More

    ಒಂದೇ ದಿನ ಐವರಲ್ಲಿ ಸೋಂಕು ಪತ್ತೆ!

    ಗದಗ: ಜಿಲ್ಲೆಯಲ್ಲಿ ಸೋಮವಾರ ಐದು ಹೊಸ ಕರೊನಾ ಪಾಸಿಟಿವ್ ಕೇಸ್​ಗಳು ದೃಢಪಟ್ಟಿದ್ದು, ಜನರು ಬೆಚ್ಚಿಬೀಳುವಂತಾಗಿದೆ. ಸೋಂಕಿತರ ಪೈಕಿ ನಾಲ್ವರು ನಗರದ ಗಂಜಿ ಬಸವೇಶ್ವರ ವೃತ್ತದ ಪ್ರದೇಶದ ನಿವಾಸಿಗಳಾಗಿದ್ದಾರೆ. ಇನ್ನೊಬ್ಬರು ಶಿರಹಟ್ಟಿ ತಾಲೂಕಿನ ವ್ಯಕ್ತಿ.

    ಹೀಗಾಗಿ, ಗದಗನ ಗಂಜಿ ಬಸವೇಶ್ವರ ವೃತ್ತದ ಪ್ರದೇಶ ಕರೊನಾ ವೈರಸ್ ಹಾಟ್​ಸ್ಪಾಟ್ ಆಗಿ ಪರಿವರ್ತನೆಯಾಗತೊಡಗಿದೆ. ಲಾಕ್​ಡೌನ್ ಸಡಿಲಿಕೆಯಿಂದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿರುವಾಗಲೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಜನರಲ್ಲಿ ಭಯ ಹೆಚ್ಚಿಸಿದೆ.

    ನಗರದ ಗಂಜಿಬಸವೇಶ್ವರ ವೃತ್ತದ ಪ್ರದೇಶದ ರೋಗಿ ಪಿ 913 ಸಂಪರ್ಕದಿಂದ 33 ವರ್ಷದ ಪಿ 1179 ಮತ್ತು 58 ವರ್ಷದ ಪಿ 1180 ವ್ಯಕ್ತಿಗೆ ಸೋಂಕು ತಗುಲಿದೆ. ಜತೆಗೆ ಕಂಟೇನ್ಮೆಂಟ್ ವಲಯದಲ್ಲಿ ಸಂಚರಿಸಿದ್ದರಿಂದ 32 ವರ್ಷದ ಪಿ 1181 ಮತ್ತು 12 ವರ್ಷದ ಬಾಲಕ ಪಿ 1182ಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನ ಚೆನ್ನೈನಿಂದ ಮೇ 12ರಂದು ಜಿಲ್ಲೆಗೆ ಆಗಮಿಸಿ ಶಿರಹಟ್ಟಿ ಪಟ್ಟಣದ ರಾಣಿ ಕಿತ್ತೂರು ಚನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿದ್ದ 30 ವರ್ಷದ ಪಿ 1178 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಜಿಮ್್ಸ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಿಲ್ಲೆಯಲ್ಲಿ 11 ಸಕ್ರಿಯ ಪ್ರಕರಣಗಳು: ಮೇ 12 ರಂದು ತಮಿಳುನಾಡಿನ ಚೆನ್ನೈನಿಂದ 17 ಜನ ಜಿಲ್ಲೆಯ ಶಿರಹಟ್ಟಿಗೆ ಆಗಮಿಸಿದ್ದರು. ಬಂದ ತಕ್ಷಣವೇ ಅವರೆಲ್ಲರನ್ನೂ ಹಾಸ್ಟೆಲ್​ನಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿತ್ತು. ಈ ಪೈಕಿ ಒಬ್ಬರಿಗೆ (ಪಿ 1178) ಸೋಂಕು ದೃಢಪಟ್ಟಿದೆ. ಜತೆಗೆ ನಗರದ ಕಂಟೇನ್ಮೆಂಟ್ ವಲಯ ಗಂಜಿ ಬಸವೇಶ್ವರ ವೃತ್ತದ ನಾಲ್ವರಿಗೆ ಸೋಂಕು ದೃಢ ಪಟ್ಟಿದ್ದು, ಎಲ್ಲರಿಗೂ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಜಿ ಬಸವೇಶ್ವರ ಕಂಟೇನ್ಮೆಂಟ್ ವಲಯದ ನಾಲ್ವರು ಸೋಂಕಿತರೊಂದಿಗೆ ಪ್ರಥಮ ಸಂಪರ್ಕ ಹೊಂದಿದ 20 ಜನರನ್ನು ಈಗಾಗಲೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 17 ಕರೊನಾ ವೈರಸ್ ಪತ್ತೆಯಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಐವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 11 ಸಕ್ರಿಯ ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ.

    ಗುಜರಾತಿನಿಂದ ಬಂದವರ ಪರೀಕ್ಷೆ: ಗುಜರಾತಿನ ಅಹಮದಾಬಾದ್​ನಿಂದ ಮತ್ತೆ ಮೇ 17ರಂದು ಜನರು ನಗರಕ್ಕೆ ಆಗಮಿಸಿದ್ದು, ಎಲ್ಲರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈಗಾಗಲೇ ಗುಜರಾತಿನಿಂದ ಜಿಲ್ಲೆಗೆ ಬಂದಿದ್ದ 25 ಜನರ ಪೈಕಿ 5 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದ 20 ಜನರ ವೈದ್ಯಕೀಯ ವರದಿ ನಕಾರಾತ್ಮಕವಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಕ್ವಾರಂಟೈನ್ ಕೇಂದ್ರದಲ್ಲಿಲ್ಲ ಭದ್ರತೆ

    ಶಿರಹಟ್ಟಿ: ತಾಲೂಕಿನ ಒಬ್ಬ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಸ್ಥಳೀಯರಲ್ಲಿ ಆತಂಕದ ಕಾಮೋಡ ಕವಿದಿದೆ. ಉದ್ಯೋಗ ಅರಸಿ ಚೆನ್ನೈಗೆ ಹೋಗಿದ್ದ ತಾಲೂಕಿನ ಶ್ರೀಮಂತಗಡ ಗ್ರಾಮದ 17 ಜನ ಮೇ 12ರಂದು ಶಿರಹಟ್ಟಿ ಪಟ್ಟಣಕ್ಕೆ ಬಂದಿದ್ದರು. ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಪಟ್ಟಣದ ಹೊರವಲಯದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಆಗಾಗ ತಪಾಸಣೆ ಮಾಡುತ್ತಿದ್ದರು.

    ಮೊದಲು ತಪಾಸಣೆ ಮಾಡಿದಾಗ ವ್ಯಕ್ತಿಯೊಬ್ಬನ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೆ, ಭಾನುವಾರ ಮತ್ತೆ ಅವರ ರಕ್ತದ ಮಾದರಿ, ಗಂಟಲ ದ್ರವ ಪರೀಕ್ಷಿಸಿದಾಗ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಗದಗ ಜಿಮ್್ಸ ಆಸ್ಪತ್ರೆಗೆ ದಾಖಲು ಮಾಡಿ, ಉಳಿದವರನ್ನು ಚನ್ನಮ್ಮ ವಸತಿ ಶಾಲೆಯಲ್ಲೇ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿಗೆ ಊಟ ಕೊಟ್ಟಿದ್ದ ತಾಯಿ: ಚೆನ್ನೈನಿಂದ ಒಟ್ಟಿಗೆ ಬಂದ 17 ಜನರ ಪೈಕಿ 6 ಜನರನ್ನು ಮಾತ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಉಳಿದಂತೆ ಮಕ್ಕಳು ಹಾಗೂ ಮಹಿಳೆಯರ ತಪಾಸಣೆ ಮಾಡಿರಲಿಲ್ಲ. ಅಷ್ಟೇ ಅಲ್ಲ, ಸೋಂಕು ದೃಢಪಟ್ಟ ವ್ಯಕ್ತಿಯ ತಾಯಿ ಎರಡು ದಿನಗಳ ಹಿಂದಷ್ಟೇ ಶ್ರೀಮಂತಗಡದಿಂದ ಬಂದು ಊಟ ಕೊಟ್ಟು ಹೋಗಿದ್ದರು. ಅಲ್ಲದೆ, ಕ್ವಾರಂಟೈನ್​ನಲ್ಲಿ ಇದ್ದವರು ಕೂಡ ನಿಯಮ ಪಾಲನೆ ಮಾಡದೆ ತಮ್ಮ ಮಕ್ಕಳಿಗೆ ತಿನಿಸು ಖರೀದಿಸಲು ಪಕ್ಕದ ವರವಿ, ಶಿರಹಟ್ಟಿಗೆ ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.ಚೆನ್ನೈನಿಂದ ಬಂದ 17 ಜನರಲ್ಲಿ 6 ಜನರನ್ನು ಮಾತ್ರ ತಪಾಸಣೆಗೊಳಪಡಿಸಿ ಉಳಿದವರನ್ನು ಬಿಟ್ಟಿದ್ದು ಯಾಕೆ..? ಸೋಂಕು ದೃಢಪಟ್ಟ ವ್ಯಕ್ತಿಯ ತಾಯಿ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆ ಕ್ವಾರಂಟೈನ್ ಸ್ಥಳಕ್ಕೆ ಬಂದಾಗ ಒಳ ಪ್ರವೇಶಿಸಲು ಅವಕಾಶ ನೀಡಿದವರು ಯಾರು? ಕ್ವಾರಂಟೈನ್​ನಲ್ಲಿ ಇದ್ದವರಿಗೆ ಹೊರಗೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದು ಯಾರು? ಸೋಂಕಿತ ವ್ಯಕ್ತಿಯ ತಾಯಿ ಮಗನನ್ನು ಭೇಟಿಯಾಗಿ ಊರಿಗೆ ಹೋಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಅವರ ಗತಿ ಏನು ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಮುಖ್ಯವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಯಾವುದೇ ರೀತಿಯ ಬಿಗಿ ಭದ್ರತೆ ಇಲ್ಲ. ಇದರಿಂದ ಜನರಲ್ಲಿ ಭಯ ಆವರಿಸಿದೆ ಎಂದು ತಾಲೂಕು ಕರವೇ ಅಧ್ಯಕ್ಷ ಬಸವರಾಜ ವಡವಿ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts