More

    ಕನೆಕ್ಟ್ ಆಗದ ಉಚಿತ ವೈ-ಫೈ; ಕನ್ನಡ ವಿವಿಯಲ್ಲಿ ಜ್ಞಾನ ಪ್ರಸಾರಕ್ಕೆ ಅಡ್ಡಿ

    ಲಕ್ಷಾಂತರ ರೂ. ವ್ಯಯಿಸಿದರೂ ಈಡೇರದ ಉದ್ದೇಶ

    ವೀರೇಂದ್ರ ನಾಗಲದಿನ್ನಿ

    ಹೊಸಪೇಟೆ: ಪ್ರಸ್ತುತ ದಿನಗಳಲ್ಲಿ ಎಲ್ಲವೂ ಇಂಟರ್‌ನೆಟ್ ಆಧಾರಿತವಾಗಿದೆ. ಸ್ಮಾರ್ಟ್‌ಫೋನ್ ಇದ್ದರೆ ಜಗತ್ತೇ ಅಂಗೈಯಲ್ಲಿದ್ದಂತೆ.

    ಆದರೆ, ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆ, ಇ-ಆಡಳಿತ ಸುಗಮ ಕಾರ್ಯನಿರ್ವಣೆಗಾಗಿ ಕನ್ನಡ ವಿವಿ ಆವರಣದಲ್ಲಿ ಅಳವಡಿಸಿರುವ ಉಚಿತ ವೈ-ಫೈ ಮೇಲಿಂದ ಮೇಲೆ ಕೈ ಕೊಡುತ್ತಿದ್ದು, ವಿವಿಯ ಉದ್ದೇಶಕ್ಕೆ ತೊಡಕಾಗುತ್ತಿದೆ.

    ಇದನ್ನೂ ಓದಿರಿ: ಕನ್ನಡ ವಿವಿ ಸಿಇಟಿಯಲ್ಲಿ ನಟಿ ಪವಿತ್ರ ಲೋಕೇಶ್ ಪಾಸ್

    ಕಮಲಾಪುರ ಸಮೀಪದಲ್ಲಿ ಸುಮಾರು 700 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಕನ್ನಡ ವಿಶ್ವ ವಿದ್ಯಾಲಯ ಕನ್ನಡ ಸಾಹಿತ್ಯ, ಸಂಶೋಧನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅಲ್ಲದೆ, ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯ ಇದಾಗಿದೆ.

    ವಿಶ್ವವಿದ್ಯಾಲಯದಲ್ಲಿ ಜ್ಞಾನ ಪ್ರಸರಣ ಮತ್ತು ಇ-ಆಡಳಿತ ಉತ್ತೆಜಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ದೇಶದ ಎಲ್ಲ ವಿವಿಗಳಿಗೆ 10 ವರ್ಷಗಳ ಕಾಲ ಉಚಿತ ವೈ- ಫೈ ಇಂಟರ್‌ನೆಟ್ ಕಲ್ಪಿಸಿತ್ತು. ಅದರ ಸಂಪೂರ್ಣ ವೆಚ್ಚವನ್ನೂ ಕೇಂದ್ರ ಸರ್ಕಾರವೇ ಭರಿಸಿದ್ದು, ಎರಡು ವರ್ಷಗಳಿಂದ ಉಚಿತ ವೈ-ಫೈ ನಿರ್ವಹಣೆಯನ್ನು ಆಯಾ ವಿವಿಗೆ ವಹಿಸಿದೆ.

    ಆದರೆ, ಅನುದಾನದ ಕೊರತೆಯಿಂದ ಈಗಾಗಲೇ ಜೆಸ್ಕಾಂ ಶುಲ್ಕ ಪಾವತಿಗೆ ಹೆಣಗಾಡುತ್ತಿರುವ ಕನ್ನಡ ವಿವಿಗೆ ಉಚಿತ ವೈ-ಫೈ ನಿರ್ವಹಣೆ ಮತ್ತಷ್ಟು ಕಷ್ಟವಾಗಿದೆ. ಹೀಗಾಗಿ ಸಮರ್ಪಕ ನಿರ್ವಹಣೆಯಿಲ್ಲದೆ, ಕಣ್ಣಾಮುಚ್ಚಾಲೆ ಆಡುತ್ತಿದೆ.

    ಕಾರಣವೇನು?


    ಸುತ್ತಲೂ ಅರಣ್ಯ ಹೊಂದಿರುವ ಕನ್ನಡ ವಿವಿ ಕ್ಯಾಂಪಸ್‌ನಲ್ಲಿ ಮಂಗಗಳ ಹಾವಳಿ ಸಾಮಾನ್ಯ. ಮೇಲಿಂದ ಮೇಲೆ ನಡೆಯುತ್ತಿರುವ ರಸ್ತೆಗಳ ದುರಸ್ತಿ ಕಾರ್ಯ, ಕ್ಯಾಂಪಸ್ ಒಳಾಂಗಣದಲ್ಲಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.

    ಕನೆಕ್ಟ್ ಆಗದ ಉಚಿತ ವೈ-ಫೈ; ಕನ್ನಡ ವಿವಿಯಲ್ಲಿ ಜ್ಞಾನ ಪ್ರಸಾರಕ್ಕೆ ಅಡ್ಡಿ

    ಕಾಮಗಾರಿಗಳ ಸಂದರ್ಭದಲ್ಲಿ ಕನ್ನಡ ವಿವಿಗೆ ಭೂಮಿಯೊಳಗೆ ಸಂಪರ್ಕ ಕಲ್ಪಿಸಿರುವ ಒಎಫ್‌ಸಿ ಕೇಬಲ್ ತುಂಡಾಗುವುದು, ಸರಿಯಾಗಿ ಕನೆಕ್ಷನ್ ನೀಡದಿರುವುದು ಹಾಗೂ ಕಮಲಾಪುರ ಭಾಗದಲ್ಲಿ ಪೂರ್ವಾನುಮತಿ ಇಲ್ಲದೆ ರಸ್ತೆಗಳನ್ನು ತೋಡುವ ಸಂದರ್ಭದಲ್ಲೂ ಒಎಫ್‌ಸಿ ತಂತಿ ತುಂಡಾಗುವುದರಿಂದ ಮೇಲಿಂದ ಮೇಲೆ ಸಮಸ್ಯೆ ಕಾಡುತ್ತದೆ ಎನ್ನುತ್ತಾರೆ ಕನ್ನಡ ವಿವಿ ಕುಲಪತಿ ಡಾ.ಪರಮಶಿವಮೂರ್ತಿ.

    ಆ್ಯಕ್ಸಸ್ ಪಾಯಿಂಟ್ ನಿರ್ವಹಣೆಗೆ ತೊಡಕು


    ಬಿಎಸ್‌ಎನ್‌ಎಲ್ ಸಂಪರ್ಕವಿದ್ದರೂ, ಕನ್ನಡ ವಿವಿ ಒಳಾಂಗಣದ ಸಂಪರ್ಕ ಜಾಲ, ವೈ-ಫೈ ರೂಟರ್ಸ್‌ಗಳನ್ನು ವಿವಿಯಿಂದಲೇ ನಿರ್ವಹಿಸಬೇಕು. ಕ್ಯಾಂಪಸ್‌ನ ಸುಮಾರು 100ಕ್ಕೂ ಹೆಚ್ಚು ಕಡೆ ಆ್ಯಕ್ಸಸ್ ಪಾಯಿಂಟ್ ಸ್ಥಾಪಿಸಲಾಗಿದೆ.

    200 ರಿಂದ 300 ಎಂಬಿಪಿಎಸ್ ವೇಗ ಹೊಂದಿದ್ದು, ಏಕಕಾಲಕ್ಕೆ 500 ಕ್ಕೂ ಹೆಚ್ಚು ಜನರು ಬಳಕೆ ಮಾಡಬಹುದು. ಆದರೆ, ಕೋವಿಡ್ ನಂತರದ ವರ್ಷಗಳಲ್ಲಿ ಕನ್ನಡ ವಿವಿಗೆ ಸರ್ಕಾರದಿಂದ ವಾರ್ಷಿಕ ನಿರ್ವಹಣೆ ನಿಧಿ ಬಿಡುಗಡೆಯಾಗಿಲ್ಲ. ಇದರಿಂದಾಗಿ ವೈ-ಪೈ ಆ್ಯಕ್ಸಸ್ ಪಾಯಿಂಟ್‌ಗಳ ನಿರ್ವಹಣೆಗೆ ತೊಡಕಾಗಿದೆ ಎಂಬ ಮಾತು ಕೇಳಿ ಬಂದಿದೆ.

    ಕೆಲ ತಿಂಗಳಿಂದ ಹತ್ತಾರು ಕಡೆ ಇಂಟರ್‌ನೆಟ್ ಕನೆಕ್ಟ್ ಆಗುತ್ತಿಲ್ಲ. ವಿದ್ಯಾರ್ಥಿಗಳು ಉಚಿತ ವೈ- ಫೈಗಾಗಿ ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಗ್ರಂಥಾಲಯ ಹಾಗೂ ವಿವಿಧ ಅಧ್ಯಯನ ಕೇಂದ್ರಗಳತ್ತ ಹೆಜ್ಜೆ ಹಾಕುವಂತಾಗಿದೆ. ಇನ್ನು, ಕಚೇರಿ ಕಾರ್ಯನಿರ್ವಹಣೆಗಾಗಿ ಇಂಟರ್‌ನೆಟ್‌ಗಾಗಿ ಕಾದು ಕೂರುವ ಪರಿಸ್ಥಿತಿ ಇದೆ.

    ವಿವಿ ಕ್ಯಾಂಪಸ್‌ನಲ್ಲಿ ಉಚಿತ ವೈ-ಫೈ ಕಲ್ಪಿಸಲು ಬಿಎಸ್‌ಎನ್‌ಎಲ್‌ಗೆ ವಾರ್ಷಿಕ 8- 9 ಲಕ್ಷ ರೂ. ಪಾವತಿಸಲಾಗುತ್ತದೆ. ಆದರೆ, ನಮ್ಮ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಗಳ ಹಾವಳಿಯಿಂದಾಗಿ ಕೆಲವೊಮ್ಮೆ ಸಮಸ್ಯೆ ಯಾಗುತ್ತದೆ. ವಿವಿಧೆಡೆ ರಸ್ತೆ ಕಾಮಗಾರಿಗಳಿಂದಲೂ ಸಂಪರ್ಕ ಕಡಿತವಾಗುತ್ತದೆ. ಈ ಕುರಿತು ಬಿಎಸ್‌ಎನ್‌ಎಲ್‌ಗೆ ಪತ್ರ ಬರೆಯಲಾಗಿದೆ. ನಮ್ಮಿಂದಾಗಬೇಕಾದ ದುರಸ್ತಿ ಕುರಿತು ಕ್ರಮ ವಹಿಸಲಾಗುವುದು.
    | ಡಾ.ಡಿ.ವಿ.ಪರಮಶಿವಮೂರ್ತಿ ಕುಲಪತಿ, ಕನ್ನಡ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts