ಲ, ಇತ್ತ ಜೀವನ ನಿರ್ವಹಣೆಯೂ ಬಿಡಲಾಗುತ್ತಿಲ್ಲ. ಏನು ಮಾಡುವುದು ಎಂದು ಬಹಳಷ್ಟು ರಂಗ ಭೂಮಿ ಕಲಾವಿದರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

    -ಶಂಕರ ಸುಗತೆ, ಉತ್ತರ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts