More

    ಒಮ್ಮೆ ಮಾತ್ರ ಅನ್ಯ ಜಿಲ್ಲೆ ಕಾರ್ವಿುಕರ ಕರೆತರಬಹುದು

    ಧಾರವಾಡ: ಲಾಕ್​ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಆಗಿರುವುದರಿಂದ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಟೈನ್​ವೆುಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಉಳಿದೆಡೆ ರಸ್ತೆ, ಕಟ್ಟಡ ನಿರ್ವಣ, ಜಲ್ಲಿಕಲ್ಲು, ಕ್ರಷರ್ ಘಟಕಗಳ ಕಾರ್ಯಾರಂಭಕ್ಕೆ ಅವಕಾಶವಿದೆ. ಹಳ್ಳಿಗಳಲ್ಲಿ ಕೈಗಾರಿಕೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪ್ರಾರಂಭಿಸಬಹುದು. ಜಿಲ್ಲಾಡಳಿತ ಈ ಚಟುವಟಿಕೆಗೆ ಆನ್​ಲೈನ್​ನಲ್ಲಿ ಸರಳವಾಗಿ ಅನುಮತಿ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣದ ಲಾಕ್​ಡೌನ್-2 ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಸೇರಿ ರಸ್ತೆ, ಕಟ್ಟಡಗಳನ್ನು ನಿರ್ವಿುಸುವ ಸಂಬಂಧಿತ ಎಲ್ಲ ಇಲಾಖೆಗಳು, ಅರೆ ಸರ್ಕಾರಿ ಸಂಸ್ಥೆಗಳು ಆನ್​ಲೈನ್ ಮೂಲಕ ಕಾಮಗಾರಿ ವಿವರಗಳನ್ನು ಸಲ್ಲಿಸಿ ಜಿಲ್ಲಾಡಳಿತದ ಅನುಮತಿ ಪಡೆಯಬೇಕು ಎಂದರು.

    ಬೇರೆ ಜಿಲ್ಲೆಗಳಿಂದ ಕಾರ್ವಿುಕರನ್ನು ಒಮ್ಮೆ ಕರೆತಂದು ಕಾಮಗಾರಿ ಸ್ಥಳದಲ್ಲೇ ಊಟ, ವಸತಿ ಸೌಲಭ್ಯವುಳ್ಳ ಕ್ಯಾಂಪ್ ಮಾಡಿಸಬೇಕು. ಗುತ್ತಿಗೆದಾರರಿಗೆ ಈ ಷರತ್ತು ತಿಳಿಸಬೇಕು. ಹು-ಧಾ ಹೊರವಲಯದ ಗಬ್ಬೂರ ಕ್ರಾಸ್, ಬೈಪಾಸ್ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳಬೇಕು. ರಸ್ತೆ, ಕಟ್ಟಡ ಕಾಮಗಾರಿ ಕೈಗೊಳ್ಳಲು ಕಬ್ಬಿಣ, ಸಿಮೆಂಟ್, ಉಸುಕು ಸಾಗಣೆಗೆ ಪೊಲೀಸರು ಅಡ್ಡಿಪಡಿಸಬಾರದು. ಹಾಲು, ಮಾಂಸ ಮಾರಾಟಗಾರರು ಪಾಸ್ ಹೊಂದಿದ್ದರೂ ತಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಸರ್ಕಾರಿ ನೌಕರರು, ಮಾಧ್ಯಮದವರಿಗೆ ಗುರುತಿನ ಚೀಟಿ ನೋಡಿ ಕರ್ತವ್ಯಕ್ಕೆ ಅನುವು ಮಾಡಿಕೊಡಬೇಕು. ಹಲ್ಲೆ ಘಟನೆಗಳು ಪುನರಾವರ್ತನೆಯಾಗಬಾರದು. ಕಂದಾಯ, ಪೊಲೀಸ್, ಆರೋಗ್ಯ, ಮಹಾನಗರ ಪಾಲಿಕೆ ಸೇರಿ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

    ಲಾಕ್​ಡೌನ್ ಅವಧಿಯಲ್ಲಿ ಅವಳಿ ನಗರದ ಜನರ ಮನೆಗಳ ಬಳಿ ಅಗತ್ಯ ವಸ್ತುಗಳ ಪೂರೈಕೆ ಆಗುತ್ತಿರುವ ಕುರಿತು ಮಾಹಿತಿ ಪಡೆದ ಸಚಿವರು, ರಂಜಾನ್ ಉಪವಾಸ ವ್ರತ ಮಾಡುವವರ ಮನೆ ಬಳಿ ಆಹಾರ, ಇತರ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಮಸೀದಿಗಳಲ್ಲಿ ಧರ್ಮಗುರುಗಳನ್ನು ಬಿಟ್ಟು ಹೆಚ್ಚು ಜನ ಸೇರಬಾರದು, ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಆಯಾ ಮಸೀದಿಗಳ ಜಮಾತ್ ಸಮಿತಿಯವರು ಸದಸ್ಯರಿಗೆ ತಿಳಿವಳಿಕೆ ನೀಡಿ ಮನೆಗಳಲ್ಲೇ ಪ್ರಾರ್ಥನೆ ಮಾಡಲು ಜಾಗೃತಿ ಮೂಡಿಸಬೇಕು ಎಂದರು.

    ಸರ್ಕಾರಿ ವೈದ್ಯರು, ನರ್ಸ್​ಗಳು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ವಿುಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆಯುಷ್ ವೈದ್ಯರೂ ಕ್ವಾರಂಟೈನ್​ದಲ್ಲಿರುವವರಿಗೆ ಸೇವೆ ಸಲ್ಲಿಸಿದ್ದಾರೆ. ಖಾಸಗಿ ವೈದ್ಯರು, ಆಸ್ಪತ್ರೆಗಳು ನಿರೀಕ್ಷಿತ ಪ್ರಮಾಣದಲ್ಲಿ ಸೇವೆಗೆ ಲಭ್ಯವಾಗುತ್ತಿಲ್ಲ. ಈ ವೈದ್ಯರು ವೃತ್ತಿ ಸಂಹಿತೆ ಎತ್ತಿ ಹಿಡಿಯಲು ಸೇವೆಗೆ ಮುಂದಾಗಬೇಕು. ಕೋವಿಡ್ ಹೊರತುಪಡಿಸಿ ಉಳಿದ ಸಾಮಾನ್ಯ ಕಾಯಿಲೆಗಳಿಗೂ ಖಾಸಗಿ ವೈದ್ಯರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕೆಪಿಎಂಇ ನೋಂದಾಯಿತ ವೈದ್ಯರನ್ನು ಮತ್ತೊಮ್ಮೆ ಸಭೆ ಕರೆದು ಸ್ಪಷ್ಟ, ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.

    ಹುಬ್ಬಳ್ಳಿಯ ಕಿಮ್್ಸ, ಧಾರವಾಡದ ಡಿಮ್ಹಾನ್ಸ್, ಬೆಳಗಾವಿ, ಗದಗ ಜಿಲ್ಲೆಗಳಲ್ಲೂ ಕೋವಿಡ್-19 ತಪಾಸಣೆ ಪ್ರಯೋಗಾಲಯಗಳು ಆರಂಭವಾಗಿದ್ದರಿಂದ ಫಲಿತಾಂಶಗಳು ತ್ವರಿತವಾಗಿ ಲಭ್ಯವಾಗಲಿವೆ. ಕಿಮ್್ಸ, ರೈಲ್ವೆ ಆಸ್ಪತ್ರೆ, ಡಿಮ್ಹಾನ್ಸ್, ಎಸ್​ಡಿಎಂ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆ, ಪರೀಕ್ಷೆಗೆ ಅಗತ್ಯ ಆರೋಗ್ಯ ರಕ್ಷಣಾ ಸಾಮಾಗ್ರಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಚೆಕ್​ಪೋಸ್ಟ್ ಸಿಬ್ಬಂದಿಗೆ ಸಮರ್ಪಕವಾಗಿ ಮಾಸ್ಕ್, ಸ್ಯಾನಿಟೈಸರ್ ಪೂರೈಸಬೇಕು. ರಂಜಾನ್ ಅಂಗವಾಗಿ ಮಾಂಸ ಮಾರಾಟಗಾರರನ್ನು ವಾರ್ಡ್​ವಾರು ವಿಂಗಡಿಸಿ ಮಾರಾಟ ಘಟಕಗಳನ್ನು ವಿಕೇಂದ್ರೀಕರಣ ಮಾಡಿ, ಸಾಮಾಜಿಕ ಅಂತರದಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದರು.

    ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಗದಗ, ಬೆಳಗಾವಿ ಜಿಲ್ಲೆಗಳು ಹೊಂದಿಕೊಂಡಿವೆ. ಅಲ್ಲಿನ ಒಳ ಮಾರ್ಗಗಳಿಂದ ಕೆಲವರು ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. ಪರಸ್ಥಳದ ಜನರು ತಮ್ಮ ಊರಿಗೆ ಬಂದರೆ ಮಾಹಿತಿ ನೀಡಲು ಗ್ರಾಮಸ್ಥರಿಗೆ ತಿಳಿಸಲಾಗಿದೆ. ಆದರೂ ಅನ್ಯ ಜಿಲ್ಲೆಯವರ ಪ್ರವೇಶವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಬೇಕು ಎಂದರು. ಶಾಸಕರಾದ ಸಿ.ಎಂ. ನಿಂಬಣ್ಣವರ, ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಶ್ರೀನಿವಾಸ ಮಾನೆ ಮಾತನಾಡಿದರು.

    ಜಿಲ್ಲಾಧಿಕಾರಿ ದೀಪಾ ಚೋಳನ್, ಶಾಸಕರಾದ ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಇತರರಿದ್ದರು.

    ಭಾರತೀಯ ಹತ್ತಿ ನಿಗಮ ನಿಯಮಾನುಸಾರ ಕೂಡಲೆ ಹತ್ತಿ ಖರೀದಿ ಪ್ರಾರಂಭಿಸಿ ರೈತರಿಗೆ ಮಾಹಿತಿ ನೀಡಬೇಕು. ಖರೀದಿ ಸ್ಥಳದಲ್ಲಿ ಪರಸ್ಪರರ ಮಧ್ಯೆ ಅಂತರ ಇಟ್ಟುಕೊಳ್ಳುವುದರ ಬಗ್ಗೆ ಗಮನ ನೀಡಬೇಕು.
    | ಜಗದೀಶ ಶೆಟ್ಟರ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts