More

    ಔಷಧ ಮಾರಾಟ ಪ್ರತಿನಿಧಿಗಳ ಶೋಷಣೆ ವಿರುದ್ಧ ಧ್ವನಿ

    ದಾವಣಗೆರೆ : ದೇಶದ ಔಷಧ ತಯಾರಕ ಕಂಪನಿಗಳು ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ, ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇರುವ ಎಸ್.ಪಿ.ಇ. ಕಾಯ್ದೆಯನ್ನು ಜಾರಿಗೊಳಿಸದೆ ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
    ಜಯದೇವ ವೃತ್ತದಲ್ಲಿ ಸೇರಿ ಸರ್ಕಾರದ ನೀತಿಯ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
    ಬಹು ರಾಷ್ಟ್ರೀಯ ಕಂಪನಿಗಳು ವ್ಯಾಪಾರವನ್ನು ಪುನರ್ ರಚಿಸುವ ನೆಪದಲ್ಲಿ ಔಷಧ ಮಾರಾಟ ಪ್ರತಿನಿಧಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ ಎಂದು ದೂರಿದರು.
    ಜಗತ್ತಿನಾದ್ಯಂತ ವ್ಯಾಪಾರ ವಾಹಿವಾಟು ವಿಸ್ತರಿಸಿಕೊಂಡು ಸಾವಿರಾರು ಕೋಟಿ ರೂ. ಲಾಭ ಮಾಡುತ್ತಿದ್ದರೂ ಕೆಲವು ಕಂಪನಿಗಳು ಔಷಧ ಮಾರಾಟ ಪ್ರತಿನಿಧಿಗಳ ಭವಿಷ್ಯನಿಧಿಯ ವಂತಿಕೆಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದೆ ವಂಚನೆ ಮಾಡಿವೆ. ನ್ಯಾಯ ಕೇಳಿದ ಮಾರಾಟ ಪ್ರತಿನಿಧಿಗಳನ್ನು ದುರುದ್ದೇಶದಿಂದ ದೂರದ ರಾಜ್ಯಗಳಿಗೆ ವರ್ಗಾವಣೆ ಮಾಡಿವೆ, ಕೆಲಸದಿಂದ ತೆಗೆದುಹಾಕಿವೆ ಎಂದು ತಿಳಿಸಿದರು.
    ಕಾರ್ಮಿಕ ವಿರೋಧಿ ಕೆಟ್ಟ ತಂತ್ರಗಳನ್ನು ಅಳವಡಿಸಿಕೊಂಡು, ಔಷಧ ಮಾರಾಟ ಪ್ರತಿನಿಧಿಗಳನ್ನು ಭಯಭೀತಗೊಳಿಸುವ ಮೂಲಕ ಅವರ ಕೆಲಸದ ವಾತವರಣದಲ್ಲಿ ನರಕವನ್ನೆ ಸೃಷ್ಟಿಸಿವೆ ಎಂದು ಹೇಳಿದರು.
    ಪ್ರತಿಭಟನೆ ನಡೆಸುತ್ತಿರುವ ಮಾರಾಟ ಪ್ರತಿನಿಧಿಗಳಿಗೆ ಬೆದರಿಕೆ, ಕಿರುಕುಳ, ವರ್ಗಾವಣೆ, ವಜಾಗೊಳಿಸುವಿಕೆ, ವೇತನ, ಸಾರಿಗೆ ಹಾಗೂ ಇತರ ವೆಚ್ಚಗಳ ನಿಲುಗಡೆ ಮಾಡುವ ಮೂಲಕ ದೇಶದ ಕಾನೂನುಗಳ ಉಲ್ಲಂಘನೆ ಮಾಡಿವೆ ಎಂದು ಆರೋಪಿಸಿದರು.
    ಕೆಲವು ಕಂಪನಿಗಳ ಆಡಳಿತ ಮಂಡಳಿಯು ಕಾರ್ಮಿಕ ಸಂಘಟನೆಯ ನಾಯಕತ್ವ ವಹಿಸಿರುವ ಮಾರಾಟ ಪ್ರತಿನಿಧಿಗಳನ್ನು ಬಲಿಪಶು ಮಾಡಲು ಎಲ್ಲ ಕಾರ್ಯ ವಿಧಾನಗಳನ್ನು ಅನುಸರಿಸಿವೆ. ಏಕಪಕ್ಷೀಯ ಕೆಲಸದ ಹೊರೆಗಳನ್ನು ವಿಧಿಸಿ, ನ್ಯಾಯ ಮಂಡಳಿಗಳಲ್ಲಿ ಕಾರ್ಮಿಕ ವಿವಾದಗಳು ಬಾಕಿಯಿರುವಾಗ ತಮ್ಮ ಉತ್ಪನ್ನಗಳನ್ನು ಮತ್ತೊಂದು ಕಂಪನಿಗೆ ಮಾರಾಟ ಮಾಡಿವೆ. ಆಡಳಿತ ಮಂಡಳಿಯು  ಸಹಿ ಮಾಡಿದ ವೇತನ ಒಪ್ಪಂದದ ಪ್ರಕಾರ ಮಾರಾಟ ಪ್ರತಿನಿಧಿಗಳಿಗೆ ವೇತನವನ್ನು ನಿರಾಕರಿಸಿವೆ ಎಂದರು.
    ಅನಾಗರಿಕ ರೀತಿಯ ಕೆಲಸಗಳನ್ನ ಹೇರಿವೆ. ದೀರ್ಘ ಕಾಲದ ದ್ವಿಪಕ್ಷೀಯ ಸಂಬಂಧವನ್ನು ನಿರ್ಲಕ್ಷಿಸಿ ಎಲ್ಲ ರೀತಿಯ ಅನ್ಯಾಯಗಳನ್ನು ಮಾರಾಟ ಪ್ರತಿನಿಧಿಗಳಿಗೆ ಮಾಡುತ್ತಿವೆ. ಕೋವಿಡ್ ಸಮಯದಲ್ಲಿ ಕೆಲಸದ ದಿನಗಳ ಕಡಿತ ಮಾಡಿ, ವೇತನವಿಲ್ಲದ ರಜೆ ಎಂದು ಗುರುತಿಸಿ ನೌಕರರನ್ನು ವಜಾಗೊಳಿಸಿವೆ. ಇದರಿಂದ ದೇಶದ ಜನಕ್ಕೆ ಅಪಾಯವಿದೆ ಎನ್ನುವ ತಿಳಿವಳಿಕೆ ಕೇಂದ್ರ ಸರ್ಕಾರಕ್ಕೆ ಇದ್ದರೂ ಮೂಕ ಪ್ರೇಕ್ಷಕನಂತಿದೆ ಎಂದು ಹೇಳಿದರು.
    ಸಂಘಟನೆಯ ಮುಖಂಡರಾದ ಕೆ.ಎಚ್. ಆನಂದರಾಜು, ಎ. ವೆಂಕಟೇಶ್, ಪಿ.ಜೆ. ಮಹಾವೀರ್, ಪ್ರದೀಪ್, ಶ್ರೀಧರ್, ರುದ್ರೇಶ್, ವಿಠಲ್, ಶಶಿಕುಮಾರ್ ಆಚಾರ್, ಶ್ರೀಧರಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts