More

    ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ

    ಹುಕ್ಕೇರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ವಿಶ್ವನಾಥ ಕತ್ತಿ ಹಾಗೂ ರಾಜೇಶ್ವರಿ ಕತ್ತಿ ಸ್ಮರಣಾರ್ಥ ಧಾರ್ಮಿಕ ಟ್ರಸ್ಟ್ ವತಿಯಿಂದ ಸುಮಾರು 50 ಲಕ್ಷ ರೂ. ಮೌಲ್ಯದ ವಿವಿಧ ಅತ್ಯಾಧುನಿಕ ಯಂತ್ರ ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸರ್ಕಾರದಿಂದಲೇ ಸಮಗ್ರ ಅಭಿವೃದ್ಧಿ ಅಸಾಧ್ಯ. ಸಂಘ-ಸಂಸ್ಥೆಗಳು, ದಾನಿಗಳು, ಸೇವಾ ಮನೋಭಾವ ಹೊಂದಿರುವವರು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಈ ದಿಸೆಯಲ್ಲಿ ನಮ್ಮ ತಂದೆ-ತಾಯಿ ಸ್ಮರಣಾರ್ಥ ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ಕಣ್ಣು ಪರೀಕ್ಷಾ ಯಂತ್ರ, ಡಯಾಲಿಸೀಸ್ ಯಂತ್ರ, ಶುದ್ಧ ಕುಡಿಯುವ ನೀರಿನ ಘಟಕ, ಆಕ್ಸಿಜನ್ ಘಟಕಕ್ಕೆ ಪ್ರತ್ಯೇಕ ಶೆಡ್ ನಿರ್ಮಾಣ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಆಸ್ಪತ್ರೆಯ ಒಳರೋಗಿಗಳಿಗೆ ಪ್ರತಿದಿನ 2 ಬಾರಿ ಊಟ, ಒಂದು ಬಾರಿ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ತಿಳಿಸಿದರು.
    ಮುಂಬರುವ ಶೈಕ್ಷಣಿಕ ವರ್ಷದಿಂದ ನೇರ್ಲಿ ಗ್ರಾಮದ ಯುವಕರಿಗೆ ಉಚಿತ ತರಬೇತಿ ಕೇಂದ್ರ ಆರಂಭಿಸಲಾಗುವುದು. ಬೆಲ್ಲದ ಬಾಗೇವಾಡಿ ಮತ್ತು ಸಂಕೇಶ್ವರದಲ್ಲಿ ಮಹಿಳೆಯರಿಗೆ ನರ್ಸಿಂಗ್ ಕೋರ್ಸ್ ಆರಂಭಿಸಿ ಬಡವರಿಗೆ ಉದ್ಯೋಗ ಸೃಷ್ಟಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

    ನಿಡಸೋಸಿ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ದೊರೆಯಬೇಕೆಂಬ ಉದ್ದೇಶದಿಂದ ಕತ್ತಿ ಸಹೋದರರು ಲಕ್ಷಾಂತರ ಮೌಲ್ಯದ ಉಪಕರಣ ದೇಣಿಗೆಯಾಗಿ ನೀಡಿ ಹೃದಯ ಶ್ರೀಮಂತಿಕೆ, ಸಾಮಾಜಿಕ ಕಳಕಳಿ ತೋರಿದ್ದಾರೆ ಎಂದರು.

    ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿದರು. ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಅಭಿನವ ಮಂಜುನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಎಂ.ಎಂ.ನರಸನ್ನವರ, ಮುಖಂಡರಾದ ಬಸವರಾಜ ಮಟಗಾರ, ಎ.ಕೆ.ಪಾಟೀಲ, ಮಹಾವೀರ ನಿಲಜಗಿ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸತ್ತೆಪ್ಪ ನಾಯಿಕ, ರಾಜು ಮುನ್ನೋಳಿ, ಅಶೋಕ ಚಂದಪ್ಪಗೋಳ, ಕಲಗೌಡ ಪಾಟೀಲ, ಆನಂದ ಗಂಧ, ಪಿಂಟು ಶೆಟ್ಟಿ, ಬಸವರಾಜ ಗಂಗಣ್ಣವರ, ಪ್ರೊ. ಪಿ.ಜಿ.ಕೊಣ್ಣೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts