More

    ಕಣ್ಣೀರಿಟ್ಟ ಕರೊನಾ ಸೇನಾನಿಗಳು!

    ಬೀದರ್: ಇಬ್ಬರು ಡಿ ಗ್ರೂಪ್ ಸಿಬ್ಬಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿರುವುದು ಬ್ರಿಮ್ಸ್ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಿಸಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿರುವ 70ಕ್ಕೂ ಹೆಚ್ಚು ಡಿ ಗ್ರೂಪ್ ಸಿಬ್ಬಂದಿ(ಆಯಾ) ಮಂಗಳವಾರ ಕರೊನಾ ಭೀತಿಯಿಂದ ಮಿಂಚಿನ ಪ್ರತಿಭಟನೆ ನಡೆಸಿ ನಮ್ಮ ಜೀವ ರಕ್ಷಿಸಿ ಎಂದು ಕಣ್ಣೀರಿಟ್ಟರು.
    ನಮಗೆ ಇಲ್ಲಿ ಅಗತ್ಯ ಸೌಲಭ್ಯಗಳಿಲ್ಲ. ಸುರಕ್ಷತಾ ಸಲಕರಣೆ ಕೊಡುತ್ತಿಲ್ಲ. ಈಗ ಇಬ್ಬರಿಗೆ ಕರೊನಾ ಪಾಸಿಟಿವ್ ಬಂದ ಮೇಲೆ ನಮ್ಮ ಗತಿ ಏನು ಎಂಬ ಚಿಂತೆ ಕಾಡುತ್ತಿದೆ. ಗೋಳು ಕೇಳುವವರು ದಿಕ್ಕಿಲ್ಲದಂತಾಗಿದೆ ಎಂದು ಆಯಾಗಳು ಬ್ರಿಮ್ಸ್ ಆಸ್ಪತ್ರೆ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು. ಕರೊನಾ ಸಮರದಲ್ಲಿ ಹೋರಾಡುತ್ತಿರುವ ಇವರು ಕಣ್ಣೀರು ಇಟ್ಟಿದ್ದನ್ನು ಗಮನಿಸಿದರೆ ಬ್ರಿಮ್ಸ್ನಲ್ಲಿ ಎಲ್ಲವೂ ಸರಿಯಲ್ಲ ಎಂಬುದು ತೋರಿಸಿಕೊಟ್ಟಿದೆ.
    ನಿತ್ಯವೂ ಉತ್ತಮ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಸೇರಿ ಅಗತ್ಯ ವೈದ್ಯಕೀಯ ಸೌಲಭ್ಯ ಕೊಡುತ್ತಿಲ್ಲ. ಕ್ವಾರಂಟೈನ್ನಲ್ಲಿ ಇರುವ ಆಯಾಗಳಿಗೆ ವಸತಿ ಸೌಲಭ್ಯ ಇಲ್ಲ. ವೈದ್ಯರು ಸೇರಿ ಇತರ ವೈದ್ಯಕೀಯ ಸಿಬ್ಬಂದಿ ವಸತಿಗಾಗಿ ಲಾಡ್ಜ್ ವ್ಯವಸ್ಥೆ ಮಾಡಲಾಗಿದೆ. ಆದರೆ ಆಯಾಗಳಿಗೆ ಈ ವ್ಯವಸ್ಥೆ ಮಾಡಿಲ್ಲ ಎಂದು ಕಿಡಿಕಾರುತ್ತ ಕೆಲವರು ಕಣ್ಣೀರಿಟ್ಟರು.
    ಸ್ಥಳಕ್ಕೆ ಆಗಮಿಸಿದ ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಅಂತಪ್ಪನೋರ್, ನಿಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಎಲ್ಲ ಆಯಾಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
    ಬ್ರಿಮ್ಸ್ನಲ್ಲಿ 70ಕ್ಕೂ ಅಧಿಕ ಆಯಾಗಳು ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುತ್ತಿದ್ದಾರೆ. ಏ.28ರಂದು ಬ್ರಿಮ್ಸ್ನಲ್ಲಿ ಮೃತ ವೃದ್ಧನಿಗೆ ಕರೊನಾ ಪಾಸಿಟಿವ್ ಬಂದಿತ್ತು. ಈತನಿಗೆ ಆರೈಕೆ ಮಾಡಿದ ಇಬ್ಬರು ಆಯಾಗಳಿಗೂ ಸೋಮವಾರ ಪಾಸಿಟಿವ್ ಬಂದಿದೆ. ಈ ಕಾರಣಕ್ಕೆ ಇವರು ಆತಂಕಗೊಂಡು ಅಗತ್ಯ ಸೌಲಭ್ಯ ಒದಗಿಸುವಂತೆ ಮಿಂಚಿನ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
    ಕರೊನಾ ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆ ಆಯಾಗಳು ಸಕ್ರಿಯ ತೊಡಗಿದ್ದಾರೆ. ಕರೊನಾ ಸೇನಾನಿಗಳಾಗಿ ದುಡಿಯುತ್ತಿದ್ದಾರೆ. ಕರೊನಾ ಶಂಕಿತರು, ಸೋಂಕಿತರು ಸೇರಿ ಆಸ್ಪತ್ರೆಗೆ ಬರುವ ರೋಗಿಗಳ ಆರೈಕೆಯಲ್ಲಿ ಆಯಾಗಳ ಪಾತ್ರ ಹಿರಿದಾಗಿದೆ. ಇವರ ಸುರಕ್ಷತೆ ಬ್ರಿಮ್ಸ್ ಆಡಳಿತ ಮಂಡಳಿ ಜತೆಗೆ ಜಿಲ್ಲಾಡಳಿತದ ಕರ್ತವ್ಯವೂ ಆಗಿದೆ. ಆದರೆ ತಮಗೆ ಸೂಕ್ತ ಸೌಲಭ್ಯ ಒದಗಿಸಿ ಎಂದು ಆಗ್ರಹಿಸಿ ಇವರು ಪ್ರತಿಭಟನೆಗೆ ಇಳಿದಿರುವುದು ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts