More

    ಕಡಲೆ ಖರೀದಿ ಕೇಂದ್ರ ಖಾಲಿಖಾಲಿ

    ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿಗೆ ರೈತರ ಹೆಸರು ನೋಂದಣಿಗೆ ಮಾ. 15ರವರೆಗೆ ಅವಕಾಶ ನೀಡಲಾಗಿದ್ದು, 16ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

    ನೋಂದಣಿಗೆ ನೂರೆಂಟು ಅಡೆತಡೆಗಳು ರೈತರಿಗೆ ಎದುರಾಗಿರುವುದರಿಂದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಮಂದಗತಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನಲ್ಲಿ ಬಹುತೇಕ ಖರೀದಿ ಕೇಂದ್ರಗಳು ಖಾಲಿ ಹೊಡೆಯುತ್ತಿವೆ.

    ಸದ್ಯ ರೈತ ಕಡಲೆ ಬೆಳೆದಿದ್ದರೂ ಖರೀದಿ ಕೇಂದ್ರಕ್ಕೆ ಕೊಡದಂತಹ ಸ್ಥಿತಿ ನಿರ್ವಣವಾಗಿದೆ. ಇದಕ್ಕೆಲ್ಲ ಕೃಷಿ ಇಲಾಖೆಯ ತಾಳಮೇಳವಿಲ್ಲದ ಕೆಲಸಗಳೇ ಕಾರಣ ಎಂದು ರೈತರು ದೂರುತ್ತಿದ್ದಾರೆ.

    ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಸಮೀಕ್ಷೆ ತಡವಾಗಿ ಆರಂಭಿಸಿರುವುದು, ಸಮೀಕ್ಷೆಗೆ ಹೋದವರು ಸರಿಯಾಗಿ ನಮೂದು ಮಾಡದಿರುವುದು, ಹೊಲದಲ್ಲಿ ಇದ್ದ ಬೆಳೆಯೊಂದು, ನಮೂದಾಗಿರುವುದು ಇನ್ನೊಂದು ಹೀಗೆ ಹತ್ತಾರು ಸಮಸ್ಯೆಗಳು ಎದುರಾಗಿದ್ದರಿಂದ ರೈತರು ಹೆಸರು ನೋಂದಣಿ ಮಾಡಲು ಪರದಾಡುವಂತಾಗಿದೆ.

    ಇದೆಲ್ಲದರ ಗೊಡವೆಯೇ ಬೇಡ ಎಂದು ಎಷ್ಟೋ ರೈತರು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಕಡಲೆಕಾಳು ಕೊಟ್ಟು ಹೋಗುತ್ತಿದ್ದಾರೆ.

    ಸದ್ಯ ಎಪಿಎಂಸಿಗಳಲ್ಲಿ ಕಡಲೆ ಪ್ರತಿ ಕ್ವಿಂಟಾಲ್​ಗೆ 3500 ರೂ.ನಂತೆ ಮಾರಾಟವಾಗುತ್ತಿದೆ. ಆದರೆ, ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 4875 ರೂ.ನಂತೆ ಖರೀದಿ ಮಾಡಲಾಗುತ್ತದೆ. ಅದಕ್ಕಾಗಿ ರೈತ ನೋಂದಣಿ ನಡೆದಿದ್ದು, ಇದುವರೆಗಿನ ನೋಂದಣಿ ಮಾತ್ರ ಅತ್ಯಂತ ಕಡಿಮೆಯಾಗಿದೆ.

    ಹುಬ್ಬಳ್ಳಿ ಹಾಗೂ ತಾಲೂಕಿನ ಎರಡು ಕಡೆ ಖರೀದಿ ಕೇಂದ್ರ ಆರಂಭಿಸಲಾಗಿದೆ. ಹುಬ್ಬಳ್ಳಿ ಎಪಿಎಂಸಿ ಆವರಣದ ಹುಬ್ಬಳ್ಳಿ ತಾಲೂಕು ಹುಟ್ಟುವಳಿ ಮಾರಾಟ ಸಹಕಾರಿ ಸಂಸ್ಥೆ, ನೂಲ್ವಿ, ಹೆಬಸೂರ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

    ಇದುವರೆಗೂ ಧಾರವಾಡ ಜಿಲ್ಲೆಯಲ್ಲಿ (ಮಾ. 3ಕ್ಕೆ) 3464 ರೈತರು ಕಡಲೆ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

    ಹತ್ತಾರು ಸಾವಿರ ರೈತರು ಕಡಲೆ ಬೆಳೆದಿದ್ದರೂ ನೋಂದಣಿ ಮಾತ್ರ ಅತ್ಯಂತ ಕಡಿಮೆ ಇರುವುದು ಸೋಜಿಗ ತಂದಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts