More

    ಒಂದೇ ದಿನ ತ್ರಿಶತಕ ಬಾರಿಸಿದ ಕರೊನಾ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಭಾನುವಾರ ಒಂದೇ ದಿನ 300 ಜನರಿಗೆ ಸೋಂಕು ದೃಢಪಟ್ಟಿದೆ. 214 ಮಂದಿ ಗುಣವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

    ಈವರೆಗೆ 5456 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 3675 ಜನರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 119 ಜನರು ಕರೊನಾದಿಂದ ಮೃತಪಟ್ಟಿದ್ದಾರೆ. 1662 ಸಕ್ರಿಯ ಪ್ರಕರಣಗಳಿವೆ. 1263 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 399ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಒಂದು ವಾರದಿಂದ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿತ್ಯವೂ ನೂರಕ್ಕಿಂತ ಹೆಚ್ಚು ಜನರಿಗೆ ಸೋಂಕು ವಕ್ಕರಿಸುತ್ತಿದೆ. ಭಾನುವಾರ ಪುರಸಭೆ ಸಿಬ್ಬಂದಿ, ಡಿಸಿ ಕಚೇರಿ, ತಾಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.

    ಶಿಗ್ಗಾಂವಿಯಲ್ಲಿ 41, ಬ್ಯಾಡಗಿಯಲ್ಲಿ 26, ರಾಣೆಬೆನ್ನೂರಲ್ಲಿ 72, ಹಾವೇರಿಯಲ್ಲಿ 60, ಹಿರೇಕೆರೂರಲ್ಲಿ 51, ಹಾನಗಲ್ಲನಲ್ಲಿ 21, ಸವಣೂರಲ್ಲಿ 14 ಹಾಗೂ ಇತರ 15 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾದ ಬ್ಯಾಡಗಿಯ 9, ಹಾನಗಲ್ಲನ 110, ಹಾವೇರಿಯ 8, ರಾಣೆಬೆನ್ನೂರಿನ 59, ಶಿಗ್ಗಾಂವಿಯ 28 ಜನರು ಹಾಗೂ ಇತರ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಹಾನಗಲ್ಲ ಪುರಸಭೆಯ ಇಬ್ಬರಿಗೆ ಪಾಸಿಟಿವ್: ಜಿಲ್ಲಾಡಳಿತದ ನಿರ್ದೇಶನದಂತೆ ಹಾನಗಲ್ಲ ಪುರಸಭೆಯ ಪೌರಕಾರ್ವಿುಕರು, ಕುಡಿಯುವ ನೀರು ಸರಬರಾಜು ಹಾಗೂ ಇತರ ಸಿಬ್ಬಂದಿಗೆ ಕರೊನಾ ತಪಾಸಣೆ ಕೈಗೊಳ್ಳಲಾಯಿತು.

    ಪಟ್ಟಣದ ಪುರಸಭೆಯಲ್ಲಿ ಎಲ್ಲ ವಿಭಾಗಗಳಲ್ಲಿ 75ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತದ ನಿರ್ದೇಶನದಂತೆ ಸ್ಥಳೀಯ ಆರೋಗ್ಯ ಇಲಾಖೆಯಿಂದ ಎಲ್ಲರ ಸ್ವ್ಯಾಬ್ ಪಡೆದು ಪರೀಕ್ಷೆಗೊಳಪಡಿಸಲಾಯಿತು. ಇಬ್ಬರ ವರದಿ ಕರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಪುರಸಭೆಯ ಆವರಣದಲ್ಲಿಯೇ ಭಾನುವಾರ 50ಕ್ಕೂ ಅಧಿಕ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಲಾಗಿದೆ. ಇವರಿಂದ ಪಡೆದ ಸ್ವ್ಯಾಬ್ ಮಾದರಿಗಳನ್ನು ತಪಾಸಣೆಗಾಗಿ ಬೆಳಗಾವಿಗೆ ರವಾನಿಸಲಾಗಿದೆ. ಮೂರು ದಿನಗಳಲ್ಲಿ ವರದಿ ಬರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಬ್ಯಾಡಗಿಯಲ್ಲಿ ಉಚಿತ ಕರೊನಾ ಪರೀಕ್ಷೆ ಕೇಂದ್ರ ಆರಂಭ

    ಬ್ಯಾಡಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಬಳಿ ಸಾರ್ವಜನಿಕರಿಗೆ ಉಚಿತ ಕರೊನಾ ಪರೀಕ್ಷೆ ಕೇಂದ್ರ ಆರಂಭಿಸಲಾಗಿದೆ. ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ತಿಳಿಸಿದರು. ಕರೊನಾ ಪರೀಕ್ಷೆ ಕೇಂದ್ರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಉಚಿತ ರೋಗ ತಪಾಸಣೆ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ನಿರ್ಭಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಈ ಕುರಿತು ಎಲ್ಲ ವಾರ್ಡ್​ಗಳಲ್ಲಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts