More

    ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬೇಂದ್ರೆ ಪಟ್ಟ ಕಷ್ಟ, ಅವಮಾನ ಅಷ್ಟಿಷ್ಟಲ್ಲ; ನರಬಲಿ ಪದ್ಯಕ್ಕಾಗಿ ಬ್ರಿಟಿಷರಿಂದ ಜೈಲುವಾಸ: ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಬೇಸರ

    ಸಾಗರ: ವರಕವಿ ದ.ರಾ.ಬೇಂದ್ರೆ ಅವರ ಹಾಡು, ಲಯ, ನಾದ, ಪ್ರಾಸ ಇವುಗಳ ಬಗ್ಗೆ ಹೆಚ್ಚು ಗಮನ ಹರಿಸಲಾಯಿತೇ ಹೊರತು ಅವರು ಕಾವ್ಯಗಳ ಮೂಲಕ ಕಟ್ಟಿಕೊಟ್ಟ ಜೀವನದ ಸತ್ಯ ದರ್ಶನದ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಗಮನಹರಿಸಲಿಲ್ಲ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.
    ಹೆಗ್ಗೋಡಿನ ನೀನಾಸಂನಲ್ಲಿ ನಡೆಯುತ್ತಿರುವ ಕಲೆಗಳ ಸಂಗಡ ಮಾತುಕತೆ ಮಾಲಿಕೆಯಲ್ಲಿ ಬೇಂದ್ರೆ ಅವರ ಕಾವ್ಯಗಳ ಕುರಿತು ಸೋಮವಾರ ಮಾತನಾಡಿ, ಬೇಂದ್ರೆಯವರ ಕಾವ್ಯಗಳು ಅದು ದೃಶ್ಯವೂ ಹೌದು, ಅದೃಶ್ಯವೂ ಹೌದು. ಅವರು ಲೌಕಿಕ ಮತ್ತು ಅಲೌಕಿಕ ಎನ್ನುವುದು ಬೇರೆ ಬೇರೆ ಇಲ್ಲ. ಅದು ನಮ್ಮೊಳಗೆ ಅಡಕವಾಗಿದೆ ಎನ್ನುತ್ತಾರೆ ಎಂದರು.
    ಬೇಂದ್ರೆಯವರು ಧಾರವಾಡದಲ್ಲಿ ತಾವು ಬದುಕಿನುದ್ದಕ್ಕೂ ಕಳೆದ ಸಂಗತಿಗಳನ್ನು, ನೆನಪುಗಳನ್ನು ತಮ್ಮ ಕವಿತೆಗಳಲ್ಲಿ ಬಿಚ್ಚಿಡುತ್ತಾರೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಬೇಂದ್ರೆಯವರು ಪಟ್ಟ ಕಷ್ಟ, ಅವಮಾನ ಅಷ್ಟಿಷ್ಟಲ್ಲ. ತಮ್ಮ ನರಬಲಿ ಪದ್ಯಕ್ಕಾಗಿ ಬ್ರಿಟಿಷರಿಂದ ಜೈಲುವಾಸವನ್ನು ಅನುಭವಿಸುತ್ತಾರೆ. ನಂತರ 9 ವರ್ಷಗಳ ಕಾಲ ಬ್ರಿಟಿಷ್ ಸರ್ಕಾರ ಇವರಿಗೆ ಯಾವುದೇ ನೌಕರಿಯನ್ನು ಕೊಡದಂತೆ ಆದೇಶ ಹೊರಡಿಸುತ್ತದೆ, ಆ ಸಂದರ್ಭದ ಅವರ ಕಷ್ಟ ಕಾರ್ಪಣ್ಯಗಳು ಕವಿತೆಗಳಾಗಿ ಮೂಡಿಬಂದಿವೆ ಎಂದು ಹೇಳಿದರು.
    ಮನುಷ್ಯ ಕಣ್ಣು ಮುಚ್ಚಿದಾಗ ಮತ್ತು ತೆರೆದಾಗ ಪ್ರಜ್ಞೆಗಳು ದಾಟುತ್ತವೆ. ನಿದ್ದೆಯನ್ನು ಮೀರಿರುವ ಒಂದು ಎಚ್ಚರ ಕಾವ್ಯ ಪ್ರಜ್ಞೆಯಲ್ಲಿ ಇರುತ್ತದೆ. ಕಾವ್ಯದ ಗುಣ ನಮ್ಮನ್ನು ನಮ್ಮ ಸ್ಥಿತಿಯಿಂದ ಹೊರತರುತ್ತದೆ. ಮತ್ತೆ ಅಲ್ಲಿಯೇ ನಿಂತು ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಬೇಂದ್ರೆ ಅವರ ಸಣ್ಣ ಸೋಮವಾರ ಮತ್ತು ಸಖೀಗೀತ ಪದ್ಯಗಳ ಕುರಿತು ಚನ್ನಿ ಸವಿಸ್ತಾರವಾಗಿ ಮಾತನಾಡಿದರು.
    ಬೇಂದ್ರೆ ತಮ್ಮ ಕಾವ್ಯದುದ್ದಕ್ಕೂ ಬಡತನ, ಆರ್ತನಾದ, ತಾವು ಪಟ್ಟ ಕಷ್ಟ ಕಾರ್ಪಣ್ಯಗಳನ್ನೇ ಕವಿತೆಯಾಗಿ ಕಟ್ಟಿಕೊಡುತ್ತಾರೆ, ಸಖಿಗೀತದಲ್ಲಿ ದಾಂಪತ್ಯದ ಮಹತ್ವವನ್ನು ತೆರೆದಿಡುತ್ತಾರೆ. ಅವರ ಪದ್ಯಗಳಲ್ಲಿ ಶ್ರಾವಣಾ ಎನ್ನುವ ಮಾತು ಅದು ಕಾಲವಾಗಿ, ವಿಚಾರವಾಗಿ, ಸಂಗತಿಯಾಗಿಯೂ ರೂಪಿತಗೊಳ್ಳುತ್ತದೆ. ಬೇಂದ್ರೆ ಮೌನಕ್ಕೆ ಮಾತಿನ ಧ್ವನಿ ಇರಲಿ, ಮೂಕಮೌನ ಶಾಪವಿದ್ದಂತೆ ಎಂದು ಹೇಳುತ್ತ, ಮಾತಿನ ಮಹತ್ವವನ್ನೂ ಪರಿಚಯಿಸುತ್ತಾರೆ. ಸಖೀಗೀತದಲ್ಲಿ ಸಖಿಯ ದುಃಖ ಅವಳ ಒಂಟಿತನವನ್ನು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts