More

    ಒಮಿಕ್ರಾನ್ ಸೋಂಕು ತಡೆಯಲು ನಿಯಮ ಕಟ್ಟುನಿಟ್ಟು; ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ನೆಗಟಿವ್ ವರದಿ ಕಡ್ಡಾಯ..

    ನವದೆಹಲಿ: ಒಮಿಕ್ರಾನ್ ಪ್ರಭೇದ ಪತ್ತೆಯಾಗಿರುವ ದೇಶಗಳಿಂದ ಬರುವ ವಿಮಾನ ಪ್ರಯಾಣಿಕರಿಗೆ ಭಾರತ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದೆ. ಸ್ವಯಂ-ಘೋಷಣಾ ಪತ್ರ ಹಾಗೂ ನೆಗಟಿವ್ ಆರ್​ಟಿ-ಪಿಸಿಆರ್ ಟೆಸ್ಟ್ ವರದಿ ಕಡ್ಡಾಯ. ಇದನ್ನು ಪಾಲಿಸದಿದ್ದರೆ ಪ್ರವೇಶ ಅಸಾಧ್ಯ ಎಂದು ಸರ್ಕಾರ ಹೇಳಿದೆ. ದಕ್ಷಿಣ ಆಫ್ರಿಕಾದಂಥ ರಿಸ್ಕ್ ದೇಶಗಳಿಂದ ಬರುವವರು ಟೆಸ್ಟ್​ಗೆ ಸ್ಯಾಂಪಲ್ ನೀಡಬೇಕು ಎಂದೂ ಸೂಚಿಸಿದೆ. ಪಾಸಿಟಿವ್​ಬಂದವರ ಸ್ಯಾಂಪಲ್​ಅನ್ನು ಜಿನೋಮ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗುತ್ತದೆ. ಒಮಿಕ್ರಾನ್ ದೃಢಪಟ್ಟರೆ ಕಟ್ಟುನಿಟ್ಟಿನ ಐಸೋಲೇಷನ್ ನಿಯಮ ಅನ್ವಯ. 7 ದಿನ ಹೋಮ್ ಕ್ವಾರಂಟೈನ್. ಎಂಟನೇ ದಿನ ಮತ್ತೆ ಪರೀಕ್ಷೆ ಮಾಡಿಸಬೇಕು. ಬಂದವರಲ್ಲಿ ಪಾಸಿಟಿವ್ ಇಲ್ಲದಿದ್ದರೂ ಸ್ವಯಂಪ್ರೇರಿತರಾಗಿ ಮನೆಯಲ್ಲೇ ಇದ್ದು ನಿಯಮಗಳನ್ನು ಪಾಲಿಸಬೇಕು ಎಂದು ಹೊಸ ನಿಯಮಾವಳಿಯಲ್ಲಿ ತಿಳಿಸಿದೆ.

    ಒಮಿಕ್ರಾನ್​ಗೆ ಕೋವಿಶೀಲ್ಡ್, ಕೊವ್ಯಾಕ್ಸಿನ್ ರಾಮಬಾಣ?: ಜಗತ್ತಿನಲ್ಲಿ ತಲ್ಲಣದ ಅಲೆ ಎಬ್ಬಿಸಿರುವ ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ ವಿರುದ್ಧ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ರಕ್ಷಣೆ ನೀಡೀತೇ ಎಂಬ ಪ್ರಶ್ನೆಗೆ ತಜ್ಞರ ಅಭಿಪ್ರಾಯ ಹೌದು ಎಂದಾಗಿದೆ. ಕೋವಿಡ್-19ರ ಗಂಭೀರ ಕಾಯಿಲೆ ವಿರುದ್ಧ ಈ ಎರಡು ಲಸಿಕೆಗಳು ರಕ್ಷಣೆ ನೀಡುತ್ತವೆ ಎಂಬ ಆಶಾವಾದವಿದೆ ಎಂದು ಹಲವು ತಜ್ಞರು ಹೇಳಿದ್ದಾರೆ.

    ಚಾಲ್ತಿಯಲ್ಲಿರುವ ಲಸಿಕೆಗಳೇ ಹೊಸ ಪ್ರಭೇದದ ವಿರುದ್ಧ ಪರಿಣಾಮಕಾರಿ ರಕ್ಷಣೆ ನೀಡಬಲ್ಲವು. ಅದನ್ನು ಸಾಬೀತುಪಡಿಸಲು ಇನ್ನಷ್ಟು ಸಂಶೋಧನೆಗಳು ಅಗತ್ಯ ಎಂದು ಬ್ರಿಟಷ್ ವಿಜ್ಞಾನಿ, ಪ್ರೊಫೆಸರ್ ಆಂಡ್ರ್ಯೂ ಪೊಲ್ಲಾರ್ಡ್ ಹೇಳಿದ್ದಾರೆ. ಪೊಲ್ಲಾರ್ಡ್ ಆಕ್ಸ್ ಫರ್ಡ್ ವ್ಯಾಕ್ಸಿನ್ ಗ್ರೂಪ್​ನ ನಿರ್ದೇಶಕರಾಗಿದ್ದಾರೆ. ಹೊಸ ಪ್ರಭೇದವು ಹಾಲಿ ಲಸಿಕೆಗಳ ರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುತ್ತವೆಯೇ ಎನ್ನುವುದನ್ನು ಇಷ್ಟು ಬೇಗ ಹೇಳಲಾಗದು ಎಂದಿದ್ದಾರೆ.

    ಹಲವು ದೇಶಗಳಲ್ಲಿ ಕಠಿಣ ನಿಯಮ: ಕರೊನಾ ವೈರಾಣುವಿನ ಹೊಸ ಅವತಾರದ ಹಿನ್ನೆಲೆಯಲ್ಲಿ ಪ್ರಕಟಿಸಲಾಗಿರುವ ನೂತನ ನಿಯಂತ್ರಣ ನಿಯಮಗಳನ್ನು ಮಂಗಳವಾರದಿಂದ ಜಾರಿಗೊಳಿಸಲು ಬ್ರಿಟನ್ ನಿರ್ಧರಿಸಿದೆ. ಬ್ರಿಟನ್​ಗೆ ಬರುವ ಎಲ್ಲ ಪ್ರಯಾಣಿಕರು ಪಿಸಿಆರ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ. ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರ ಮೇಲೆ ಜಪಾನ್ ನಿರ್ಬಂಧ ವಿಧಿಸಿದೆ. ಇಸ್ರೇಲ್ ಮತ್ತು ಮೊರಾಕ್ಕೊ ಕೂಡ ಎಲ್ಲ ವಿದೇಶಿ ಪ್ರಯಾಣಿಕರ ಮೇಲೆ 14 ದಿನಗಳ ನಿರ್ಬಂಧ ಪ್ರಕಟಿಸಿದೆ. ತನ್ನ ಗಡಿಗಳನ್ನು ಮುಕ್ತಗೊಳಿಸುವ ಯೋಜನೆಯನ್ನು ಆಸ್ಟ್ರೇಲಿಯಾ ಮುಂದೂಡಿದೆ. ಐರೋಪ್ಯ ಒಕ್ಕೂಟ, ಅಮೆರಿಕ, ಬ್ರಿಟನ್ ಮತ್ತು ಕೆನಡಾ ದೇಶಗಳು ದಕ್ಷಿಣ ಆಫ್ರಿಕಾ ಸಹಿತ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಿಂದ ವಿಮಾನಗಳು ಬರುವುದನ್ನು ನಿಷೇಧಿಸಿವೆ.

    ವೈರಸ್​ನ ಹೊಸ ಪ್ರಭೇದ ದಿಂದ ಉದ್ಭವಿಸಿರುವ ವಿದ್ಯ ಮಾನದ ಮೇಲೆ ನಿಗಾ ಇಡಲಾಗಿದ್ದು ಅಂತಾರಾಷ್ಟ್ರೀಯ ವಿಮಾನ ಸಂಚಾರ ಡಿ. 15ರಿಂದ ಪುನರಾರಂಭಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.

    | ಜ್ಯೋತಿರಾದಿತ್ಯ ಸಿಂಧಿಯಾ ನಾಗರಿಕ ವಿಮಾನಯಾನ ಸಚಿವ (ರಾಜ್ಯಸಭೆಗೆ ಮಾಹಿತಿ)

    ಒಮಿಕ್ರಾನ್ ಸೋಂಕು ತಡೆಯಲು ನಿಯಮ ಕಟ್ಟುನಿಟ್ಟು; ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ನೆಗಟಿವ್ ವರದಿ ಕಡ್ಡಾಯ..‘ಒಮಿಕ್ರಾನ್’ ಓಕೆ: ‘ನೂ’, ‘ಕ್ಸಿ’ ಬಿಟ್ಟಿದ್ದೇಕೆ?: ಕರೊನಾ ವೈರಸ್​ನ ಹೊಸ ಪ್ರಭೇದಗಳಿಗೆ ಗ್ರೀಕ್ ವರ್ಣಮಾಲೆಯ ಅಕ್ಷರಗಳಿಂದ ಶುರುವಾಗುವ ಹೆಸರನ್ನು ಡಬ್ಲ್ಯುಎಚ್​ಒ ನಾಮಕರಣ ಮಾಡುತ್ತಿದೆ. ಇದಕ್ಕೂ ಮುನ್ನ 12 ಪ್ರಭೇದಗಳಿಗೆ ಅದು ಒಂದರ ನಂತರ ಒಂದರಂತೆ ಹೆಸರುಗಳನ್ನಿಟ್ಟಿದೆ. ಆದರೆ ‘ಒಮಿಕ್ರಾನ್’ ‘ಒ’ 15ನೇ ಅಕ್ಷರವಾಗಿದ್ದು 13ನೇ ಅಕ್ಷರ ‘ನೂ’ ಹಾಗೂ 14ನೇ ಅಕ್ಷರ ‘ಕ್ಸಿ’ ಗಳನ್ನು ಬಿಟ್ಟಿದ್ದೇಕೆ ಎನ್ನುವ ಪ್ರಶ್ನೆ ಎದುರಾಗಿದೆ. ‘ನೂ’ ಅನ್ನು ‘ನ್ಯೂ’ ಪದವೆಂದು ಗೊಂದಲ ಮಾಡಿಕೊಳ್ಳಬಹುದು. ‘ಕ್ಸಿ’ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರ ಹೆಸರಿನ ಭಾಗವಾಗಿರುವುದರಿಂದ ಅದನ್ನು ಬಳಸಿಲ್ಲ ಎನ್ನಲಾಗಿದೆ.

    2 ವಾರದಲ್ಲಿ ಬೂಸ್ಟರ್ ಡೋಸ್ ನೀತಿ: ಎರಡೂ ಡೋಸ್ ಪಡೆದವರಿಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಇನ್ನೆರಡು ವಾರದಲ್ಲಿ ನೀತಿ ರೂಪಿಸಲಾಗುವುದೆಂದು ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಎನ್.ಕೆ. ಅರೋರಾ ತಿಳಿಸಿದ್ದಾರೆ. 18 ವರ್ಷಕ್ಕಿಂತ ಕೆಳಗಿನ 44 ಕೋಟಿ ಮಕ್ಕಳಿಗೆ ವ್ಯಾಕ್ಸಿನ್ ಹಾಕುವ ವಿಸõತ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ಲಸಿಕೆಯಲ್ಲಿ ಅನ್ಯ-ವ್ಯಾಧಿಗಳಿರುವ ಮಕ್ಕಳಿಗೆ ಆದ್ಯತೆ ನೀಡುವ ಬಗ್ಗೆಯೂ ಅರೋರಾ ಸುಳಿವು ನೀಡಿದ್ದಾರೆ.

    ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಆಗಮಿಸಿದ್ದ ಒಬ್ಬ ನೇವಿ ಎಂಜಿನಿಯರ್​ ಕರೊನಾ ಸೋಂಕು ಹೊಂದಿರುವುದು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾ, ದುಬೈ ಮತ್ತು ದೆಹಲಿ ಪ್ರಯಾಣದಿಂದ ಮರಳಿದ್ದ 32 ವರ್ಷದ ಈ ವ್ಯಕ್ತಿ ನವೆಂಬರ್ 24ರಂದು ಥಾಣೆ ಜಿಲ್ಲೆಯ ದೊಂಬಿವಿಲಿಗೆ ಆಗಮಿಸಿದ್ದರು. ಅವರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಜಿನೋಮ್ ಸೀಕ್ವೆನ್ಸಿಂಗ್​ಗಾಗಿ ಸ್ಯಾಂಪಲ್​ಅನ್ನು ಕಳಿಸಲಾಗಿದೆ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts