More

    ಕಬ್ಬು ಕಟಾವು, ಸಾಗಣೆ ದರ ನಿಗದಿ ಕಗ್ಗಂಟು!

    ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಕಬ್ಬು ದರ ನಿಗದಿಗೆ ಮಾನದಂಡವಾಗಿರುವ ಕಬ್ಬಿನ ರಿಕವರಿ (ಸಕ್ಕರೆ ಅಂಶ), ಕಬ್ಬು ಕಟಾವು ಮತ್ತು ಸಾಗಣೆ (ಎಚ್‌ಆ್ಯಂಡ್‌ಟಿ) ದರ ನಿಗದಿಯೇ ಈಗ ಕಗ್ಗಂಟಾಗಿ ಪರಿಣಮಿಸಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಈಗಾಗಲೇ ಕೇಂದ್ರ ಸರ್ಕಾರವು ರಿಕವರಿ ಹೆಚ್ಚಿಸಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಪ್ರತಿ ಟನ್‌ಗೆ ಸರಾಸರಿ 3,050 ರಿಂದ 3,200 ರೂ. ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ (ಎಫ್‌ಆರ್‌ಪಿ) ನಿಗದಿಪಡಿಸಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ಎಚ್ ಆ್ಯಂಡ್ ಟಿ 700ರಿಂದ 950 ರೂ. ವರೆಗೆ ಕಡಿತಗೊಳಿಸುತ್ತಿವೆ. ಇದರಿಂದಾಗಿ ಬೆಳೆಗಾರರಿಗೆ ಟನ್ ಕಬ್ಬಿಗೆ 2,400 ರಿಂದ 2,500 ರೂ. ವರೆಗೆ ದರ ಸಿಗುತ್ತಿದೆ. ಪರಿಣಾಮ ಪ್ರತಿ ಟನ್‌ಗೆ ರೈತರಿಗೆ 300 ರಿಂದ 500 ರೂ.ವರೆಗೆ ನಷ್ಟವಾಗುತ್ತಿದೆ.

    ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ ಟನ್ ಕಬ್ಬಿಗೆ ಕನಿಷ್ಠ 3,500 ರೂ. ವರೆಗೆ ದರ ನೀಡಲು ಕಬ್ಬು ಬೆಳೆಗಾರರು , ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರ್ಮಿಕರ ವೇತನ, ಖರ್ಚು-ವೆಚ್ಚಗಳು ಹೆಚ್ಚಿನ ಹೊರೆಯಾಗುತ್ತಿವೆ. ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ದರ ಏರಿಳಿತವಾಗುತ್ತಿವೆ ಎಂಬ ಕಾರಣ ಮುಂದಿಟ್ಟುಕೊಂಡು ಪ್ರತಿ ಟನ್‌ಗೆ 2,500 ರೂ. ಮೇಲ್ಪಟ್ಟು ದರ ನೀಡಲು ಒಪ್ಪುತ್ತಿಲ್ಲ. ಪರಿಣಾಮ ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಿದರೂ ದರ ನಿಗದಿ ಮಾಡದಿರುವ ಕಾರಣ ಬಹುತೇಕ ಕಡೆ ರೈತರು ಕಬ್ಬು ಪೂರೈಸುತ್ತಿಲ್ಲ. ಮತ್ತೊಂದೆಡೆ ಸರ್ಕಾರ ತಟಸ್ಥ ನಿಲುವು ತಾಳಿರುವುದರಿಂದ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ರಾಜ್ಯದ 14 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 62 ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಸರಾಸರಿ 52.01 ಲಕ್ಷ ಟನ್‌ಗೂ ಅಧಿಕ ಸಕ್ಕರೆ ಉತ್ಪಾದಿಸುತ್ತಿವೆ. ಅಲ್ಲದೆ, ಕಬ್ಬಿನ ಉಪ ಉತ್ಪನ್ನ ಮೊಲ್ಯಾಸಿಸ್, ಅಲ್ಕೋಹಾಲ್, ಕಬ್ಬಿನ ಸಿಪ್ಪೆಯಿಂದ ವಿದ್ಯುತ್ ಉತ್ಪಾದನೆ ಮತ್ತು ಗೊಬ್ಬರ ತಯಾರಿಸಲಾಗುತ್ತಿದೆ. ಟನ್ ಕಬ್ಬಿನ ಸಕ್ಕರೆಗಿಂತ ಉಪ ಉತ್ಪನ್ನಗಳಿಂದ ಸುಮಾರು 10 ಸಾವಿರ ರೂ.ಆದಾಯ ಸಕ್ಕರೆ ಕಾರ್ಖಾನೆಗಳಿಗೆ ಬರುತ್ತದೆ. ಪ್ರತಿ ಟನ್‌ನಲ್ಲಿ ಶೇ. 1ರಷ್ಟು ಇಳುವರಿ ಪ್ರಮಾಣ ಹೆಚ್ಚಾದರೆ ಪ್ರತಿ ಟನ್‌ಗೆ ಕಾರ್ಖಾನೆಗಳು 300 ರೂ. ಹೆಚ್ಚಿಗೆ ಹಣ ನೀಡಬೇಕು. ಆದರೆ, ಯಾವುದೇ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬಿನ ಉಪ ಉತ್ಪನ್ನಗಳ ಲಾಭ ತೋರಿಸುತ್ತಿಲ್ಲ. ಅಲ್ಲದೆ, ಸಕ್ಕರೆ ಕಾರ್ಖಾನೆ ಪಕ್ಕದಲ್ಲಿರುವವರು ಮತ್ತು 100 ಕಿಮೀ ದೂರದಲ್ಲಿರುವ ಕಬ್ಬು ಬೆಳೆಗಾರರಿಗೆ ಎಚ್ ಆ್ಯಂಡ್ ಟಿಯ ಒಂದೇ ದರ ನಿಗದಿ ಪಡಿಸಿವೆ. ಕಾರ್ಖಾನೆಯು ಕಬ್ಬಿನ ರಿಕವರಿ (ಸಕ್ಕರೆ ಅಂಶ) ಪ್ರಮಾಣವನ್ನು ಪಾರದರ್ಶಕವಾಗಿ ತೋರಿಸುತ್ತಿಲ್ಲ. ಅರೆಯುವ ಋತುವಿಗಿಂತ ಮೊದಲೇ ಬೇರೆ ಕಡೆಯಿಂದ ಕಬ್ಬು ತರುತ್ತಾರೆ. ಅದರ ರಿಕವರಿ ದರವು ಶೇ.6 ಅಥವಾ 7 ಇರುತ್ತದೆ. ಇದರಿಂದಾಗಿ ಒಟ್ಟು ಪ್ರಮಾಣದಲ್ಲಿ ರಿಕವರಿ ದರ ಕಡಿಮೆಯಾಗುತ್ತಿದೆ. ಅದಕ್ಕೆ ಸ್ಥಳೀಯ ರೈತರು ಯಾಕೆ ಹೊಣೆಯಾಗಬೇಕು ಎಂದು ರೈತ ಹೋರಾಟಗಾರರಾದ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ್ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts