More

    ಒಲ್ಲದ ಮನಸ್ಸಿನಿಂದ ಗುಡಿತುಂಬಿದ ಬರಗೇರಿ, ತಿಪ್ಪಮ್ಮ

    ಚಿತ್ರದುರ್ಗ: ಕೋಟೆನಗರಿಯ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಗಳಾದ ಬರಗೇರಮ್ಮ ಮತ್ತು ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯರಿಬ್ಬರು ಸಾವಿರಾರು ಭಕ್ತರ ಮಧ್ಯೆ ತಮ್ಮ ದೇಗುಲಗಳಲ್ಲಿ ಗುರುವಾರ ಗುಡಿತುಂಬುವ ಮೂಲಕ ಜಾತ್ರೆ ಸಂಪನ್ನಗೊಂಡಿತು.

    ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ದೇವಿಯನ್ನು ಬುರುಜನಹಟ್ಟಿಯ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವಿಯನ್ನು ಉಜ್ಜಯನಿ ಮಠದ ರಸ್ತೆಯ ಪಾದದ ಗುಡಿಯತ್ತ ಅರ್ಚಕರು ಕರೆತಂದರು.

    ನಾಲ್ಕೆಜ್ಜೆ ಮುಂದಕ್ಕೆ, ಎಂಟ್ಹೆಜ್ಜೆ ಹಿಂದಕ್ಕೆ ಇಡುತ್ತ ಇನ್ನೇನೂ ದೇಗುಲ ಹತ್ತಿರ ಬಂದತ್ತೆಲ್ಲಾ ದೇವಿಯರಿಬ್ಬರೂ ಹಿಂದೆ ಸರಿಯುತ್ತಿದ್ದರು. ನಗರ ಸೇರಿ ಹತ್ತಾರು ಹಳ್ಳಿಗಳಲ್ಲಿ ಎಂಟತ್ತು ದಿನ ಪೂಜೆ ಸ್ವೀಕರಿಸಿ, ಭಕ್ತರ ಪ್ರೀತಿಗೆ ಮನಸೋತ ಶಕ್ತಿದೇವತೆಗಳು ಒಲ್ಲದ ಮನಸ್ಸಿನಿಂದಲೇ ಒಂದೂವರೆ ತಾಸಿಗೂ ಅಧಿಕ ಸಮಯ ಸತಾಯಿಸಿ ಕೊನೆಗೂ ಗುಡಿತುಂಬಿದರು. ಈ ದೃಶ್ಯ ಕಣ್ತುಂಬಿಕೊಳ್ಳಲು ಭಕ್ತರ ದಂಡೆ ಹರಿದು ಬಂದಿತು.

    ಇದಕ್ಕೂ ಮುನ್ನ ಬರಗೇರಮ್ಮ ದೇವಿಗೆ ಬುಧವಾರ ಮುಂಜಾನೆಯಿಂದ ಇಡೀ ರಾತ್ರಿ ಸುಣ್ಣಗಾರಹಟ್ಟಿ, ಕೋಳಿ ಬುರುಜನಹಟ್ಟಿ, ಉಚ್ಚಂಗಿಯಲ್ಲಮ್ಮ ದೇಗುಲ, ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಹೊಳಲ್ಕೆರೆ ರಸ್ತೆ ಸೇರಿ ಸುತ್ತಮುತ್ತ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ ನೆರವೇರಿತು. ಗೌರಸಂದ್ರ ಮಾರಮ್ಮ ದೇಗುಲದಲ್ಲಿ ಮಹಾಮಂಗಳಾರತಿಯಾದ ಬಳಿಕ ಸಿಹಿನೀರು ಹೊಂಡದಲ್ಲಿ ಶಾಸ್ತ್ರ ಸಂಪ್ರದಾಯದಂತೆ ಗಂಗಾಪೂಜೆಗೆ ಕರೆತರಲಾಯಿತು.

    ಅಲ್ಲಿಂದ ಪಾದದ ಗುಡಿಯವರೆಗೂ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಅರ್ಚಕರು ಉರುಮೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಉರುಮೆ ಕಲಾವಿದರು ಜಾನಪದ ಶೈಲಿಯಲ್ಲಿ ದೇವಿಯ ಹೆಸರುಗಳನ್ನು ಪಠಿಸುತ್ತ ಕೊಂಡಾಡಿ ಗುಡಿತುಂಬಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

    ತಿಪ್ಪಿನಘಟ್ಟಮ್ಮ ದೇವಿಗೆ ಸಂತೆಬಾಗಿಲು, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ನೆಹರು ನಗರದ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಗಂಗಾಪೂಜೆ ಬಳಿಕ ಊರ ಒಳಗಿನ ದೇಗುಲದಲ್ಲಿ ಗುಡಿತುಂಬುವ ಕಾರ್ಯ ನೆರವೇರಿತು.

    ಕಂಕಣ ವಿಸರ್ಜನೆ ಇಂದು: ಮೇ. 10ರ ಶುಕ್ರವಾರದಂದು ಜೋಗೂಟದೊಂದಿಗೆ ಕಂಕಣ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ 15 ದಿನ ನಡೆದ ಅಕ್ಕ-ತಂಗಿಯರ ಜಾತ್ರೆ ಸಂಪನ್ನಗೊಳ್ಳಲಿದೆ.

    ಕಾಟಲಿಂಗೇಶ್ವರ ಸನ್ನಿಧಿಯಲ್ಲಿ ಪೂಜೆ: ಮಂಗಳವಾರ ಐತಿಹಾಸಿಕ ಭೇಟಿ ಸಂಪನ್ನಗೊಂಡ ಬಳಿಕ ಅಕ್ಕ-ತಂಗಿಯರಿಬ್ಬರು ದೊಡ್ಡಪೇಟೆ ಹಿಂಭಾಗದ ಕೆಂಚನಾರಹಟ್ಟಿಯಲ್ಲಿನ ಕಾಟಲಿಂಗೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರತ್ಯೇಕವಾಗಿ ಪೂಜೆ ಸ್ವೀಕರಿಸಿದರು. ಇದೇ ವೇಳೆ ಮಡಿಲಕ್ಕಿ ಸಮರ್ಪಣೆಯಾಯಿತು. ಅಣ್ಣನ ಗುಡಿಯಲ್ಲಿ ವೈಭವದ ಸ್ವಾಗತ ದೊರೆಯಿತು. ಭಕ್ತರು ಕುಣಿದು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts