More

    ಒಂದು ಸರಳ ಪ್ರೇಮಕಥೆ ಫೆ.8 ರಂದು ಬಿಡುಗಡೆ -ನಟ ವಿನಯ್ ರಾಜಕುಮಾರ್ ಮಾಹಿತಿ

    ದಾವಣಗೆರೆ: ನಾಯಕನಟನಾಗಿ ನಟಿಸಿದ ನಾಲ್ಕನೇ ಸಿನಿಮಾ ಒಂದು ಸರಳ ಪ್ರೇಮಕಥೆ ಫೆ.8ರಂದು ಬಿಡುಗಡೆಯಾಗಲಿದ್ದು, ಇದೊಂದು ರೋಮ್ಯಾನ್ಸ್ ಮತ್ತು ಹಾಸ್ಯಪ್ರಧಾನ ಚಿತ್ರವಾಗಿದೆ ಎಂದು ಚಿತ್ರನಟ ವಿನಯ್ ರಾಜಕುಮಾರ್ ಹೇಳಿದರು.
    ತುಂಬ ಚಿಂತೆ ಮಾಡಿದರೆ ಜೀವನ ವಿರಳವಾಗಿರಲಿದೆ, ಯೋಚನೆ ಕಡಿಮೆ ಮಾಡಿದರೆ ಸರಳವಾಗಿರಲಿದೆ. ಇದಕ್ಕಾಗಿ ಚಿತ್ರಕ್ಕೆ ವಿಶೇಷ ಶೀರ್ಷಿಕೆ ಇರಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಮೂರು ವರ್ಷದ ನಂತರ ನನ್ನ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ನಟಿಸುವುದೇ ಖುಷಿ. ಇದೇ ಮೊದಲ ಬಾರಿಗೆ ಕಾಮಿಡಿ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರ ಹಾಸ್ಯಪ್ರಧಾನವಾದರೂ ಪ್ರೇಕ್ಷಕರಿಗೆ ಕಡೆಯವರೆಗೂ ಕುತೂಹಲ ಮೂಡಿಸಲಿದೆ ಎಂದರು.
    ಸಿಂಪಲ್ಲಾಗೊಂದು ಲವ್ ಸ್ಟೋರಿ ಮತ್ತು ಈ ಸಿನಿಮಾ ಎರಡೂ ಪ್ರೇಮಕಥೆಯೇ ಆದರೂ ಚಿತ್ರದ ಸಾಹಿತ್ಯ ಬೇರೆ ಬೇರೆ. ಹೇಳುವ ವಿಧಾನವೂ ಬೇರೆಯದಾಗಿದೆ. ಇದು ಎಲ್ಲರೂ ಕೂತು ನೋಡುವ ಮನರಂಜನಾತ್ಮಕ ಸಿನಿಮಾ. ಚಿತ್ರ ನೋಡಿ ಹೊರಬರುವಾಗ ಖುಷಿ ಇರಲಿದೆ ಎಂದು ಹೇಳಿದರು.
    ಚಿತ್ರದ ನಿರ್ದೇಶಕ ಸುನಿ ಮಾತನಾಡಿ ಸಂಗೀತ ನಿರ್ದೇಶಕನಾಗುವ ಕನಸು ಹೊತ್ತ ಯುವಕನ ಜೀವನದ ತಿರುವುಗಳು ಚಿತ್ರದಲ್ಲಿದೆ. ನಿರ್ದಿಷ್ಟ ಸಂದೇಶವೇನೂ ಇಲ್ಲ. ಆದರೆ ಜೀವನದಲ್ಲಿ ಯಶಸ್ಸು ಸಿಗದಿದ್ದಾಗ ಜುಗುಪ್ಸೆಯಾಗಬಾರದು, ಬಂದ ಸವಾಲುಗಳನ್ನು ಎದುರಿಸಬೇಕೆಂಬುದನ್ನು ತೋರಿಸಲಾಗಿದೆ ಎಂದು ಹೇಳಿದರು.
    ಚಿತ್ರದಲ್ಲಿ ನಾಯಕನಟಿಯರಾಗಿ ಮಲ್ಲಿಕಾ ಸಿಂಗ್, ಸ್ವಾತಿಷ್ಠ ಕೃಷ್ಣನ್ ನಟಿಸಿದ್ದಾರೆ. ಒಟ್ಟು 10 ಹಾಡುಗಳಿದ್ದು ಜಯಂತ್ ಕಾಯ್ಕಿಣಿ ಇತರರು ಗೀತಸಾಹಿತ್ಯ ಒದಗಿಸಿದ್ದಾರೆ. ಹಿನ್ನೆಲೆಗಾಯಕ ಅರ್ಮಾನ್ ಮಲಿಕ್, ಪಂಚಮ್ ಜೀವ, ಕೇಶವನ್, ಬೀದರ್‌ನ ಶಿವಾನಿ ಇತರರು ಹಾಡುಗಳನ್ನು ಹಾಡಿದ್ದಾರೆ. ಸಾಧು ಕೋಕಿಲಾ, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಅತಿಶಯ್ ಇತರರು ತಾರಾಗಣದಲ್ಲಿದ್ದಾರೆ ಎಂದು ಹೇಳಿದರು.
    ಬೆಂಗಳೂರು ಚಿಕ್ಕಪೇಟೆ ಸುತ್ತಮುತ್ತ ಹಾಗೂ ರಾಜಸ್ಥಾನ, ಮುಂಬಯಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದು ಪ್ರಸನ್ನ ಎಂಬುವರ ಜೀವನ ಆಧಾರಿತ ಸಿನಿಮಾ, ಆದರೆ ನೈಜ ಕಥಾನಕವಲ್ಲ. ಎಲ್ಲೆಡೆ ಸಿನಿಮಾದ ಪ್ರಮೋಷನ್ ನಡೆಸಲಾಗುತ್ತಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದಾವಣಗೆರೆ, ಹುಬ್ಬಳ್ಳಿಯಂತಹ ನಗರಗಳಿಂದ ಸಿಗುತ್ತಿದೆ ಎಂದು ತಿಳಿಸಿದರು.
    ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕ ಬಿ.ಸಿ.ಶಿವಕುಮಾರ್ ಮಾತನಾಡಿ, ಹಾಸ್ಯಚಿತ್ರಗಳು ಎಂದಾಗ ರಾಘವೇಂದ್ರ ರಾಜಕುಮಾರ್ ಅವರು ನೆನಪಾಗುತ್ತಾರೆ. ಅವರ ಪುತ್ರ ವಿನಯ್ ರಾಜಕುಮಾರ್ ಬಗ್ಗೆಯೂ ಹೆಚ್ಚಿನ ನಿರೀಕ್ಷೆ ಇದೆ. ಅವರ ಈ ಚಿತ್ರವೂ ಯಶಸ್ಸು ಕಾಣಲಿ ಎಂದು ಆಶಿಸಿದರು.
    ಇನ್ನೊಬ್ಬ ಮಾಲೀಕ ಬಿ.ಎಸ್. ಮೃನಾಲ್ ಮಾತನಾಡಿ, ಸಮೀಪದ ಹಾಸ್ಟೆಲ್‌ನಲ್ಲಿ ಸುಮಾರು 200 ಯುವಕರಿಗೆ ಪ್ರತಿ ಸೋಮವಾರ ರಾತ್ರಿ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದೇವೆ. ಎಲ್ಲ ಚಿತ್ರಗಳನ್ನು ಖರೀದಿಸಿಯೇ ಪ್ರದರ್ಶಿಸುವ ಇರಾದೆಯನ್ನೇ ಮುಂದುವರಿಸಿದ್ದೇವೆ. ಈ ಮನೋಭಾವ ಎಲ್ಲರಲ್ಲೂ ಬಂದರೆ ಪೈರಸಿ ಕಾಟ ಇರುವುದಿಲ್ಲ ಎಂದರು.
    ದೀಪಾ ಶಿವಕುಮಾರ್, ಚಿತ್ರದ ನಿರ್ಮಾಪಕ ಮೈಸೂರು ರಮೇಶ್, ಸಹನಟ ಜಾನ್ ಮಂಜು ಇತರರಿದ್ದರು.
    ಚೇತನಾ ಹೋಟೆಲ್ ರಸ್ತೆಯಲ್ಲಿನ, ಬಿ.ಎಸ್.ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಅಂಗಡಿ(ಪುರುಷರ ವಿಭಾಗ)ಯು ಯಶಸ್ವಿ 10 ವರ್ಷ ಪೂರೈಸಿದ್ದು ನವೀಕೃತ ಶೋ ರೂಂ ಅನ್ನು ಚಿತ್ರನಟ ವಿನಯ್ ರಾಜಕುಮಾರ್, ಸುದ್ದಿಗೋಷ್ಠಿಗೂ ಮುನ್ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ವಿನಯ್, ದಾವಣಗೆರೆ ಜನರು ಹೊಸ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts