More

    ಕಣ್ಣುಗಳ ಸಮಸ್ಯೆ ನಿರ್ಲಕ್ಷ್ಯ ತೋರಿದರೆ ಅಂಧತ್ವ ನಿಶ್ಚಿತ

    ಚಿಕ್ಕಬಳ್ಳಾಪುರ: ಯಾವುದೇ ಕಾರಣಕ್ಕೂ ಕಣ್ಣಿನ ಸಮಸ್ಯೆಯ ಬಗ್ಗೆ ನಿರ್ಲಕ್ಷೃ ತೋರಬಾರದು. ಇಲ್ಲದಿದ್ದಲ್ಲಿ ಜೀವನ ಪರ್ಯಂತ ಅಂಧತ್ವಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಜಿಲ್ಲಾ ಶಸಚಿಕಿತ್ಸಕ ಯಲ್ಲಾ ಆರ್.ರಮೇಶ್ ಬಾಬು ಎಚ್ಚರಿಸಿದರು.

    ವಿಶ್ವ ದೃಷ್ಟಿ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ದೃಷ್ಟಿಯಲ್ಲಿ ಭರವಸೆ’ ಎಂಬ ಘೋಷವಾಕ್ಯದಡಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರತಿಯೊಬ್ಬರು ಕಣ್ಣಿನ ದೃಷ್ಟಿದೋಷ, ರಕ್ಷಣೆಯ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಸಮಸ್ಯೆಗಳು ಕಂಡುಬಂದ ತಕ್ಷಣ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ, ಕಣ್ಣಿನ ಸೋಂಕು, ವಿಟಮಿನ್ ಎ ಕೊರತೆ, ಅಪೌಷ್ಟಿಕತೆ, ಅಕ್ಷಿಪಟಲದ ಗಾಯ, ಅನುವಂಶಿಕ ನ್ಯೂನತೆಯಿಂದ ದೃಷ್ಟಿದೋಷ ಸಂಭವಿಸುತ್ತದೆ ಎಂದು ತಿಳಿಸಿದರು.

    ಕಣ್ಣಿನ ವಿವಿಧ ಸಮಸ್ಯೆಗಳನ್ನು ಸಕಾಲದಲ್ಲಿ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಪ್ರಾಥಮಿಕ ಹಂತದಲ್ಲಿಯೇ ದೃಷ್ಟಿ ಸಮಸ್ಯೆಯನ್ನು ನಿವಾರಿಸಲು ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದು ವಿವರಿಸಿದರು.

    ರಕ್ತದೊತ್ತಡ, ಸಕ್ಕರೆ ಕಾಯಿಲೆ ಹೊಂದಿರುವವರು ಪ್ರತಿ ಮೂರು ತಿಂಗಳಿಗೊಮ್ಮೆ ತಜ್ಞ ವೈದ್ಯರಲ್ಲಿ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಿದ ರಮೇಶ್‌ಬಾಬು, ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೇತ್ರ ಸಮಸ್ಯೆಯುಳ್ಳ ಶಾಲಾ ಮಕ್ಕಳಿಗೆ ಉಚಿತ ಕನ್ನಡಕಗಳ ವಿತರಣೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಮುಂಬರುವ ದಿನಗಳಲ್ಲಿ ಚುರುಕು ನೀಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಹಿರಿಯ ಆರೋಗ್ಯ ಮೇಲ್ವಿಚಾರಕ ಮಹೇಶ್, ನೇತ್ರ ತಜ್ಞ ಚೇತನ್ ಮತ್ತಿತರರು ಇದ್ದರು.

    7091 ಶಸಚಿಕಿತ್ಸೆ: ನೂತನ ಜಿಲ್ಲಾಸ್ಪತ್ರೆಯಲ್ಲಿ 2017ರ ಅ.8 ರಿಂದ ಕಣ್ಣಿನ ಶಸಚಿಕಿತ್ಸೆ ಪ್ರಾರಂಭವಾಗಿದ್ದು ಇಲ್ಲಿಯವರೆಗೂ 3,600 ಶಸಚಿಕಿತ್ಸೆ ನೆರವೇರಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದಾನದ ಕಣ್ಣುಗಳನ್ನು ಕಾರ‌್ನಿಯಲ್ ಟ್ರಾನ್ಸ್‌ಪ್ಲಾಂಟೇಷನ್ (ಸರ್ಜರಿ) ಮಾಡಿದ ಕೀರ್ತಿ ಜಿಲ್ಲೆಗೆ ಲಭಿಸಿದೆ. 5 ಶಸಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಮಧುಮೇಹಿ ರೋಗಿಗಳಿಗೆ 54 ಲೇಸರ್ ಶಸಚಿಕಿತ್ಸೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ 2019-20ನೇ ಸಾಲಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 7091 ಕಣ್ಣುಪೊರೆ ಶಸಚಿಕಿತ್ಸೆ ನೆರವೇರಿಸಲಾಗಿದೆ.

    ನೇತ್ರದಾನ ಮಾಡಿ: ಕಣ್ಣು ಸೂಕ್ಷ್ಮ ಅಂಗ. ಇದರ ರಕ್ಷಣೆಯಿಂದ ಸುತ್ತಲಿನ ಜಗತ್ತನ್ನು ಕಾಣಲು ಸಾಧ್ಯ. ಆದರೆ, ದೈಹಿಕ ನ್ಯೂನತೆ ಸೇರಿ ನಾನಾ ಸಮಸ್ಯೆಗಳಿಗೆ ಹಲವರು ಕಣ್ಣು ಕಳೆದುಕೊಂಡಿದ್ದಾರೆ. ಇಂತಹವರಲ್ಲಿ ಅನೇಕರಿಗೆ ಮತ್ತೆ ದೃಷ್ಟಿ ನೀಡಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ನೇತ್ರದಾನ ಮಾಡಬೇಕು. ಈ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ನೇತ್ರ ತಜ್ಞ ಮಹೇಶ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts