More

    ಕಡಲೆ ಕೊಟ್ಟವರಿಗೆ ಕಾಸು ಕೊಡಿ

    ಬಸವರಾಜ ಇದ್ಲಿ ಹುಬ್ಬಳ್ಳಿ

    ಬೆಂಬಲಬೆಲೆ ಯೋಜನೆಯಡಿ ಕಡಲೆಕಾಳು ಖರೀದಿಗೆ ಕೊಟ್ಟು ತಿಂಗಳು ಕಳೆದರೂ ಅದರ ಹಣ ಪಾವತಿಯಾಗದೆ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಕರೊನಾ ಲಾಕ್​ಡೌನ್, ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದೆ ಇರುವುದು ಸೇರಿ ಹತ್ತಾರು ಸಮಸ್ಯೆಗಳ ಕೂಪಕ್ಕೆ ರೈತ ಸಮುದಾಯ ಸಿಲುಕಿದೆ.

    2019ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಅತಿವೃಷ್ಟಿ, ನೆರೆಗೆ ಸಿಕ್ಕು ನಷ್ಟವಾದವು. ಅಷ್ಟು ಇಷ್ಟು ಕೈಗೆ ಬಂದ ಬೆಳೆಗಳನ್ನು ಮಾರಾಟ ಮಾಡಿ ಬದುಕು ಸಾಗಿಸೋಣ ಎಂದರೆ ಸರಿಯಾದ ಬೆಲೆ ಇರಲಿಲ್ಲ. ಸರ್ಕಾರವೇನೋ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ನೀಡಲು ಮುಂದಾಗಿದೆ. ಆದರೆ, ಯೋಜನೆಯಡಿ ಖರೀದಿ ಮಾಡಿದ ಬೆಳೆಗಳ ಹಣವನ್ನು ಸಕಾಲದಲ್ಲಿ ರೈತರಿಗೆ ನೀಡದೆ ಪರಿತಪಿಸುವಂತೆ ಮಾಡಿದೆ.

    ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್​ಗೆ 4875 ರೂ.ನಂತೆ ಒಬ್ಬ ರೈತರಿಂದ 15 ಕ್ವಿಂಟಾಲ್​ವರೆಗೆ ಕಡಲೆ ಖರೀದಿ ಮಾಡುತ್ತಿದೆ. ಮೇ 25 ರವರೆಗೂ ಖರೀದಿ ಮಾಡುವುದಾಗಿಯೂ ಸರ್ಕಾರ ಹೇಳಿದೆ. ಆದರೆ, ರೈತರಿಗೆ ಸಂದಾಯ ಮಾಡಬೇಕಾದ ಹಣದ ಬಗ್ಗೆ ಇದುವರೆಗೂ ಚಕಾರ ಎತ್ತಿಲ್ಲ.

    ಫೆಬ್ರವರಿ ಎರಡನೇ ವಾರದಿಂದ ಕಡಲೆಕಾಳು ಖರೀದಿಗೆ ನೋಂದಣಿ ಆರಂಭವಾಗಿ ಮಾರ್ಚ್​ನಲ್ಲಿ ಖರೀದಿ ಶುರುವಾಯಿತು. ಈ ಮಧ್ಯೆ ಕರೊನಾ ಲಾಕ್​ಡೌನ್ ಆಗಿದ್ದರಿಂದ ಕೆಲ ದಿನಗಳವರೆಗೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಖರೀದಿ ಪುನಾರಂಭಿಸಲಾಗಿದೆ. ಈ ಮಧ್ಯೆ ಮಾರ್ಚ್​ನಲ್ಲೇ ಕಡಲೆಕಾಳು ಖರೀದಿ ಕೊಟ್ಟವರಿದ್ದಾರೆ. ಈಗಲೂ ಖರೀದಿ ಕೇಂದ್ರಗಳ ಮುಂದೆ ಸರದಿಯಲ್ಲಿ ನಿಂತು ಮಾರಾಟ ಮಾಡುತ್ತಿದ್ದಾರೆ. ಆದರೆ, ಕಡಲೆ ಖರೀದಿಗೆ ಕೊಟ್ಟು ತಿಂಗಳು, ಎರಡು ತಿಂಗಳು ಕಳೆದರೂ ಇದುವರೆಗೂ ರೈತರ ಖಾತೆಗೆ ಹಣ ಬಂದಿಲ್ಲ.

    ರೈತರ ನೋಂದಣಿ ಮಾಡಿಕೊಳ್ಳುವಾಗ ಬ್ಯಾಂಕ್ ಪಾಸ್ ಬುಕ್ ಸೇರಿ ಎಲ್ಲ ಅಗತ್ಯ ದಾಖಲೆ ಪಡೆದುಕೊಳ್ಳಲಾಗಿದೆ. ಎಲ್ಲ ಮಾಹಿತಿ ಆನ್​ಲೈನ್​ನಲ್ಲೇ ಲಭ್ಯವಿದ್ದರೂ ರೈತರು ಮಾತ್ರ ಹಣಕ್ಕಾಗಿ ತಿಂಗಳುಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

    ನಾಫೆಡ್ ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(ಮಾರ್ಕ್​ಫೆಡ್)ವನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದೆ.

    ಧಾರವಾಡ ಜಿಲ್ಲೆಯೊಂದರಲ್ಲೇ 20 ಸಾವಿರಕ್ಕೂ ಹೆಚ್ಚು ರೈತರು ಕಡಲೆ ಖರೀದಿ ಕೊಟ್ಟಿದ್ದಾರೆ. ಇದೇ ರೀತಿ ರಾಜ್ಯದ ಕಡಲೆ ಬೆಳೆಯುವ ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಕಡಲೆ ಖರೀದಿ ಮಾಡಿದ ಸರ್ಕಾರ ರೈತರಿಗೆ ಹಣ ಪಾವತಿಸುವ ಕೆಲಸ ಮಾಡುತ್ತಿಲ್ಲ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮುಂಗಾರು ಹಂಗಾಮು ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಂಬಲಬೆಲೆ ಕಡಲೆಕಾಳು ಮಾರಾಟ ಮಾಡಿದ ಹಣವನ್ನು ನಮಗೆ ಬೇಗ ಕೊಡಬೇಕು. ಅದರಿಂದ ಒಂದಿಷ್ಟು ಬೀಜ, ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡುತ್ತೇವೆ.

    |ಸುಭಾಸ ಬೂದಿಹಾಳ, ಕೋಳಿವಾಡ ರೈತ

    ಕಡಲೆ ಖರೀದಿಯಾಗಿರುವ ಪ್ರಮಾಣ, ರೈತರ ವಿವರ ಇತ್ಯಾದಿಗಳ ವಿವರಗಳನ್ನು ನಾಫೆಡ್​ಗೆ ಸಲ್ಲಿಸಲಾಗುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ರೈತರಿಗೆ ಹಣ ಸಂದಾಯವಾಗಬಹುದು.

    | ಸಚಿನ್ ಪಾಟೀಲ್, ಮಾರ್ಕ್​ಫೆಡ್ ವ್ಯವಸ್ಥಾಪಕರು, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts