More

    ಒಂದೇ ದಿನ 35 ಜನರಲ್ಲಿ ಕರೊನಾ ಪತ್ತೆ!

    ಧಾರವಾಡ: ಜಿಲ್ಲೆಯಲ್ಲಿ ಮಹಾಮಾರಿ ಕರೊನಾ ಹಾವಳಿ ಮುಂದುವರಿದಿದೆ. ಬುಧವಾರ ಒಂದೇ ದಿನ 35 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಪ್ರಕರಣಗಳ ಸಂಖ್ಯೆ 380ಕ್ಕೆ ಏರಿಕೆಯಾಗಿದೆ. ಇದುವರೆಗೆ 186 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 186 ಪ್ರಕರಣಗಳು ಸಕ್ರಿಯವಾಗಿದ್ದು, ಇದುವರೆಗೆ ಕೋವಿಡ್​ನಿಂದ 8 ಜನ ಮೃತಪಟ್ಟಿದ್ದಾರೆ.

    ಒಂದೇ ದಿನ 35 ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು. ತಾಲೂಕಿನ ಲಕಮಾಪುರ ಗ್ರಾಮದ 5 ವರ್ಷದ ಬಾಲಕಿಗೆ ಕರೊನಾ ದೃಢಪಟ್ಟಿದೆ. ಈಕೆಗೆ ಅದೇ ಗ್ರಾಮದ 62 ವರ್ಷದ ಮಹಿಳೆಯ ಸಂಪರ್ಕದಿಂದ ಸೋಂಕು ತಗುಲಿದೆ.

    ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ರಸ್ತೆ ವಿಜಯನಗರದ 50 ವರ್ಷದ ಪುರುಷನಿಗೆ ಬಳ್ಳಾರಿಯ ವ್ಯಕ್ತಿ ಸಂಪರ್ಕ, ಧಾರವಾಡ ಆದಿತ್ಯವಾರಪೇಟೆ ಮೆಣಸಿನಕಾಯಿ ಓಣಿಯ 47, ಮಹಿಳೆ (ಐಎಲ್​ಐ ಪ್ರಕರಣ), ಹುಬ್ಬಳ್ಳಿಯ ಜೆ.ಸಿ. ನಗರದ ಮಹಿಳಾ ಕಾಲೇಜು ಹತ್ತಿರದ 62 ವರ್ಷ ಪುರುಷನ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹುಬ್ಬಳ್ಳಿ ಕೋಟಿಲಿಂಗನಗರದ 45 ವರ್ಷದ ಪುರುಷ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ. ಹುಬ್ಬಳ್ಳಿ ದಾಜಿಬಾನಪೇಟ ಸಾಲ ಓಣಿಯ 26 ವರ್ಷದ ಮಹಿಳೆ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ಕುಂದಗೋಳ ತಾಲೂಕಿನ ಹರ್ಲಾಪುರದ 38 ವರ್ಷದ ಮಹಿಳೆ ಹಾಗೂ ಕುಂದಗೋಳದ ಅಂಬೇಡ್ಕರ್​ನಗರದ 30 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ನವನಗರದ 28 ವರ್ಷದ ಮಹಿಳೆಗೆ ಹುಬ್ಬಳ್ಳಿ ನೂರಾನಿ ಮಾರ್ಕೆಟ್​ನ ವ್ಯಕ್ತಿಯ ಸಂಪರ್ಕದಿಂದ ಕರೊನಾ ಬಂದಿದೆ. ಹುಬ್ಬಳ್ಳಿ ಕೇಶ್ವಾಪುರದ 23, 40 ವರ್ಷದ ಮಹಿಳೆ ಹಾಗೂ 52 ವರ್ಷದ ಪುರುಷನಿಗೆ ಕೇಶ್ವಾಪುರದ ಪುರುಷನ ಸಂಪರ್ಕವಿದೆ. ಹುಬ್ಬಳ್ಳಿ ಬಾಸೆಲ್ ಮಿಷನ್ ಕಾಂಪೌಂಡ್​ನ 3 ವರ್ಷದ ಬಾಲಕನಿಗೆ ಅದೇ ಪ್ರದೇಶದ 25 ವರ್ಷದ ಮಹಿಳೆಯ ಸಂಪರ್ಕದಿಂದ ಬಂದಿದೆ. ನವಲಗುಂದದ 21 ವರ್ಷ ಪುರುಷನ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ 27 ವರ್ಷದ ಪುರುಷ ಹಾಗೂ ಹಳೇಹುಬ್ಬಳ್ಳಿ ನೇಕಾರನಗರದ 30 ವರ್ಷದ ಪುರುಷ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಲ್​ಐ) ಬಳಲುತ್ತಿದ್ದರು. ಹುಬ್ಬಳ್ಳಿ ಮೂರುಸಾವಿರಮಠ ಹತ್ತಿರದ ನಿವಾಸಿಗಳಾದ 50 ಹಾಗೂ 33 ವರ್ಷದ ಮಹಿಳೆಯರಿಗೆ ಅದೇ ಪ್ರದೇಶದ ವ್ಯಕ್ತಿಯ ಸಂಪರ್ಕವಿದೆ. ನವಲೂರ ಜನತಾ ಪ್ಲಾಟ್​ನ 7 ವರ್ಷದ ಬಾಲಕಿ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದಳು.

    ಕುಸುಗಲ್ ಗ್ರಾಮದ ದೊಡ್ಡ ಓಣಿಯ 30 ವರ್ಷದ ಮಹಿಳೆ, ಹುಬ್ಬಳ್ಳಿ ವಿದ್ಯಾನಗರ ಅಮೃತ ಟಾಕೀಸ್ ಹಿಂಭಾಗದ 40 ವರ್ಷದ ಮಹಿಳೆಗೆ, ಮಿಷನ್ ಕಾಂಪೌಂಡ್​ನ 3 ವರ್ಷದ ಬಾಲಕನಿಗೆ ಅದೇ ಪ್ರದೇಶದ 25 ವರ್ಷದ ಮಹಿಳೆಯ ಸಂಪರ್ಕವಿದೆ. ಹುಬ್ಬಳ್ಳಿ ಕೊಪ್ಪಿಕರ ರಸ್ತೆಯ ಗೌಳಿಗಲ್ಲಿಯ 38 ವರ್ಷದ ಪುರುಷ, ಹುಬ್ಬಳ್ಳಿ ಕೇಶ್ವಾಪುರ ನಾಕೋಡ ಪಾರ್ಶ್ವನಾಥ ಜೈನಮಂದಿರ ಹತ್ತಿರದ 48 ವರ್ಷದ ಮಹಿಳೆ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಕಲಘಟಗಿ ಜಂಜರಬೈಲ್ 40 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹುಬ್ಬಳ್ಳಿ ಬಾಸೆಲ್ ಮಿಷನ್ ಕಾಂಪೌಂಡ್​ನ 62 ವರ್ಷದ ಮಹಿಳೆ, 30 ವರ್ಷದ ಪುರುಷನಿಗೆ ಅದೇ ಪ್ರದೇಶದ 25 ವರ್ಷದ ಮಹಿಳೆಯ ಸಂಪರ್ಕವಿದೆ. ನವನಗರದ 34 ವರ್ಷದ ಪುರುಷನಿಗೆ ಗೋಕುಲ ರಸ್ತೆ ಸನ್ಮಾರ್ಗ ನಗರದ ಪುರುಷನ ಸಂಪರ್ಕ, ಹುಬ್ಬಳ್ಳಿ ಘೊಡ್ಕೆ ಓಣಿಯ 45 ವರ್ಷದ ಪುರುಷ ಹಾಗೂ ನವಲಗುಂದ ಮಾಡೆಲ್ ಹೈಸ್ಕೂಲ್ ಹತ್ತಿರದ 36 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ನೂಲ್ವಿ ಆಶ್ರಯ ಪ್ಲಾಟ್​ನ 42 ವರ್ಷದ ಪುರುಷ ಹಾಗೂ 32 ವರ್ಷದ ಮಹಿಳೆಗೆ ಅದೇ ಗ್ರಾಮದ 35 ವರ್ಷದ ಮಹಿಳೆಯ ಸಂಪರ್ಕ ಪತ್ತೆಯಾಗಿದೆ. ಹುಬ್ಬಳ್ಳಿ ಕೌಲಪೇಟೆಯ 28 ವರ್ಷದ ಪುರುಷ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ 37 ವರ್ಷದ ಪುರುಷ ನೆಗಡಿ, ಕೆಮ್ಮು, ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕಾಡಶೆಟ್ಟಿಹಳ್ಳಿಯ 56 ವರ್ಷದ ಪುರುಷ, ಬಾಗಲಕೋಟೆ ಜಿಲ್ಲೆಯ 50 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    ಅಂಬೇಡ್ಕರ್ ಓಣಿ ಸೀಲ್​ಡೌನ್: ಯುವಕನೊಬ್ಬನಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕುಂದಗೋಳ ಪಟ್ಟಣದ ಅಂಬೇಡ್ಕರ್ ಓಣಿಯನ್ನು ತಾಲೂಕಾಡಳಿತ ಬುಧವಾರ ಸೀಲ್​ಡೌನ್ ಮಾಡಿದೆ. ಇದರಿಂದ ಪಟ್ಟಣದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳನ್ನು ನಿಷೇಧಿಸಲಾಗಿದೆ. ಮಾರುಕಟ್ಟೆಗೆ ಹೊಂದಿಕೊಂಡಿರುವ ಪಪಂ 5ನೇ ವಾರ್ಡ್​ನ ತೆಗ್ಗಿನಕೇರಿ ಓಣಿಯ ಎಲ್ಲ ರಸ್ತೆಗಳನ್ನು ವಾರ್ಡ್ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಹಾಗೂ ನಿವಾಸಿಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ.

    ಬಸ್ತಿ, ಜೋಶಿ ಪ್ಲಾಟ್ ಸೀಲ್​ಡೌನ್: ನವಲಗುಂದ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದ ಕರೊನಾ ಈಗ ನವಲಗುಂದ ಪಟ್ಟಣಕ್ಕೂ ವಕ್ಕರಿಸಿದೆ. ಇದರಿಂದ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಪಟ್ಟಣದ ಜೋಶಿ ಪ್ಲಾಟ್​ನ ನಿವಾಸಿ 36 ವರ್ಷದ ಮಹಿಳೆಗೆ ಡಯಾಲಿಸಿಸ್, ಮಧುಮೇಹವಿತ್ತು. ಚಿಕಿತ್ಸೆಗಾಗಿ ನವಲಗುಂದ ತಾಲೂಕಾಸ್ಪತ್ರೆಗೆ ತೆರಳಿದಾಗ ಅಲ್ಲಿಗೆ ಬಂದಿದ್ದ ತಾಲೂಕಿನ ಗುಡಿಸಾಗರ ಗ್ರಾಮದ ಕರೊನಾ ಸೋಂಕುಳ್ಳ 12 ವರ್ಷದ ಬಾಲಕಿ (ಜೂ. 25ರಂದು ದೃಢ) ಸಂಪರ್ಕದಿಂದ ಇವರಿಗೆ ಕೋವಿಡ್ ಸೋಂಕು ಬಂದಿರಬಹುದು ಎನ್ನಲಾಗಿದೆ. ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಪಟ್ಟಣದ ಬಸ್ತಿ ಪ್ಲಾಟ್​ನ ನಿವಾಸಿ 21 ವರ್ಷದ ಪುರುಷನು ಹುಬ್ಬಳ್ಳಿ ಕಿಮ್ಸ್​ಗೆ ಚಿಕಿತ್ಸೆ ಪಡೆಯಲು ಹೋದಾಗ ಕರೊನಾ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರಿಬ್ಬರಿಗೆ ಕರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕಾಡಳಿತ, ಪುರಸಭೆ ಅಧಿಕಾರಿಗಳು ಪಟ್ಟಣದ ಬಸ್ತಿ ಪ್ಲಾಟ್ ಮತ್ತು ಜೋಶಿ ಪ್ಲಾಟ್ ಪ್ರದೇಶದ ಮುಖ್ಯ ರಸ್ತೆಗಳಿಗೆ ತಗಡುಗಳನ್ನು ಜಡಿದು ಸಂಪೂರ್ಣ ಸೀಲ್​ಡೌನ್ ಮಾಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ಚಂದ್ರಶೇಖರಯ್ಯ ಮಠಪತಿ, ಪಿಎಸ್​ಐ ಜಯಪಾಲ ಪಾಟೀಲ, ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ. ರೂಪಾ ಕಿಣಗಿ, ಪುರಸಭೆ ಮುಖ್ಯಾಧಿಕಾರಿ ಎನ್.ಎಚ್. ಖುದಾವಂದ ಅವರು ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

    ಗುತ್ತಿಗೆ ನೌಕರಳಿಗೆ ಕರೊನಾ ಸೋಂಕು: ಧಾರವಾಡ ಜಿ.ಪಂ. ಗುತ್ತಿಗೆ ಮಹಿಳಾ ನೌಕರಳಿಗೆ ಬುಧವಾರ ಕರೊನಾ ಸೋಂಕು ದೃಢಪಟ್ಟಿದೆ. ಗುತ್ತಿಗೆ ಆಧಾರದಲ್ಲಿ ಉದ್ಯೋಗಿಯಾಗಿರುವ ಮಹಿಳಾ ಸಿಬ್ಬಂದಿಗೆ ಕೋವಿಡ್ ಬಂದ ಹಿನ್ನೆಲೆಯಲ್ಲಿ ಜಿ.ಪಂ. ಕಚೇರಿಗೆ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಯಿತು. ಕಂಪ್ಯೂಟರ್ ಆಪರೇಟರ್ ಆಗಿರುವ ಮಹಿಳಾ ಉದ್ಯೋಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರೊಂದಿಗೆ ಹಲವರು ಸಂಪರ್ಕದಲ್ಲಿದ್ದು, ಕರೊನಾ ಆತಂಕ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿ.ಪಂ. ಕಚೇರಿಗೆ ಸ್ಯಾನಿಟೈಸೇಷನ್ ಮಾಡಲಾಗಿದೆ. ಕೆಲಕಾಲ ಕಚೇರಿ ಕೆಲಸ ಸ್ಥಗಿತಗೊಂಡಿದ್ದರೂ ನಂತರ ಎಂದಿನಂತೆ ಕಾರ್ಯ ನಿರ್ವಹಿಸಲಾಯಿತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts