More

    ಕಂಟೈನ್ಮೆಂಟ್ ಜೋನ್ನವರು ಹೊರಬರಬೇಡಿ

    ಕಲಬುರಗಿ: ಜಿಲ್ಲೆಯ ಕಂಟೈನ್ಮೆಂಟ್ ಜೋನ್ಗಳಿಗೆ ಯಾರೂ ಪ್ರವೇಶಿಸಬಾರದು, ಅಲ್ಲಿದ್ದವರು ಹೊರಬರದಂತೆ ನೋಡಿಕೊಳ್ಳಲು ಎಲ್ಲ ಅಧಿಕಾರಿಗಳಿಗೆ ಕಠಿಣ ಆದೇಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
    ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ತಬ್ಲಿಘಿ ಸಭೆಗೆ ಹೋಗಿದ್ದ ಮೂವರು, ಬೆಂಗಳೂರಿನಿಂದ ಬಂದ ಒಬ್ಬ ಮತ್ತು ಮಹಾರಾಷ್ಟ್ರದಿಂದ ಬಂದ ಇಬ್ಬರು ಹೀಗೆ ಆರು ಜನರ ಸಂಪರ್ಕದಿಂದ ಜಿಲ್ಲೆಯಲ್ಲಿ ಕರೊನಾ ಕೇಸ್ ಹೆಚ್ಚಾಗಿವೆ. ಇವರ ಜತೆ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಿ ಚಿಕಿತ್ಸೆಗೆ ದಾಖಲಿಸುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾಗಿ ತಿಳಿಸಿದರು.
    ಕಂಟೈನ್ಮೆಂಟ್ ಜೋನ್ನಲ್ಲಿದ್ದವರು ಅಗತ್ಯ ವಸ್ತುಗಳಿಗಾಗಿ ಸಹಾಯವಾಣಿಗೆ ಕರೆ ಮಾಡಿದರೆ ಜಿಲ್ಲಾಡಳಿತ ಪೂರೈಸಲಿದೆ. ಅನ್ಯ ರಾಜ್ಯ ಇಲ್ಲವೇ ಜಿಲ್ಲೆಗಳಿಂದ ಬಂದವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕೆಂದು ಸಲಹೆ ನೀಡಲಾಗಿದೆ. ಲಾಕ್ಡೌನ್ನಿಂದ ಕೃಷಿ, ಸಗಟು ಕಿರಾಣಿ ವ್ಯಾಪಾರ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ಮಾರಾಟ, ಕಟ್ಟಡ ನಿರ್ಮಾಣ ಕೆಲಸವನ್ನು ಸ್ಥಳೀಯ ಕಾರ್ಮಿಕರಿಂದ ಮಾಡಿಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದರು.
    ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಿ.ಜಿ. ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಎಂ.ವೈ.ಪಾಟೀಲ್, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಸುಭಾಷ ಗುತ್ತೇದಾರ್, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್, ತಿಪ್ಪಣ್ಣಪ್ಪ ಕಮಕನೂರ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಜಿಲ್ಲಾಧಿಕಾರಿ ಶರತ್ ಬಿ., ಪೊಲೀಸ್ ಆಯುಕ್ತ ಸತೀಶಕುಮಾರ್ ಎನ್., ಜಿಪಂ ಸಿಇಒ ಡಾ.ರಾಜಾ ಪಿ., ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರಬಾಬು, ಹೆಚ್ಚುವರಿ ಡಿಸಿ ರಾಚಪ್ಪ, ಡಿಎಚ್ಒ ಡಾ.ಜಬ್ಬಾರ್, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್, ಕೆಕೆಆರ್ಡಿಬಿ ಯೋಜನಾ ಅಧಿಕಾರಿ ಪ್ರವೀಣಪ್ರಿಯಾ ಡೇವಿಡ್, ಸಹಾಯಕ ಆಯುಕ್ತ ರಾಮಚಂದ್ರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಂದೇನವಾಜ್, ಬಿಸಿಎಂ ಅಧಿಕಾರಿ ರಮೇಶ ಸಂಗಾ, ಕೆಎನ್ಎನ್ಎಲ್ ಮುಖ್ಯ ಅಭಿಯಂತರ ಜಗನ್ನಾಥ ಹಾಲಂಗೆ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts