More

    ಕಟ್ಟಡ ಪರವಾನಗಿಗೆ ಸಾರ್ವಜನಿಕರ ಅಲೆದಾಟ!

    ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬುಡಾ, ಖಾಸಗಿ ಬಡಾವಣೆಗಳಲ್ಲಿ, ವಸತಿ ಪ್ರದೇಶಗಳಲ್ಲಿ ಸೂರು ಕಟ್ಟಿಕೊಳ್ಳುವವರು ಕಟ್ಟಡ ಪರವಾನಗಿಗಾಗಿ ತಿಂಗಳುಗಟ್ಟಲೇ ಕಾಯುವಂತಾಗಿದೆ. ನಾಲ್ಕೈದು ತಿಂಗಳು ಗಳಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತಂತ್ರಾಂಶ (ಸಾಫ್ಟ್‌ವೇರ್) ಸಮಸ್ಯೆ ಇನ್ನಿತರ ಕಾರಣಗಳಿಂದಾಗಿ ವಸತಿ, ವಾಣಿಜ್ಯ ಕಟ್ಟಡ ಪರವಾನಗಿ ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿ ಆಗುತ್ತಿಲ್ಲ.

    ಪರಿಣಾಮ ಅರ್ಜಿದಾರರು ಪರವಾನಗಿಗಾಗಿ ತಿಂಗಳುಗಟ್ಟಲೇ ಕಾಯಬೇಕಾಗಿದೆ. ಅಲ್ಲದೆ, ಎಲ್ಲ ದಾಖಲೆಗಳು ಸರಿ ಇದ್ದರೂ ಸಾಫ್ಟ್‌ವೇರ್‌ನಲ್ಲಿ ಅಳವಡಿಕೆಯಾಗುತ್ತಿಲ್ಲ. ಕಂದಾಯ ವಿಭಾಗದಿಂದ ಅರ್ಜಿ ವಾಪಸ್ ಬಂದಿಲ್ಲ ಎನ್ನುತ್ತ ಪಾಲಿಕೆ ಯೋಜನಾ ವಿಭಾಗದ ಸಿಬ್ಬಂದಿ ಜನರನ್ನು ಅಲೆದಾಡಿಸುತ್ತಿದ್ದಾರೆ. ಸಕಾಲದ ವ್ಯಾಪ್ತಿಯಲ್ಲಿ ಬರುವುದರಿಂದ 17 ದಿನಗಳ ಒಳಗಾಗಿಯೇ ಅರ್ಜಿದಾರನಿಗೆ ಪರವಾನಗಿ ನೀಡಬೇಕು. ಆದರೆ, 30 ದಿನಗಳ ಕಳೆದು ಕಟ್ಟಡ ಪರವಾನಗಿ ಸಿಗುತ್ತಿಲ್ಲ.

    ಕಟ್ಟಡ ನಿರ್ಮಾಣ ನಕ್ಷೆ, ಮೂರು ವರ್ಷದ ತೆರಿಗೆ, ಬ್ಯಾಂಕ್ ದಾಖಲೆ, ಸಿವಿಲ್ ಇಂಜಿನಿಯರ್ ಅಂದಾಜು ಪತ್ರ ಸೇರಿ ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಬುಡಾ, ಖಾಸಗಿ ವಸತಿ ಬಡಾವಣೆಗಳಿಗೆ, ವಾಣಿಜ್ಯ ಕಟ್ಟಡಗಳಿಗೆ, ವಾಣಿಜ್ಯ ಬಡಾವಣೆಗಳಿಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆ. ಅಲ್ಲದೆ, ಬುಡಾ ಬಡಾವಣೆಗಳಿಗೆ ಅಭಿವೃದ್ಧಿ ಶುಲ್ಕ ಇರುವುದಿಲ್ಲ. ಕೆಲವರು ಅನಧಿಕೃತ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಂಥವುಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಹೆಚ್ಚುವರಿ ಶುಲ್ಕ ವಸೂಲಿ ದೂರ: ಮಹಾನಗರ ಪಾಲಿಕೆಯಲ್ಲಿ ಕಟ್ಟಡ ಪರವಾನಗಿ ಪಡೆದುಕೊಳ್ಳಬೇಕೆಂದರೆ ಪ್ರಭಾವಿ ವ್ಯಕ್ತಿಗಳ ಪರಿಚಯ ಬೇಕು. ಇಲ್ಲವೇ ಕೇಳಿದಷ್ಟು ಹಣ ನೀಡಿದರೆ ಒಂದೇ ವಾರದಲ್ಲಿ ಪರವಾನಗಿ ಸಿಗುತ್ತದೆ. ಯಾವುದೂ ಇಲ್ಲದಿದ್ದರೆ ಕನಿಷ್ಠ 1 ತಿಂಗಳು ಕಾಯಬೇಕು. ಕಟ್ಟಡ ನಕ್ಷೆ, ತೆರಿಗೆ ಪಾವತಿ, ಬ್ಯಾಂಕ್ ದಾಖಲೆಗಳನ್ನು ಸೇರಿ ಎಲ್ಲವನ್ನು ನೀಡಿದರೂ ಸಾಫ್ಟ್‌ವೇರ್ ತೆಗೆದುಕೊಳ್ಳುತ್ತಿಲ್ಲ ನಾಳೆ ಬನ್ನಿ ಎಂದು ಅಲೆದಾಡಿಸುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಎರಡು ತಿಂಗಳಿಂದ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಕಟ್ಟಡಗಳ ಪರವಾನಗಿ ನೀಡುವುದರಲ್ಲಿ ಸಮಸ್ಯೆಯಾಗಿತ್ತು. ಇದೀಗ ಯಾವುದೇ ಸಮಸ್ಯೆ ಇಲ್ಲ.

    ಸಕಾಲದಲ್ಲಿ 17 ದಿನಗಳ ಒಳಗಾಗಿಯೇ ಪರವಾನಗಿ ನೀಡಲಾಗುತ್ತಿದೆ. ಕಟ್ಟಡ ನಕ್ಷೆ, ತೆರಿಗೆ, ಖರೀದಿ ಪತ್ರ ಇನ್ನಿತರರ ದಾಖಲೆಗಳನ್ನು ಸರಿಯಾಗಿ ಇಲ್ಲದಿರುವ ಕಾರಣ ತಡವಾಗುತ್ತದೆ. ಎಲ್ಲವೂ ಸರಿ ಇದ್ದರೆ 10 ದಿನಗಳಲ್ಲಿ ಸಿಗುತ್ತದೆ. ಕಂದಾಯ ವಿಭಾಗದಿಂದ ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿ ಆಗದಿರುವುದೇ ವಿಳಂಬಕ್ಕೆ ಕಾರಣವಾಗಿದೆ.
    | ವಿ.ಎಸ್.ಹಿರೇಮಠ ಪಾಲಿಕೆ ಯೋಜನಾ ಅಧಿಕಾರಿ

    ಯಾವುದೇ ಕಟ್ಟಡಕ್ಕೆ ಪರವಾನಗಿ ನೀಡುವ ಮುನ್ನ ಮೂರು ವರ್ಷದ ತೆರಿಗೆ, ಸರ್ಕಾರಿ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಅನುಮತಿ ನೀಡಲಾಗುತ್ತಿದೆ. ಕೆಲ ಅರ್ಜಿಗಳು ನಿಗದಿತ ಸಮಯದಲ್ಲಿಯೇ ವಿಲೇವಾರಿ ಆಗುತ್ತಿಲ್ಲ.
    | ಎಸ್.ಬಿ.ದೊಡ್ಡಗೌಡರ, ಪಾಲಿಕೆ ಕಂದಾಯ ವಿಭಾಗದ ಆಯುಕ್ತ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts