More

    ಕಬ್ಬಿನ ಬೀಜಕ್ಕೆ ಬಂಪರ್ ಬೆಲೆ!

    ಬೆಳಗಾವಿ: ಕೋವಿಡ್ ಸಂಕಷ್ಟ, ಕಾರ್ಮಿಕರ ಕೊರತೆ, ಕಬ್ಬಿನ ದರದ ಸಮಸ್ಯೆ ನಡುವೆಯೂ ಕಬ್ಬಿನ ಬೀಜಕ್ಕೆ ಬಂಪರ್ ಬೆಲೆ ಬಂದಿದ್ದು, ವಿವಿಧ ತಳಿಯ ಟನ್ ಕಬ್ಬಿನ ಬೀಜದ ದರ 3,800 ರಿಂದ 4500 ರೂ. ವರೆಗೆ ಏರಿಕೆ ಕಂಡಿದೆ.

    ಕಳೆದ ಎರಡು ವರ್ಷದ ಅವಧಿಯಲ್ಲಿ ಎದುರಾದ ಕೋವಿಡ್, ಲಾಕ್‌ಡೌನ್‌ದಿಂದಾಗಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಅಲ್ಪಾವಧಿ ಕೃಷಿ ಉತ್ಪನ್ನ ದರ ಕುಸಿತವಾಗಿತ್ತು. ಮಾರುಕಟ್ಟೆ ಹಾಗೂ ಸಾಗಣೆ ವ್ಯವಸ್ಥೆ ಇಲ್ಲದ ಕಾರಣ ಜಮೀನುಗಳಲ್ಲಿ ಬೆಳೆ ಕೊಳೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಸಣ್ಣ ಮತ್ತು ಮಧ್ಯಮ ರೈತರು ಬಹುವಾರ್ಷಿಕ ಕಬ್ಬಿನ ಬೆಳೆಯತ್ತ ಮುಖ ಮಾಡಿದ್ದಾರೆ. ಹಾಗಾಗಿಯೇ ಕಬ್ಬಿನ ಬೀಜದ ದರದಲ್ಲಿ ಏರಿಕೆಯಾಗಿದೆ.

    ಪ್ರದೇಶ ವಿಸ್ತರಣೆ: ಪ್ರಸ್ತತ ರಾಜ್ಯದಲ್ಲಿ 67 ಸಕ್ಕರೆ ಕಾರ್ಖಾನೆಗಳ ಪೈಕಿ 64 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸರಾಸರಿ 44.08 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ಶೇ.9.74 ಕಬ್ಬಿನ ಇಳುವರಿ ದಾಖಲಿಸಿವೆ. ಅಲ್ಲದೆ, ಉತ್ತಮ ಮಳೆ, ಅಂತರ್ಜಲಮಟ್ಟ ಹೆಚ್ಚಳ ಮತ್ತು ಜಲಾಶಯಗಳ ಭರ್ತಿಯಿಂದ ಕಾಲುವೆಗಳಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಯುವ ಪ್ರದೇಶ ವಿಸ್ತರಣೆಗೊಂಡಿದೆ. ವಾರ್ಷಿಕ ಸರಾಸರಿ 5.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ವರ್ಷ ಸುಮಾರು 1.45 ಲಕ್ಷ ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ.

    ಟನ್‌ಗೆ ಸಾವಿರ ರೂ. ಏರಿಕೆ: ರಾಜ್ಯದ ರೈತರು ಮುಂಗಡವಾಗಿ ಸಕ್ಕರೆ ಕಾರ್ಖಾನೆಗಳಿಂದ, ರೈತರಿಂದ ನೇರವಾಗಿ 1,80,024(ತಿಳಿ ಹಸಿರು), 86,032(ಕೆಂಪು), 8,005 (ತಿಳಿ ಹಸಿರು), ಸಿಒಸಿ 671(ಗಂಗಾವತಿ), ಸಿಒ 91010 (ಬಿಳಿ ಕಬ್ಬು) ಹೀಗೆ ವಿವಿಧ ತಳಿಯ ಕಬ್ಬು ಪಡೆದುಕೊಳ್ಳುತ್ತಿದ್ದಾರೆ. ಆಯಾ ಪ್ರದೇಶದಲ್ಲಿ ಕಬ್ಬಿನ ಬೀಜ ಟನ್‌ಗೆ 3,800 ರಿಂದ 4,500 ರೂ. ವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕಬ್ಬಿನ ಬೀಜ ಟನ್‌ಗೆ 2,900 ರಿಂದ 3,500 ರೂ. ವರೆಗೆ ಇತ್ತು. ಈ ವರ್ಷ ಈ ಬೆಲೆ ಸರಾಸರಿ 800 ರಿಂದ 1,000 ರೂ. ವರೆಗೆ ಏರಿಕೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಎಕರೆಗೆ ಬೇಕು 2 ಟನ್ ಬೀಜ: ರೈತರು ಭೂಮಿ ಫಲವತತ್ತೆ, ನೀರಿನ ಲಭ್ಯತೆ ಆಧಾರದ ಮೇಲೆ ಹೊಸ ಕಬ್ಬಿನ ಬೀಜ ಹಾಗೂ ಹೆಚ್ಚು ಇಳುವರಿ ನೀಡುವ ಕಬ್ಬಿನ ಬೀಜಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ 1.5ರಿಂದ 2 ಟನ್ ವರೆಗೆ ಕಬ್ಬಿನ ಬೀಜ ಬೇಕಾಗುತ್ತದೆ. ಜತೆಗೆ ರಸಗೊಬ್ಬರ, ಕೂಲಿ ಕಾರ್ಮಿಕರು, ಸಾಗಣೆ ಬಾಡಿಗೆ ಸೇರಿದಂತೆ 25 ಸಾವಿರ ರೂ. ವರೆಗೆ ಖರ್ಚಾಗುತ್ತಿದೆ. ಬಹುವಾರ್ಷಿಕ ಬೆಳೆಯಾದರೂ ಸಾಮಾನ್ಯವಾಗಿ ಎಲ್ಲರೂ 3 ವರ್ಷಗಳ ಕಾಲ ಕಬ್ಬು ಬೆಳೆಯುತ್ತಾರೆ. ಈ ಅವಧಿಯಲ್ಲಿ ಬೆಳೆ ಬೆಳೆಸುವಾಗ ಅನೇಕ ಸಮಸ್ಯೆ, ಸವಾಲು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರಾದ ಎನ್.ವಿ. ಹೊರಟ್ಟಿ, ಎಂ.ಟಿ. ಪಾಟೀಲ ತಿಳಿಸಿದ್ದಾರೆ.

    ಈ ವರ್ಷ ಮುಂಗಾರು ಹಂಗಾಮಿನಲ್ಲಿ ಕಬ್ಬು ನಾಟಿ ಪ್ರದೇಶ ವಿಸ್ತರಣೆಗೊಂಡಿದ್ದರಿಂದ ಕಬ್ಬಿನ ಬೀಜದ ದರದಲ್ಲಿ ಏರಕೆಯಾಗಿದೆ. ಕಳೆದ ವರ್ಷ ಸಕ್ಕರೆ ಕಾರ್ಖಾನೆಗಳು 8ರಿಂದ 9 ತಿಂಗಳು ಬೆಳೆದ ಕಬ್ಬನ್ನು ತೆಗೆದುಕೊಂಡಿದ್ದರಿಂದ ಕಬ್ಬಿನ ಬೀಜದ ಸಮಸ್ಯೆಯಾಗಿದೆ. ಹಾಗಾಗಿಯೇ ರೈತರು ಲಭ್ಯವಿರುವ ಎಲ್ಲ ಕಬ್ಬಿನ ಬೀಜ ಪಡೆಯುತ್ತಿದ್ದಾರೆ.
    | ಮಂಜುನಾಥ ಚೌರಡ್ಡಿ ಕೃಷಿ ತಜ್ಞ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts