More

    ಕಚೇರಿ ನವೀಕರಣಕ್ಕೆ ಹಣ ಎಲ್ಲಿತ್ತು?

    ರಾಣೆಬೆನ್ನೂರ: ಸಭೆಗೆ ಹಾಜರಾದ ತಾಪಂ ಸದಸ್ಯರಿಗೆ 150 ರೂ. ಭತ್ಯೆ ನೀಡಲು ಹಣವಿಲ್ಲ. ಆದರೆ, ಶಾಸಕರ ಜನಸಂಪರ್ಕ ಕಾರ್ಯಾಲಯವನ್ನು ನವೀಕರಿಸಲು ಹಣ ಎಲ್ಲಿಂದ ಬಂತು? ಯಾವ ಅನುದಾನ ಬಳಸಿಕೊಂಡಿದ್ದೀರಿ? ಲಕ್ಷಾಂತರ ರೂ. ಖರ್ಚು ಮಾಡಲು ಯಾರಿಗೆ ಕೇಳಿದ್ದೀರಿ…?

    ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದ ಸದಸ್ಯರ ಪ್ರಶ್ನೆಗಳಿವು.

    ಸಭೆ ಆರಂಭದಲ್ಲಿ ಪಂಚಾಯತ್​ರಾಜ್ ಇಂಜಿನಿಯರಿಂಗ್ ವಿಭಾಗದ ರಾಮಣ್ಣ ಬಜಾರಿ ಮಾಹಿತಿ ನೀಡುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಮೊದಲು ಶಾಸಕರ ಕೊಠಡಿ ನವೀಕರಣಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ. ಅದರ ಅಂದಾಜು ಪ್ರತಿ ಹಾಗೂ ಯಾವ ಅನುದಾನ ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿ ಕೊಡಬೇಕು ಎಂದು ಪಟ್ಟುಹಿಡಿದರು.

    ಉತ್ತರಿಸಿದ ರಾಮಣ್ಣ ಬಜಾರಿ, ಅದನ್ನೆಲ್ಲ ಈಗಲೇ ಕೊಡಲು ಬರುವುದಿಲ್ಲ. ಬಿಲ್ ಪಾಸು ಮಾಡಿದ ಬಳಿಕ ಕೊಡುತ್ತೇನೆ ಎಂದರು. ಮಧ್ಯ ಪ್ರವೇಶಿಸಿದ ಇಒ ಎಸ್.ಎಂ. ಕಾಂಬಳೆ, ಶಾಸಕರ ಕೊಠಡಿ ನವೀಕರಣದ ಕುರಿತು ಮುಂದಿನ ಸಭೆಯಲ್ಲಿ ಮಾಹಿತಿ ನೀಡುತ್ತೇವೆ ಎಂದರು.

    ಇದರಿಂದ ಆಕ್ರೋಶಗೊಂಡ ಸದಸ್ಯ ನೀಲಕಂಠಪ್ಪ ಕುಸಗೂರ, ಸದಸ್ಯರಿಗೆ 150 ರೂ. ಭತ್ಯೆ ಕೊಡೋಕೆ ತಾಪಂನಲ್ಲಿ ಹಣವಿಲ್ಲ. ಇನ್ನೂ 15 ಲಕ್ಷ ರೂ. ಖರ್ಚು ಮಾಡಿ ಶಾಸಕರ ಕೊಠಡಿ ನವೀಕರಣ ಹೇಗೆ ಮಾಡಿದ್ದೀರಿ?. ಅನುದಾನವಿಲ್ಲದಿದ್ದಾಗ ಅದನ್ನು ನವೀಕರಿಸುವ ಅಗತ್ಯವೇನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರುಪ್ಲಪ್ಪ ಹಂಚಿನಮನಿ ಮಾತನಾಡಿ, ಯಾವುದೇ ಕಾಮಗಾರಿಗೆ ವರ್ಕ್ ಆರ್ಡರ್ ಬೇಕು. ಆದರೆ, ಶಾಸಕರ ಕಚೇರಿ ನವೀಕರಣಕ್ಕೆ ಲಕ್ಷಾಂತರ ರೂ. ವ್ಯಯಿಸಿದರೂ ಯಾವುದೇ ಬಿಲ್ ಇಲ್ಲ, ಯಾರಿಂದಲೂ ಅನುಮೋದನೆಯಿಲ್ಲ. ತಾಪಂ ಸದಸ್ಯರ ಗಮನಕ್ಕೂ ತಂದಿಲ್ಲ. ಹೀಗಿದ್ದಾಗ ಹೇಗೆ ಮಾಡಲು ಸಾಧ್ಯವಾಗಿದೆ. ಇದನ್ನು ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು.

    ಇಒ ಮಾತನಾಡಿ, ತುರ್ತಾಗಿ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸುವ ಸಲುವಾಗಿ ನವೀಕರಿಸಲಾಗಿದೆ. ಈ ಬಗ್ಗೆ ಎಲ್ಲ ಮಾಹಿತಿಯನ್ನು ಮುಂದಿನ ಸಭೆಗೆ ಹಾಜರು ಪಡಿಸುತ್ತೇವೆ ಎಂದು ಸದಸ್ಯರನ್ನು ಸಮಾಧಾನಪಡಿಸಿದರು.

    ತಹಸೀಲ್ದಾರ್ ವಿರುದ್ಧ ಆಕ್ರೋಶ

    ರುಪ್ಲಪ್ಪ ಹಂಚಿನಮನಿ ಮಾತನಾಡಿ, ‘ನೆರೆ ಹಾವಳಿಯಿಂದ ಹಾನಿಗೊಳಗಾದ ಮನೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಅದನ್ನು ಕೇಳಬೇಕೆಂದರೆ ತಹಸೀಲ್ದಾರ್ ಯಾವ ಸಭೆಗೂ ಹಾಜರಾಗುತ್ತಿಲ್ಲ. ಕಾಕೋಳ ತಾಂಡಾದ ಕಮಲವ್ವ ಲಮಾಣಿ ಎಂಬುವವರ ಮನೆ ಸಂಪೂರ್ಣ ಬಿದ್ದಿದೆ. ಆದರೆ ಅಧಿಕಾರಿಗಳು ಅದನ್ನು ‘ಸಿ’ ಕೆಟಗೆರಿಗೆ ಸೇರಿ ಕೇವಲ 50 ಸಾವಿರ ರೂ. ಪರಿಹಾರ ಬರುವಂತೆ ಮಾಡಿದ್ದಾರೆ. ಆಕೆ ಅಂಗವಿಕಲೆ, ನಡೆಯಲೂ ಬರಲ್ಲ, ಕಿವಿ ಕೇಳಲ್ಲ, ಮಾತನಾಡಲು ಬಾಯಿ ಇಲ್ಲ. ನೀವೇ ಆಕೆಯನ್ನು ನೋಡಿ’ ಎಂದು ಕಮಲವ್ವಳನ್ನು ಸಭೆಗೆ ಕರೆತಂದರು.

    ಪರಿಹಾರ ನೀಡಲು ಕಂದಾಯ ಸಿಬ್ಬಂದಿ, ಗ್ರಾಪಂ ಪಿಡಿಒ ರಾಜಕೀಯ ಮಾಡುತ್ತಿದ್ದಾರೆ. ಇದನೆಲ್ಲ ನೇರವಾಗಿ ತಹಸೀಲ್ದಾರ್ ಮುಂದೆಯೇ ಹೇಳಬೇಕು ಎಂದು ಸಭೆಗೆ ಬಂದರೆ, ಇಲ್ಲಿ ತಹಸೀಲ್ದಾರ್ ಇಲ್ಲ. ಅವರು ಬರುವವರೆಗೂ ಯಾವ ವಿಷಯ ಚರ್ಚೆ ಮಾಡಬಾರದು ಎಂದು ಪಟ್ಟುಹಿಡಿದರು.

    ಇದಕ್ಕೆ ಸ್ಪಂದಿಸಿದ ಇಒ, ತಹಸೀಲ್ದಾರರು ಹಾವೇರಿಗೆ ಹೋಗಿದ್ದಾರೆ. ತಹಸೀಲ್ದಾರ್ ಹಾಗೂ ಪಿಡಿಒಗೆ ಮಾತನಾಡಿ ಕಮಲವ್ವ ಅವರಿಗೆ ಪರಿಹಾರ ದೊರೆಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸುರ್ವೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಆಯುಷ್ಮಾನ್ ಆರೋಗ್ಯ ಕಾರ್ಡ್​ಗಳನ್ನು ಗ್ರಾಮ ಪಂಚಾಯಿತಿಗಳಲ್ಲೂ ವಿತರಿಸಲಾಗುತ್ತಿದೆ. ಆದರೆ, ಗ್ರಾಮೀಣ ಜನತೆಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ಆದ್ದರಿಂದ ಸದಸ್ಯರು, ಅಧಿಕಾರಿಗಳು ಇದನ್ನು ಜನರ ಗಮನಕ್ಕೆ ತರಬೇಕು.
    | ಎಸ್.ಎಂ. ಕಾಂಬಳೆ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts