More

    ಕನ್ನಡ ಚಿತ್ರರಂಗಕ್ಕೆ ಅನ್ಯಾಯ

    ಶಿವಮೊಗ್ಗ: ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯವಾಗಿದೆ. ಇದುವರೆಗೂ ದಕ್ಷಿಣ ಭಾರತಕ್ಕೆ ಪ್ರಾಮುಖ್ಯತೆಯನ್ನೇ ಕೊಟ್ಟಿಲ್ಲ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕಳವಳ ವ್ಯಕ್ತಪಡಿಸಿದರು.

    ಕನ್ನಡ ಚಿತ್ರರಂಗದಲ್ಲೂ ಬಹಳಷ್ಟು ಕಲಾವಿದರು ಪದ್ಮ ಪ್ರಶಸ್ತಿಗೆ ಅರ್ಹರಿದ್ದಾರೆ. ಆದರೆ ಕೇಂದ್ರ ಸರ್ಕಾರ ಕನ್ನಡ ಹೊರತುಪಡಿಸಿ ಇತರೆ ಭಾಷೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

    ಪ್ರಶಸ್ತಿ ವಿತರಣೆಯಲ್ಲಿ ಬಾಲಿವುಡ್​ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಯಾವ ಆಯಾಮದ ಮೇಲೆ ಪರಿಗಣನೆ ಮಾಡಲಾಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ. ಕನ್ನಡದಲ್ಲಿ ಬಹಳಷ್ಟು ಮಂದಿ ಪದ್ಮ ಪ್ರಶಸ್ತಿ ಪಡೆಯುವ ಅರ್ಹತೆ ಹೊಂದಿದ್ದಾರೆ. ಆದರೆ ಪರಿಗಣಿಸುತ್ತಿಲ್ಲ ಎಂದರು.

    ಕನ್ನಡ ಸಿನಿಮಾಗಳ ನಡುವೆ ಕಂದಕ: ಕನ್ನಡದ ಮುಖ್ಯವಾಹಿನಿ ಸಿನಿಮಾಗಳು ಹಾಗೂ ಸಾಹಿತ್ಯಾತ್ಮಕ ಸಿನಿಮಾಗಳ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ ಕನ್ನಡಿಗರ ಸಿನಿಮಾಗಳು ಮಾತ್ರವಲ್ಲದೆ ಅನ್ಯಭಾಷಾ ಚಿತ್ರಗಳೊಂದಿಗಿನ ಸ್ಪರ್ಧೆ ಇದಕ್ಕೆ ಕಾರಣ. ವಿಚಿತ್ರವೆಂದರೆ ಬಹಳಷ್ಟು ಕನ್ನಡ ಸಿನಿಮಾಗಳು ಅನ್ಯಭಾಷೆಯ ವಿತರಕರ ಕೈಯಲ್ಲಿವೆ. ಹಾಗಾಗಿ ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂದು ಹೇಳಿದರು.

    50ರಿಂದ 80ರ ದಶಕದವರೆಗೆ ಕನ್ನಡದ ನಿರ್ದೇಶಕರು, ನಿರ್ವಪಕರು, ವಿತರಕರಿದ್ದರು. ಆ ಕಾಲದಲ್ಲಿ ಕನ್ನಡ ಸಿನಿಮಾಗಳಿಗೆ ಉತ್ತೇಜನ ಸಿಗುತ್ತಿತ್ತು. ಆದರೆ ಪ್ರಸ್ತುತ ಕನ್ನಡ ಸಿನಿಮಾಗಳ ವಿತರಣೆ ಮತ್ತು ಪ್ರಸಾರ ಕನ್ನಡಿಗರ ನಿಯಂತ್ರಣದಲ್ಲಿ ಇಲ್ಲ ಎಂದರು.

    ವಿತರಕರು ಮಲ್ಟಿಫ್ಲೆಕ್ಸ್​ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಬಸ್ ನಿಲ್ದಾಣ, ಶಾಪಿಂಗ್ ಮಾಲ್​ಗಳು ಸೇರಿ ಸಣ್ಣಪುಟ್ಟ ಸ್ಥಳಗಳಲ್ಲಿ ಮಲ್ಟಿಫ್ಲೆಕ್ಸ್ ಮಾದರಿ ಜನತಾ ಚಿತ್ರಮಂದಿರಗಳನ್ನು ನಿರ್ವಿುಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದು ಈಡೇರಿದರೆ ಮಾತ್ರ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಭವಿಷ್ಯವಿದೆ ಎಂದು ತಿಳಿಸಿದರು.

    ಪೈರಸಿ ತಡೆಗೆ ದೃಢ ನಿರ್ಧಾರ ಅಗತ್ಯ: ಕನ್ನಡ ಸಿನಿಮಾಗಳ ಪೈರಸಿ ತಡೆಗೆ ನೈತಿಕತೆ ಅಗತ್ಯ. ನೈತಿಕತೆ ಇಲ್ಲದಿದ್ದರೆ ಪೈರಸಿ ತಡೆಯಲು ಸಾಧ್ಯವಿಲ್ಲ. ಸರ್ಕಾರ ಮನಸ್ಸು ಮಾಡಿ ಪೈರಸಿ ಮಾಡುವವರ ವಿರುದ್ಧ ದೃಢ ನಿರ್ಧಾರ ತೆಗೆದುಕೊಂಡರೆ ಮಾತ್ರ ಕಡಿವಾಣ ಹಾಕಬಹುದು. ಪೊಲೀಸರನ್ನೇ ಬಳಸಿಕೊಂಡು ತಡೆಯಬಹುದು. ಅದಕ್ಕಾಗಿ ಪ್ರತ್ಯೇಕ ವಿಂಗ್ ತೆರೆಯುವ ಅಗತ್ಯ ಇಲ್ಲ ಎಂದ ಅವರು, ಟೆಲಿವಿಷನ್ ಮಾಧ್ಯಮ ಬಂದಾಗ ಬಹಳಷ್ಟು ತಂತ್ರಜ್ಞರು ಕಾಣಸಿಕೊಂಡರು. ಪ್ರಸ್ತುತ ಟಾಕೀಸ್​ಗಳ ಕೊರತೆ ಒಂದೆಡೆಯಾದರೆ ಟೂರಿಂಗ್ ಟಾಕೀಸ್​ಗಳು ಕಣ್ಮರೆಯಾಗಿವೆ ಎಂದು ಹೇಳಿದರು.

    ಸಾಂಸ್ಕೃತಿಕ ಆಯಾಮ ಮಾಯ: ಕನ್ನಡದ ಸಿನಿಮಾಗಳಿಗೆ ಮನ್ನಣೆ ಮತ್ತು ಪ್ರದರ್ಶನದ ಅವಕಾಶವೇ ಸಿಗುತ್ತಿಲ್ಲ. ಸಿನಿಮಾಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೋ ವಿನಃ ಸಾಂಸ್ಕೃತಿಕ ಆಯಾಮದಿಂದ ನೋಡುತ್ತಿಲ್ಲ. ಕೇವಲ ಮಾರುಕಟ್ಟೆ ಮತ್ತು ವ್ಯಾಪಾರ ಮುಖ್ಯವಾಗಿದೆ. ಇದರಿಂದ ಕ್ರೀಯಾತ್ಮಕ ಚಿತ್ರಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇದು ಕನ್ನಡ ಚಿತ್ರರಂಗದ ದುರ್ವೆವ ಎಂದು ಬೇಸರ ವ್ಯಕ್ತಪಡಿಸಿದರು.

    ಡಿಜಿಟಲ್ ಪ್ಲಾಟ್​ಫಾಮ್ರ್ ಪ್ರಚಲಿತ: ಕನ್ನಡ ಚಿತ್ರರಂಗಕ್ಕೂ ಡಿಜಿಟಲ್ ಪ್ಲಾಟ್​ಫಾಮ್ರ್ ಅಗತ್ಯ ಇದೆ. ಈಗಾಗಲೆ ಹಿಂದಿ, ಇಂಗ್ಲಿಷ್, ಬೆಂಗಾಲಿ ಸೇರಿ ಹಲವು ಭಾಷೆಗಳ ಚಿತ್ರಗಳು ಡಿಜಿಟಲೀಕರಣಗೊಳ್ಳುತ್ತಿರುವ ಪರಿಣಾಮ ತ್ವರಿತವಾಗಿ ಪ್ರೇಕ್ಷಕರನ್ನು ತಲುಪುತ್ತಿವೆ. ಆದರೆ ಕನ್ನಡದಲ್ಲಿ ಅದಿನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಕನ್ನಡದ ಸಿನಿಮಾಗಳು ಕೂಡ ಡಿಜಿಟಲ್ ಪ್ಲಾಟ್​ಫಾರ್ಮನೊಳಗೆ ಬರಬೇಕಿದೆ ಎಂದು ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಕಿರುಚಿತ್ರಗಳು ಬೆಳೆಯಬೇಕಿತ್ತು. ಕಡಿಮೆ ಖರ್ಚು ಮತ್ತು ಅವಧಿಯಲ್ಲಿ ಸಿನಿಮಾ ತೋರಿಸುವ ಪ್ರವೃತ್ತಿಯನ್ನು ಬೆಳೆಸಬೇಕಿದೆ. ಇದು ಇತ್ತೀಚಿನ ದಿನಗಳಲ್ಲಿ ಆರಂಭಗೊಂಡಿದೆಯಾದರೂ ಮತ್ತಷ್ಟು ವೇಗ ಪಡೆದುಕೊಳ್ಳಬೇಕು. ಆದರೆ 15-20 ನಿಮಿಷ ಮಾಡಿದರೆ ಪ್ರಯೋಜನವಿಲ್ಲ. ಕನಿಷ್ಠ 1.5 ಗಂಟೆಯಾದರೂ ಇರಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ವೈದ್ಯ ಮತ್ತು ವಿ.ಟಿ.ಅರುಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts