More

    ಒಂದೇ ತಾಣದಲ್ಲಿ ಸಗಟು ವ್ಯಾಪಾರಕ್ಕೆ ಅವಕಾಶಕೊಡಿ, ದಾಸನಪುರ ಹೋಬಳಿ ವರ್ತಕರ ಆಗ್ರಹ

    ನೆಲಮಂಗಲ: ಬೆಂಗಳೂರಿನಲ್ಲಿ ಒಂದೇ ಕಡೆ ಎಲ್ಲ ವಸ್ತುಗಳ ಸಗಟು ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಹಳ್ಳಿಯ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಬುಧವಾರ ದಾಸನಪುರ ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು.

    ಈರುಳ್ಳಿ, ಆಲೂಗೆಡ್ಡೆ, ಬೆಳ್ಳುಳ್ಳಿ ಹಾಗೂ ಎಲ್ಲ ತರಕಾರಿಗಳನ್ನು ಯಶವಂತಪುರ ಮತ್ತು ದಾಸನಪುರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಎರಡು ಮಾರುಕಟ್ಟೆ ಮಾಡುವುದರಿಂದ ಸಾಕಷ್ಟು ನಷ್ಟವಾಗುತ್ತಿದೆ. ಆದ್ದರಿಂದ, ಒಂದೇ ಮಾರುಕಟ್ಟೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಆಡಳಿತ ಮಂಡಳಿ ವ್ಯವಸ್ಥಾಪಕ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.

    ಕರೊನಾ ಪಿಡುಗಿನಿಂದಾಗಿ ಯಶವಂತಪುರ ಮಾರುಕಟ್ಟೆಯನ್ನು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿತ್ತು. ಅದರಂತೆ ವರ್ತಕರು ದಾಸನಪುರ ಮಾರುಕಟ್ಟೆಯಲ್ಲಿ ಪರವಾನಗಿ ಪಡೆದು ವ್ಯಾಪಾರ ಮಾಡುತ್ತಿದ್ದರು. ಈ ಮಧ್ಯೆ ಸರ್ಕಾರ ಯಶವಂತಪುರದಲ್ಲಿ ಪರವಾನಗಿ ಪಡೆದ ವರ್ತಕರಿಗೆ ದಾಸನಪುರ ಹಾಗೂ ಯಶವಂತಪುರ ಎರಡೂ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿತು. ಅದರೆ ದಾಸನಪುರ ಮಾರುಕಟ್ಟೆಯಲ್ಲಿ ಪರವಾನಗಿ ಪಡೆದ ವರ್ತಕರು ದಾಸನಪುರದಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ಸೀಮಿತಗೊಳಿಸಲಾಯಿತು. ಇದರಿಂದ ವರ್ತಕರಿಗೆ ಅನ್ಯಾಯವಾಗುತ್ತಿದೆ ಎಂದು ಜೆಡಿಎಸ್ ವಕ್ತಾರ ಎಚ್.ಎನ್. ದೇವರಾಜು ಆಕ್ರೋಶ ವ್ಯಕ್ತಪಡಿಸಿದರು.

    ರೈತರು ಸಹಜವಾಗಿ ಯಶವಂತಪುರ ಮಾರುಕಟ್ಟೆ ತೆರಳುತ್ತಿದ್ದಾರೆ. ದಾಸನಪುರ ಮಾರುಕಟ್ಟೆಯಲ್ಲಿ ಪರವಾನಗಿ ಪಡೆದವರಿಗೆ ನಷ್ಟವಾಗುತ್ತಿದೆ. ಸರ್ಕಾರ 2 ಮಾರುಕಟ್ಟೆಗಳ ಬದಲು ಏಕ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

    ಮುಖ್ಯಮಂತ್ರಿ ನಿವಾಸಕ್ಕೆ ಜಾಥಾ: ದಾಸನಪುರದಲ್ಲಿ ವ್ಯಾಪಾರ ನಡೆಸಲು ಪರವಾನಗಿ ಪಡೆದ ವರ್ತಕರನ್ನು ದಾಸನಪುರಕ್ಕೆ ಮಾತ್ರವೇ ಸೀಮಿತಗೊಳಿಸುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವರ್ತಕರು ಕುಟುಂಬಸ್ಥರೊಂದಿಗೆ ಮಾರುಕಟ್ಟೆಯಿಂದ ಸಿಎಂ ನಿವಾಸದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ದಾಸನಪುರ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬಿ.ಆರ್. ಶ್ರೀರಾಮ್‌ರೆಡ್ಡಿ ಎಚ್ಚರಿಕೆ ನೀಡಿದರು.
    ಸಂಘದ ಖಜಾಂಚಿ ಧಾನು ಬಿರಾದರ್, ಜಿ.ಕೆ.ಪಿ. ಗೌಡ, ಸದಸ್ಯ ಪ್ರಸನ್ನ, ಚನ್ನಗೌಡ, ದೊರೆಸ್ವಾಮಿ, ಹರ್ಷ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts